ಉಡುಪಿ(ಫೆ.09): ದೇಶದ ಪ್ರತಿಯೊಬ್ಬ ತಾಯಿಗೂ ಮೋದಿಯಂತಹ ಮಕ್ಕಳು ಹುಟ್ಟಬೇಕು ಎಂದು ದೂರದರ್ಶನದಲ್ಲಿ ಪ್ರಸಿದ್ಧವಾದ ಮಹಾಭಾರತ ಧಾರಾವಾಹಿಯ ದ್ರೋಣಾಚಾರ್ಯ ಪಾತ್ರಧಾರಿ, ವಿವಿಧ ಭಾಷೆಗಳ 5000ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ ಖ್ಯಾತಿಯ ಕಲಾವಿದ ಸುರೇಂದ್ರ ಪಾಲ್ ಸಿಂಗ್ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಹೆರ್ಗದಲ್ಲಿ ತಮ್ಮ ಆತ್ಮೀಯರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುರೇಂದ್ರ ಪಾಲ್ ಸಿಂಗ್, ಪ್ರಧಾನಿ ಮೋದಿ ಅವರ ಕಾರ್ಯ ವೈಖರಿಯನ್ನು ಹೊಗಳಿದರು.

ಮೋದಿ ಪ್ರಧಾನಿಯಾದ ಮೇಲೆ ದೇಶ ನಿಜವಾದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದ ಸಿಂಗ್, ಅವರಂತ ದೇಶಭಕ್ತ ಮಕ್ಕಳು ಈ ದೇಶದ ಪ್ರತಿ ತಾಯಿಯ ಹೊಟ್ಟೆಯಲ್ಲಿ ಹುಟ್ಟಬೇಕು ಎಂದು ಹೇಳಿದರು.

ಜೀವನದಲ್ಲಿ ಮೊದಲ‌ ಬಾರಿಗೆ ಉಡುಪಿಗೆ ಆಗಮಿಸಿದ್ದು,  ಕೃಷ್ಣನ ದರ್ಶನ‌ ಮಾಡುವ ಸುಯೋಗ ದೊರಕಿತು ಎಂದು ಸಿಂಗ್ ಸಂತಸ ಹಂಚಿಕೊಂಡರು.

ಎಲ್ಲಾ ತಂದೆ ತಾಯಂದಿರೂ ಮಕ್ಕಳಿಗೆ ರಾಮಾಯಣ ಮಹಾಭಾರತಗಳನ್ನು ತಿಳಿಸಿ ಕೊಡಬೇಕು. ಮಕ್ಕಳಿಗೆ ತಮ್ಮ‌ ತಂದೆ ತಾಯಿಯರನ್ನು‌ ಚೆನ್ನಾಗಿ ನೋಡಿಕೊಳ್ಳುವ ಸಂಸ್ಕಾರವನ್ನು ನೀಡಬೇಕು ಎಂದು ಹಿರಿಯ ಕಲಾವಿದ ಮನವಿ ಮಾಡಿದರು.   

ಕೊನೆಯಲ್ಲಿ ಸುರೇಂದ್ರ ಪಾಲ್ ಸಿಂಗ್ ತಾವು ನಟಿಸಿದ ಮಹಾಭಾರತದ ದ್ರೋಣ ಮತ್ತು ಮಹಾದೇವ್ ಧಾರವಾಹಿಯ ದಕ್ಷ ಪ್ರಜಾಪತಿಯ ಪಾತ್ರಗಳ ಡೈಲಾಗ್ ಗಳನ್ನು ಹೇಳಿ ಸಭಿಕರನ್ನು ರಂಜಿಸಿದರು.