ನವದೆಹಲಿ[ಫೆ.26]: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧೀನದಲ್ಲಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರದಲ್ಲೇ ಅದಾನಿ ಗ್ರೂಪ್‌ನ ತೆಕ್ಕೆಗೆ ತೆರಳಲಿದ್ದು, ಇನ್ನುಮುಂದೆ ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ.

ದೇಶದ ಆರು ವಿಮಾನ ನಿಲ್ದಾಣಗಳನ್ನು ಖಾಸಗಿ ನಿರ್ವಹಣೆಗೆ ನೀಡುವುದಕ್ಕೆ ಕೇಂದ್ರ ಸರ್ಕಾರ ಟೆಂಡರ್‌ ಆಹ್ವಾನಿಸಿತ್ತು. ಅದರಲ್ಲಿ ಐದು ವಿಮಾನ ನಿಲ್ದಾಣಗಳ ಗುತ್ತಿಗೆಯನ್ನು ಅದಾನಿ ಗ್ರೂಪ್‌ ಗೆದ್ದುಕೊಂಡಿದೆ. ಅವು - ಅಹಮದಾಬಾದ್‌, ತಿರುವನಂತಪುರಂ, ಲಖನೌ, ಮಂಗಳೂರು ಮತ್ತು ಜೈಪುರ ವಿಮಾನ ನಿಲ್ದಾಣ. ಇನ್ನೊಂದು ವಿಮಾನ ನಿಲ್ದಾಣವಾದ ಗುವಾಹಟಿ ಏರ್‌ಪೋರ್ಟ್‌ನ ಟೆಂಡರ್‌ ಮಂಗಳವಾರ ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದೀಗ ಬಿಡ್ಡಿಂಗ್‌ ಗೆದ್ದ ಅದಾನಿ ಕಂಪನಿ, ಮುಂದಿನ 50 ವರ್ಷಗಳ ಕಾಲ ಈ 5 ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡಲಿದೆ.

ಮಂಗಳೂರು ಸೇರಿದಂತೆ ಐದು ವಿಮಾನ ನಿಲ್ದಾಣಗಳನ್ನು ಕೆಲ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಗುತ್ತದೆ. ಆರು ವಿಮಾನ ನಿಲ್ದಾಣಗಳ ನಿರ್ವಹಣೆಗೆ 10 ಖಾಸಗಿ ಕಂಪನಿಗಳಿಂದ ಒಟ್ಟು 32 ಬಿಡ್‌ಗಳು ಬಂದಿದ್ದವು. ಅಹಮದಾಬಾದ್‌ ಮತ್ತು ಜೈಪುರ ವಿಮಾನನಿಲ್ದಾಣಕ್ಕೆ ತಲಾ ಏಳು ಬಿಡ್‌, ಲಖನೌ ಮತ್ತು ಗುವಾಹಟಿ ವಿಮಾನ ನಿಲ್ದಾಣಕ್ಕೆ ತಲಾ ಆರು ಬಿಡ್‌ ಹಾಗೂ ಮಂಗಳೂರು ಮತ್ತು ತಿರುವನಂತಪುರಂ ವಿಮಾನನಿಲ್ದಾಣಕ್ಕೆ ತಲಾ ಮೂರು ಬಿಡ್‌ಗಳು ಬಂದಿದ್ದವು. ಸರ್ಕಾರಿ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ಈ ಆರು ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಕಳೆದ ನವೆಂಬರ್‌ನಲ್ಲೇ ಸರ್ಕಾರ ಒಪ್ಪಿಗೆ ನೀಡಿತ್ತು. ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ನೀಡುವುದಕ್ಕೋಸ್ಕರ ಪಿಪಿಪಿ ಆಧಾರದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ. ಅದಾನಿ ಕಂಪನಿಯು ಬೇರೆಲ್ಲಾ ಕಂಪನಿಗಳಿಗಿಂತ ಹೆಚ್ಚಿನ ‘ಪ್ರತಿ ತಿಂಗಳ ಪ್ರಯಾಣಿಕ ಶುಲ್ಕ’ ನೀಡಲು ಮುಂದೆ ಬಂದಿರುವುದರಿಂದ ಆ ಕಂಪನಿಗೆ ಗುತ್ತಿಗೆ ಲಭಿಸಿದೆ ಎಂದು ಎಎಐ ಅಧಿಕಾರಿಗಳು ತಿಳಿಸಿದ್ದಾರೆ.

ಅದಾನಿ ಕಂಪನಿಯು ಅಹಮದಾಬಾದ್‌ನಲ್ಲಿ ಪ್ರತಿ ಪ್ರಯಾಣಿಕರಿಗೆ 177 ರು. ಜೈಪುರದಲ್ಲಿ 174, ಲಖನೌದಲ್ಲಿ 171, ತಿರುವನಂತಪುರದಲ್ಲಿ 168 ರು. ಹಾಗೂ ಮಂಗಳೂರಿನಲ್ಲಿ 115 ರು. ನೀಡುವ ಆಫರ್‌ ಮುಂದಿಟ್ಟಿತ್ತು.