15 ವರ್ಷ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಕಡಿತ: ಇಂದಿನಿಂದಲೇ ಜಾರಿ
ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ಪರಿಷ್ಕರಣೆ ಮಾಡಿರುವ ಆದೇಶ ಸೋಮವಾರದಿಂದ (ಏ.1) ಜಾರಿಯಾಗಲಿದ್ದು, 100 ಯುನಿಟ್‌ಗಿಂತ ಹಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ 1.10 ರು. ಕಡಿಮೆಯಾಗಲಿದೆ.
ಬೆಂಗಳೂರು (ಏ.01): ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ಪರಿಷ್ಕರಣೆ ಮಾಡಿರುವ ಆದೇಶ ಸೋಮವಾರದಿಂದ (ಏ.1) ಜಾರಿಯಾಗಲಿದ್ದು, 100 ಯುನಿಟ್‌ಗಿಂತ ಹಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ 1.10 ರು. ಕಡಿಮೆಯಾಗಲಿದೆ. ತನ್ಮೂಲಕ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆಯಾದಂತಾಗಲಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್‌ಸಿ ಮಾಡಿರುವ ದರ ಪರಿಷ್ಕರಣೆ ಆದೇಶದಲ್ಲಿ ಈವರೆಗೆ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ 0-100 ವರೆಗಿನ ಯುನಿಟ್ ಹಾಗೂ 100ಕ್ಕಿಂತ ಹೆಚ್ಚು ಯುನಿಟ್ ಬಳಕೆಗೆ ಪ್ರತ್ಯೇಕವಾಗಿದ್ದ ಎಲ್.ಟಿ. ಗೃಹಬಳಕೆ ಶುಲ್ಕದ ಸ್ಲ್ಯಾಬ್ ರದ್ದುಪಡಿಸಲಾಗಿದೆ.
ಎಷ್ಟೇ ಯುನಿಟ್ ಬಳಕೆ ಮಾಡಿದರೂ ಪ್ರತಿ ಯುನಿಟ್‌ಗೆ 5.90 ರು.ಗಳಂತೆ ದರ ನಿಗದಿ ಮಾಡಿದೆ. ಜತೆಗೆ ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್ ದರ ನಿಗದಿ ಮಾಡಿದೆ. ಇದರಿಂದ 100ಕ್ಕಿಂತ ಹೆಚ್ಚು ಯುನಿಟ್ ಬಳಕೆ ಮಾಡುವವರಿಗೆ 7 ರು. ಬದಲಿಗೆ ಪ್ರತಿ ಯುನಿಟ್‌ಗೆ 5.90 ರು. ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ 15 ವರ್ಷಗಳ ಬಳಿಕ ವಿದ್ಯುತ್ ದರ ಕಡಿಮೆಯಾಗಿರುವ ಅನುಕೂಲವನ್ನು ಪಡೆಯಲಿದ್ದಾರೆ.
ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಎರಡೂ ಹೃದಯ ಒಟ್ಟಾಗಿದೆ: ಡಾ.ಸಿ.ಎನ್.ಮಂಜುನಾಥ್
ಇನ್ನು 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಈವರೆಗೆ ಪ್ರತಿ ಯುನಿಟ್‌ಗೆ 4.75 ರು. ನಿಗದಿ ಮಾಡಲಾಗಿತ್ತು. ಅದು ಸಹ 5.90 ರು.ಗೆ ಹೆಚ್ಚಳವಾಗುವುದರಿಂದ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ 1.15 ರು. ಶುಲ್ಕ ಹೆಚ್ಚಳ ಹೊರೆ ಬೀಳಲಿದೆ. ಆದರೆ, 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ಶೇ.97 ರಷ್ಟು ವಿದ್ಯುತ್ ಬಳಕೆದಾರರು ಈಗಾಗಲೇ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಇವರಿಗೆ ದರ ಏರಿಕೆ ಬಿಸಿ ತಾಗುವುದಿಲ್ಲ ಎಂಬುದು ಇಂಧನ ಇಲಾಖೆ ಅಧಿಕಾರಿಗಳ ಸ್ಪಷ್ಟನೆ.
ವಾಣಿಜ್ಯ ಬಳಕೆದಾರರೂ ನಿರಾಳ: ಇನ್ನು ಎಲ್‌ಟಿ ಸಂಪರ್ಕ ಹೊಂದಿರುವ ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯುನಿಟ್‌ಗೆ 7.75 ರು. ನಿಗದಿ ಮಾಡಿದ್ದ ಶುಲ್ಕವನ್ನು 7.25 ರು.ಗೆ (50 ಪೈಸೆ ಇಳಿಕೆ) ಇಳಿಕೆ ಮಾಡಲಾಗಿದೆ. ಎಲ್.ಟಿ. ವಾಣಿಜ್ಯ ಬಳಕೆಯ ಸಂಪರ್ಕಗಳಿಗೆ ಡಿಮ್ಯಾಂಡ್ ಆಧಾರದ ಶುಲ್ಕ ನಿಗದಿ ಮಾಡಿದ್ದು ಹಿಂದಿನ ಸ್ಲ್ಯಾಬ್ ಪದ್ಧತಿ ರದ್ದುಪಡಿಸಲಾಗಿದೆ. ಜತೆಗೆ ಪ್ರತಿ ಯುನಿಟ್‌ಗೆ 8.50 ರು. ಇದ್ದ ಬೆಲೆಯನ್ನು 8 ರು.ಗೆ ಇಳಿಕೆ ಮಾಡಿದೆ. ಹೀಗಾಗಿ ವಾಣಿಜ್ಯ ಬಳಕೆದಾರರೂ ತಕ್ಕ ಮಟ್ಟಿಗೆ ನಿರಾಳರಾದಂತಾಗಲಿದೆ.
Lok Sabha Election 2024: ರಾಜಕೀಯ ವಿರೋಧಿಗಳ ಬೇಟೆಯಾಡಲು ಡಿಕೆಶಿ ರಣತಂತ್ರ
ಗೃಹ ಬಳಕೆ ವಿದ್ಯುತ್ ದರ
ಹಿಂದಿನ ದರ
0-100 ಯುನಿಟ್ - 4.75 ರು.
100ಕ್ಕಿಂತ ಹೆಚ್ಚು - 7.00 ರು.
ಪರಿಷ್ಕೃತ ದರ
ಎಲ್ಲಾ ಯುನಿಟ್ - 5.90 ರು.