ಬೆಂಗಳೂರು(ನ.07): ಮುಂಬಡ್ತಿ ನೀಡಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾವು ಸಲ್ಲಿಸಿದ್ದ ರಾಜೀನಾಮೆಯನ್ನು ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಡಾ.ಪಿ.ರವೀಂದ್ರನಾಥ್‌ ಶುಕ್ರವಾರ ಹಿಂಪಡೆದಿದ್ದಾರೆ. 

ನಗರದ ಮುಖ್ಯಮಂತ್ರಿಗಳ ‘ಕಾವೇರಿ’ ನಿವಾಸದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬೆಳಗ್ಗೆ ಭೇಟಿಯಾಗಿ ತಮ್ಮ ರಾಜೀನಾಮೆ ಕುರಿತು ಎಡಿಜಿಪಿ ರವೀಂದ್ರನಾಥ್‌ ಮಾಹಿತಿ ನೀಡಿದರು. ರವೀಂದ್ರನಾಥ್‌ ಅವರ ಅಹವಾಲು ಆಲಿಸಿದ ಮುಖ್ಯಮಂತ್ರಿಗಳು, ನಿಮಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಎಡಿಜಿಪಿ ರವೀಂದ್ರನಾಥ್‌ ಅವರು, ‘ನನ್ನ ನೋವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚಿಸಿ ಅನ್ಯಾಯ ಸರಿಪಡಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಮಾತಿನ ಮೇಲೆ ವಿಶ್ವಾಸವಿಟ್ಟು ನಾನು ರಾಜೀನಾಮೆ ಹಿಂಪಡೆದಿದ್ದೇನೆ’ ಎಂದು ಸ್ಪಷ್ಟಡಿಸಿದರು.

'ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯಲ್ಲ'

ನನ್ನ ವೃತ್ತಿ ಬದುಕಿನಲ್ಲಿ ಎದುರಿಸಿದ ಸಂಕಷ್ಟಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಇತ್ತೀಚಿನ ಮುಂಬಡ್ತಿ ವಿಚಾರದ ಬಗ್ಗೆ ಸಹ ವಿವರಿಸಲಾಯಿತು. ಉದ್ದೇಶ ಪೂರ್ವಕವಾಗಿ ಕೆಲವರು ರೂಪಿಸಿದ ಸಂಚಿನಿಂದ ನನ್ನ ಸೇವಾಹಿರಿತನವನ್ನು ಕಡೆಗಣಿಸಲಾಗಿದೆ ಎಂದು ಹೇಳಿದೆ. ನನ್ನ ಸಮಸ್ಯೆಗಳನ್ನು ಸಹನೆಯಿಂದ ಕೇಳಿದ ಮುಖ್ಯಮಂತ್ರಿಗಳು, ಇನ್ನೆರಡು ದಿನಗಳಲ್ಲಿ ನಿಮಗೆ ನ್ಯಾಯ ಸಿಗಲಿದೆ ಎಂದಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ಸಮಾಧಾನ ತಂದಿದೆ ಎಂದು ರವೀಂದ್ರನಾಥ್‌ ತಿಳಿಸಿದರು.

ಮುಂಬಡ್ತಿ ವಿಚಾರವಾಗಿ ಬೇಸರಗೊಂಡು ಅ.28ರಂದು ಎಡಿಜಿಪಿ ಹುದ್ದೆಗೆ ರವೀಂದ್ರನಾಥ್‌ ರಾಜೀನಾಮೆ ನೀಡಿದ್ದರು. ಬಳಿಕ ರಾಜೀನಾಮೆ ಹಿಂಪಡೆಯುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ನಡೆಸಿದ್ದ ಸಂಧಾನ ವಿಫಲವಾಗಿತ್ತು.