Asianet Suvarna News Asianet Suvarna News

23 ವರ್ಷವಾದರೂ ಪತ್ತೆಯಾಗದ ಏಕೀಕರಣ ಹೋರಾಟಗಾರ

ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಅದರಗುಂಚಿ ಶಂಕರಗೌಡರನ್ನು ರಾಜ್ಯ ಸರ್ಕಾರ ಸಂಪೂರ್ಣ ಮರೆತೇ ಬಿಟ್ಟಿದೆ. ನಾಪತ್ತೆಯಾಗಿ ಬರೋಬ್ಬರಿ 23 ವರ್ಷಗಳಾದರೂ ಅವರನ್ನು ಹುಡುಕಿಸುವ ಕೆಲಸವೂ ಸರಿಯಾಗಿ ಆಗಿಲ್ಲ. ಅವರನ್ನು ನೆನಪಿಸುವಂತಹ ಯಾವೊಂದು ಕಾರ್ಯಕ್ರಮವನ್ನೂ ಮಾಡುತ್ತಿಲ್ಲ.

Adargunchi Shankaregowda Missing From 23 Years
Author
Bengaluru, First Published Nov 9, 2018, 9:23 AM IST

ಹುಬ್ಬಳ್ಳಿ :  ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಎಲ್ಲೆಡೆ ಅದ್ಧೂರಿಯಿಂದ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಅದರಗುಂಚಿ ಶಂಕರಗೌಡರನ್ನು ರಾಜ್ಯ ಸರ್ಕಾರ ಸಂಪೂರ್ಣ ಮರೆತೇ ಬಿಟ್ಟಿದೆ. ನಾಪತ್ತೆಯಾಗಿ ಬರೋಬ್ಬರಿ 23 ವರ್ಷಗಳಾದರೂ ಅವರನ್ನು ಹುಡುಕಿಸುವ ಕೆಲಸವೂ ಸರಿಯಾಗಿ ಆಗಿಲ್ಲ. ಅವರನ್ನು ನೆನಪಿಸುವಂತಹ ಯಾವೊಂದು ಕಾರ್ಯಕ್ರಮವನ್ನೂ ಮಾಡುತ್ತಿಲ್ಲ.

ಹೌದು. ಕರ್ನಾಟಕ ಏಕೀಕರಣದಲ್ಲಿ ಅದರಗುಂಚಿ ಶಂಕರಗೌಡರ ಪಾತ್ರ ಬಹುದೊಡ್ಡದು. ನಿರಂತರ ಉಪವಾಸ, ಹೋರಾಟದ ಮೂಲಕ ಗಮನ ಸೆಳೆದಿದ್ದ ಶಂಕರಗೌಡರು, 1995ರಲ್ಲಿ ಶ್ರೀಶೈಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೆ ವಾಪಸ್‌ ಬಂದಿಲ್ಲ. ಎಲ್ಲಿ ಹೋದರು ಎಂಬುದು ಕೂಡ ಗೊತ್ತಾಗಲಿಲ್ಲ. ಆಗ ಧಾರವಾಡದ ಎಸ್ಪಿಯಾಗಿ ಕೆಂಪಯ್ಯ ಅವರು ಶ್ರೀಶೈಲ, ಗಾಂಧೀಜಿ ಸಾಬರಮತಿ ಆಶ್ರಮಕ್ಕೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಶಂಕರಗೌಡರನ್ನು ಹುಡುಕಿಸುವ ಪ್ರಯತ್ನ ಮಾಡಿದ್ದರು. ಆದರೆ ಅದು ಫಲಕಾರಿಯಾಗಲಿಲ್ಲ. ಬಳಿಕ ಬಂದ ಅಧಿಕಾರಿಗಳು ಆ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಈಗಲೂ ಶಂಕರಗೌಡರು ಏನಾದರು ಎಂಬುದು ನಿಗೂಢವಾಗಿಯೇ ಉಳಿದಿದೆ.

ಉಪವಾಸ ಸತ್ಯಾಗ್ರಹ:

ದೇಶ ಸ್ವಾತಂತ್ರ್ಯವಾದ ಬಳಿಕ ಭಾಷಾವಾರು ಪ್ರಾಂತ್ಯಗಳ ರಚನೆಯಾಗಬೇಕೆಂದು ಎಲ್ಲ ಭಾಷಿಕ ಮುಖಂಡರ ತೀರ್ಮಾನವಾಗಿತ್ತು. ಅದಕ್ಕೆ ತಕ್ಕಂತೆ ಕರ್ನಾಟಕ ಏಕೀಕರಣ ಸಂಘವೂ ರಚನೆಯಾಯಿತು. ನಾರಾಯಣ ಪೈ, ದೊಡ್ಡಮೇಟಿ ಅಂದಾನಪ್ಪ ಹೀಗೆ ಹಲವು ಮುಖಂಡರು ಉಪವಾಸ ಶುರು ಮಾಡಿದರು. ಅದರಂತೆ ಶಂಕರಗೌಡರು ಸಹ ಅದರಗುಂಚಿ ಕಲ್ಮೇಶ್ವರ ದೇವಸ್ಥಾನದಲ್ಲಿ ಬರೋಬ್ಬರಿ 23 ದಿನಗಳ ಉಪವಾಸ ನಡೆಸಿದರು.

ಇದೇ ವೇಳೆ ಕಾಂಗ್ರೆಸ್‌ ಕಾರ್ಯಕಾರಿ ಸಭೆಯನ್ನು ಹುಬ್ಬಳ್ಳಿ ಟೌನ್‌ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಸಂಸತ್‌ ಸದಸ್ಯ ಎಸ್‌.ನಿಜಲಿಂಗಪ್ಪ ಸಭೆ ನಡೆಸಬೇಕಿತ್ತು. ಆಗ ಅಲ್ಲಿ ಸೇರಿದ್ದವರು ‘ಶಂಕರಗೌಡರು ಉಪವಾಸ ಕುಳಿತು ಸಾಯುತ್ತಿದ್ದಾರೆ. ಮೊದಲು ಕರ್ನಾಟಕ ಏಕೀಕರಣದ ಭರವಸೆ ನೀಡಬೇಕು. ಶಂಕರಗೌಡರು ಉಪವಾಸ ಕೈ ಬಿಡುವಂತೆ ಮಾಡಬೇಕು’ ಎಂದು ಆಗ್ರಹಿಸಿದರು. ಮುಖಂಡರಿಂದ ಸ್ಪಂದನೆ ಸಿಗದಿದ್ದಾಗ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಗೋಲಿಬಾರ್‌ ಕೂಡ ನಡೆದಿತ್ತು.

ಏಕೀಕರಣದ ನಿರ್ಣಯ:  ಗದ್ದಲದ ನಡುವೆಯೇ ಅಂದು ನಡೆದ ಕೆಪಿಸಿಸಿ ಸಭೆಯಲ್ಲಿ ‘ಕರ್ನಾಟಕ ಏಕೀಕರಣ ಮಾಡಬೇಕು. ಆರು ತಿಂಗಳೊಳಗೆ ಏಕೀಕೃತ ಕರ್ನಾಟಕ ರಚಿಸಬೇಕು. ಇಲ್ಲದಿದ್ದಲ್ಲಿ ಆರು ತಿಂಗಳ ನಂತರ ಸಂಸತ್‌ ಸದಸ್ಯರು, ಮಂತ್ರಿಗಳು, ಮುಂಬೈ ಸರ್ಕಾರದ ವಿಧಾನಸಭೆಗೆ ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳೆಲ್ಲ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂಬ ಎಚ್ಚರಿಕೆಯ ನಿರ್ಣಯವನ್ನು ಕಾರ್ಯಕಾರಿ ಸಮಿತಿ ಕೈಗೊಂಡಿತು. ಆ ಬಳಿಕ ಅದರಗುಂಚಿಗೆ ತೆರಳಿ ಶಂಕರಗೌಡರಿಗೆ ಕಾರ್ಯಕಾರಿ ಸಮಿತಿ ನಿರ್ಣಯ ತಿಳಿಸಿ ಉಪವಾಸವನ್ನು ಕೈಬಿಡುವಂತೆ ನಿಜಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪ ಮನವಿ ಮಾಡಿದ್ದರು.

ಹೋರಾಟದ ಫಲವಾಗಿಯೇ ಹೈಪವರ್‌ ಕಮಿಟಿ ರಚನೆಯಾಗಿದ್ದರೂ 1955ರಲ್ಲಿ ಕರ್ನಾಟಕದಲ್ಲಿ ರಾಯಚೂರು, ಬೀದರ, ಗುಲಬುರ್ಗಾ, ವಿಜಯಪುರ, ಧಾರವಾಡ, ಕಾರವಾರ ಸೇರಿದಂತೆ ಮತ್ತಿತರರ ಪ್ರದೇಶಗಳನ್ನು ಸೇರಿಸಿಕೊಳ್ಳಲು ವಿರೋಧ ವ್ಯಕ್ತವಾಗಿತ್ತು. ಆಗ ಮತ್ತೆ ಹಂಪಿಯಲ್ಲಿ ಶಂಕರಗೌಡರು ‘ಅಖಂಡ ಕರ್ನಾಟಕ’ದ ಬೇಡಿಕೆಯನ್ನಿಟ್ಟು ಉಪವಾಸ ಕುಳಿತರು. 10 ದಿನಗಳ ಕಾಲ ಉಪವಾಸ ಕುಳಿತ ಬಳಿಕ ಅಖಂಡ ಕರ್ನಾಟಕ ರಚನೆಗೆ ನಿರ್ಧಾರದ ಪ್ರಕಟಣೆ ಹೊರಬಂತು. 1956ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು.

ಸ್ವಾತಂತ್ರ್ಯ ಹೋರಾಟ:  ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಹುರಿದುಂಬಿಸಲು ಗಾಂಧಿ ಅನುಯಾಯಿಗಳು ಹುಬ್ಬಳ್ಳಿಗೆ ಬಂದು ಮಾಡುತ್ತಿದ್ದ ಭಾಷಣಗಳಿಗೆಲ್ಲ ತಪ್ಪದೇ ಹಾಜರಾಗುತ್ತಿದ್ದ ಶಂಕರಗೌಡರು, ಮುಂದೆ ಒಂದು ದಿನ ಹುಬ್ಬಳ್ಳಿಗೆ ಸುಭಾಷಚಂದ್ರ ಬೋಸರು ಆಗಮಿಸಿದ್ದಾಗ ಅವರ ಭಾಷಣ ಕೇಳಲು ತೆರಳಿದ್ದರು. ಆಗ ಬೋಸರತ್ತ ಹಸ್ತಾಕ್ಷರಕ್ಕಾಗಿ ಶಂಕರಗೌಡ ತನ್ನಲ್ಲಿನ ಪುಸ್ತಕ ಚಾಚಿದಾಗ ಅದರಲ್ಲಿ ಬೋಸರು ‘ದೇಶ್‌ ಕೀ ಸೇವಾ ಕರೋ’ ಎಂದು ಬರೆದುಕೊಟ್ಟರು. ಅದರಂತೆ ಮುಂದೆ ದೇಶಕ್ಕಾಗಿಯೇ ತಮ್ಮ ಜೀವನ ಮುಡುಪಾಗಿಟ್ಟರು. ಮಹಾತ್ಮ ಗಾಂಧಿ, ಸುಭಾಷ ಚಂದ್ರ ಬೋಸ್‌ ಅವರ ಪ್ರಭಾವಕ್ಕೊಳಗಾದ ಶಂಕರಗೌಡರು, ಸ್ವಾತಂತ್ರ್ಯವಾಗುವವರೆಗೂ ತಮ್ಮದೇ ಗುಂಪು ಕಟ್ಟಿಕೊಂಡು ಹೋರಾಟ ಮಾಡಿದರು. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ ಸೇರಿ ದೇಶಸೇವೆ ಮಾಡಿದರು.

ಇಂದು ಶಂಕರಗೌಡರ ಹೆಸರಲ್ಲಿ ದತ್ತಿ ಉಪನ್ಯಾಸ

ಹುಬ್ಬಳ್ಳಿಯ ರಾಮಣ್ಣ ಮಾಸ್ತರ ಟ್ರಸ್ಟ್‌ ಶುಕ್ರವಾರ ಸಂಜೆ 6 ಗಂಟೆಗೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ‘ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅದರಗುಂಚಿ ಶಂಕರಗೌಡರ ಪಾತ್ರ’ ಕುರಿತು ದತ್ತಿ ಉಪನ್ಯಾಸ ಆಯೋಜಿಸಿದೆ. ನಾಡೋಜ ಡಾ.ಪಾಟೀಲ್‌ ಪುಟ್ಟಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಂಕರಗೌಡರ ಹೆಸರಲ್ಲಿ ಪ್ರತಿವರ್ಷ ನ.9ರಂದು ಈ ದತ್ತಿ ಉಪನ್ಯಾಸ ನಡೆಯಲಿದೆ.

ದತ್ತು ಪಡೆದ ಅಜ್ಜ

ಶಂಕರಗೌಡರು ಹುಟ್ಟಿದ್ದು 1920ರಂದು ನರಗುಂದ ತಾಲೂಕಿನ ಹುಣಸಿಕಟ್ಟೆಗ್ರಾಮದಲ್ಲಿ. ಚಿಕ್ಕವಯಸ್ಸಿನಲ್ಲೇ ತಾಯಿ ತೀರಿಕೊಂಡು, ಮಲತಾಯಿ ಬಸಮ್ಮಗೌಡಸಾನಿ ಆಶ್ರಯದಲ್ಲೇ ಬೆಳೆದರು. ಬಸಮ್ಮ ಅವರ ತಂದೆ ಅದರಗುಂಚಿಯ ಕಲ್ಲನಗೌಡರು ಈ ಶಂಕರಗೌಡರನ್ನು ದತ್ತುತೆಗೆದುಕೊಳ್ಳಲು ಇಚ್ಛಿಸಿದರು. ಅದರಂತೆ ಮಗಳು ಹಾಗೂ ಅಳಿಯನನ್ನು ಒಪ್ಪಿಸಿ ಮೊಮ್ಮಗ ಶಂಕರಗೌಡರನ್ನು ದತ್ತುಪಡೆದು ಅದರಗುಂಚಿಗೆ ಕರೆದುಕೊಂಡು ಹೋಗಿ ಬೆಳೆಸಿದರು.

ಅದರಗುಂಚಿ ಶಂಕರಗೌಡರಂತಹ ಮಹಾನ್‌ ಹೋರಾಟಗಾರನನ್ನು ನೆನಪಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಸರ್ಕಾರಗಳು ಮಾಡಿಲ್ಲ. ಅದರಗುಂಚಿ ಗ್ರಾಮದಲ್ಲಿ ಸ್ಮಾರಕ ಭವನ ನಿರ್ಮಿಸಬೇಕು. ಅವರ ಹೆಸರಲ್ಲೊಂದು ಟ್ರಸ್ಟ್‌ ಸ್ಥಾಪಿಸಿ ಆ ಮೂಲಕ ಅವರನ್ನು ನೆನಪಿಸುವಂತಹ ಕೆಲಸಗಳಾಗಬೇಕು. ಹುಬ್ಬಳ್ಳಿ ಟೌನ್‌ ಹಾಲ್‌ಗೆ, ಒಂದು ಮಾರ್ಗಕ್ಕೆ ಶಂಕರಗೌಡರ ಹೆಸರಿಡುವ ಮೂಲಕ ಸ್ಮರಿಸಬೇಕು.

-ಡಾ. ರಾಮು ಮೂಲಗಿ, ಅದರಗುಂಚಿ ಶಂಕರಗೌಡರ ಅಭಿಮಾನಿ


ವರದಿ : ಶಿವಾನಂದ ಗೊಂಬಿ

Follow Us:
Download App:
  • android
  • ios