ಉಡುಪಿ[ಡಿ.14]: ಪ್ರಥಮ ಬಾರಿಗೆ, ಉಡುಪಿಯ ಕೃಷ್ಣ ಮಠದಲ್ಲಿ ಷಷ್ಠಿಯ ಪ್ರಯುಕ್ತ ನಡೆಯುವ ಎಡೆಸ್ನಾನ ಗುರುವಾರ ನಡೆಯಲಿಲ್ಲ. ತಿನ್ನುವ ಅನ್ನದ ಮೇಲೆ ಭಕ್ತರು ಉರುಳಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಈ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಕೃಷ್ಣಮಠದೊಳಗೆ ಇರುವ ಸುಬ್ರಹ್ಮಣ್ಯ ಗುಡಿಯ ಮುಂಭಾಗದಲ್ಲಿ ಅನಾದಿಕಾಲದಿಂದಲೂ ಭಕ್ತರು ಊಟ ಮಾಡಿದ ಎಂಜಲಿನ ಮೇಲೆ ಉರುಳಾಡುವ ಮಡೆಸ್ನಾನ ನಡೆಯುತ್ತಿತ್ತು. ಈ ಬಗ್ಗೆ ವಿವಾದ ಉಂಟಾದಾಗ, ಪೇಜಾವರ ಶ್ರೀಗಳು ಮೂರು ವರ್ಷಗಳ ಹಿಂದೆ ತಮ್ಮ ಪರ್ಯಾಯದ ಅವಧಿಯಲ್ಲಿ, ಎಂಜಲಿನ ಬದಲು ದೇವರ ಪ್ರಸಾದ ಅನ್ನದ ಮೇಲೆ ಉರುಳಾಡುವ ಎಡೆಸ್ನಾನ ಜಾರಿಗೆ ತಂದಿದ್ದರು. ಆದರೆ ಈಗಿನ ಪರ್ಯಾಯ ಪಲಿಮಾರು ಶ್ರೀಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನ್ನದ ಮೇಲೆ ಉರುಳಾಡುವುದಕ್ಕೂ ಬ್ರೇಕ್‌ ಹಾಕುವ ದಿಟ್ಟನಿರ್ಧಾರ ತೆಗೆದುಕೊಂಡಿದ್ದಾರೆ.

ಹಿಂದೆ ಮಡೆಸ್ನಾನ ನಡೆಯುತ್ತಿದ್ದಾಗ ವಿವಾದ ಉಂಟಾಗಿತ್ತು, ನಂತರ ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿದೆ, ತಿನ್ನುವ ಅನ್ನದ ಮೇಲೆ ಉರುಳಾಡಿ ಅದನ್ನು ವ್ಯರ್ಥ ಮಾಡುವುದು ಸರಿಯಲ್ಲ. ಆದ್ದರಿಂದ ಅನಗತ್ಯ ವಿವಾದ ಬೇಡ ಎಂಬ ಕಾರಣಕ್ಕೆ ಎಡೆಸ್ನಾನಕ್ಕೆ ಅವಕಾಶ ನೀಡಿಲ್ಲ ಎಂದವರು ಹೇಳಿದ್ದಾರೆ.

ಆದರೆ ಒಬ್ಬ ಮಹಿಳೆ ಮಾತ್ರ ತಾವು ಹೊತ್ತುಕೊಂಡಿದ್ದ ಹರಕೆಯಂತೆ ಗುರುವಾರ ಸುಬ್ರಹ್ಮಣ್ಯ ಗುಡಿಯ ಸುತ್ತು ಉರುಳು ಸೇವೆ ನಡೆಸಿದರು. ಸುಬ್ರಹ್ಮಣ್ಯ ಗುಡಿಯ ಸುತ್ತ ಷಷ್ಠಿಯ ಪ್ರಸಾದದ ರೂಪದಲ್ಲಿ ಊಟ ಬಡಿಸಲಾಗುತ್ತಿತ್ತು, ಅದನ್ನು ಈ ಬಾರಿ ಕೃಷ್ಣಮಠದ ಭೋಜನ ಶಾಲೆಯಲ್ಲೇ ವ್ಯವಸ್ಥೆ ಮಾಡಲಾಗಿತ್ತು.

ಬೇರೆಡೆ ಎಡೆಸ್ನಾನ ನಡೆಯಿತು: ಉಡುಪಿ ಜಿಲ್ಲೆಯ ಎಲ್ಲ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಗುರುವಾರ ಸಂಭ್ರಮದಿಂದ ಷಷ್ಠಿ ಆಚರಣೆ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಪೇಜಾವರ ಮಠಕ್ಕೆ ಸೇರಿದ ಮುಚ್ಚಿಲಕೋಡು ಶ್ರೀ ಸುಬ್ರಹ್ಮಣ್ಯ ದೇವಾಲಯವೂ ಸೇರಿ ಬಹುತೇಕ ಎಲ್ಲ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಭಕ್ತರು ಎಡೆಸ್ನಾನ ನಡೆಸಿದರು.

ಪೇಜಾವರ ಶ್ರೀಗಳ ಶ್ಲಾಘನೆ

ಈ ಬಾರಿ ಕೃಷ್ಣಮಠದಲ್ಲಿ ಎಡೆಸ್ನಾನ ಮತ್ತು ಮಡೆಸ್ನಾನ ಎರಡಕ್ಕೂ ಅವಕಾಶ ನೀಡದಿರುವ ಪಲಿಮಾರು ಶ್ರೀಗಳ ನಿರ್ಧಾರ ಸ್ವಾಗತಿಸುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಎಡೆಸ್ನಾನ-ಮಡೆಸ್ನಾನದಲ್ಲಿ ಜಾತಿ ಪ್ರಸ್ತಾಪದಿಂದ ವಿರೋಧ ವ್ಯಕ್ತವಾಗುತ್ತಿದೆ, ಕಳೆದ ಕೆಲ ವರ್ಷಗಳಿಂದ ಎಡೆಸ್ನಾನಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ಮಡೆಸ್ನಾನ ಅಥವಾ ಎಡೆಸ್ನಾನಗಳು ಅನಿವಾರ್ಯ ಅಲ್ಲ, ಇದರಿಂದ ಹಿಂದೂ ಧರ್ಮಕ್ಕೆ ಯಾವುದೇ ಲಾಭ ಇಲ್ಲ. ದೇವಸ್ಥಾನಗಳಲ್ಲಿ ಉತ್ಸವ, ಪೂಜೆ ಇತ್ಯಾದಿಗಳು ಶಾಸ್ತ್ರಬದ್ಧವಾಗಿ ನಡೆದರೆ ಸಾಕು. ಘರ್ಷಣೆಗೆ ಎಡೆ ಮಾಡುವ ಆಚರಣೆ ನಮಗೆ ಬೇಡ. ಶಾಸ್ತ್ರಾಧಾರಗಳಿಲ್ಲದ ಇಂತಹ ವಿವಾದ-ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಆಚರಣೆಗಳು ನಿಂತರೆ ಹಿಂದೂ ಧರ್ಮಕ್ಕೂ ನಷ್ಟವಿಲ್ಲ ಎಂದವರು ಹೇಳಿದ್ದಾರೆ.