Asianet Suvarna News Asianet Suvarna News

ಹಲ್ಲೆ ನಡೆಸಿದ್ದು ನಾನೇ, ಶಿಕ್ಷೆ ಕೊಡಿ ಎಂದ ಎಟಿಎಂ ರಾಕ್ಷಸ!

ಬ್ಯಾಂಕ್‌ ಉದ್ಯೋಗಿ ಜ್ಯೋತಿ ಮೇಲೆ ಹಲ್ಲೆ ನಡೆಸಿದವನಿಂದ ತಪ್ಪೊಪ್ಪಿಗೆ| ವಿಚಾರಣೆ ಬೇಡ, ಈಗಲೇ ಶಿಕ್ಷೆ ನೀಡಿ ಎಂದು ಕೋರ್ಟ್‌ಗೆ ಮನವಿ

Accused confesses to ATM attack on Jyothi Uday in Bengaluru
Author
Bangalore, First Published Dec 29, 2018, 8:23 AM IST

ಬೆಂಗಳೂರು[ಡಿ.29]: ಐದು ವರ್ಷಗಳ ಹಿಂದೆ ನಗರದ ಕಾರ್ಪೊರೇಷನ್‌ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್‌ ಉದ್ಯೋಗಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್‌ ರೆಡ್ಡಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದು, ಶಿಕ್ಷೆ ವಿಧಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾನೆ.

ಬ್ಯಾಂಕ್‌ ಉದ್ಯೋಗಿ ಜ್ಯೋತಿ ಉದಯ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮಧುಕರ ರೆಡ್ಡಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಗಾಗಿ ಆತನನ್ನು ಪೊಲೀಸರು ಶುಕ್ರವಾರ ನಗರದ 65ನೇ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಧೀಶರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಜ್ಯೋತಿ ಉದಯ್‌ ಮೇಲೆ ಹಲ್ಲೆ ನಡೆಸಿದ್ದು ನಾನೇ, ಈ ಪ್ರಕರಣದಲ್ಲಿ ವಿಚಾರಣೆ ಅಗತ್ಯವಿಲ್ಲ. ಇಂದೇ ನನ್ನ ತಪ್ಪಿಗೆ ಶಿಕ್ಷೆ ನೀಡಿ. ನನ್ನ ಪರವಾಗಿ ಯಾವುದೇ ವಕೀಲರು ವಾದಿಸುವುದು ಬೇಡ. ನನಗೆ ಹೆಂಡತಿ ಮಕ್ಕಳಿದ್ದಾರೆ. ನಾನು ವಾಪಸ್ಸು ಹೋಗಬೇಕು. ಈ ಹಿನ್ನೆಲೆಯಲ್ಲಿ ದಯವಿಟ್ಟು ಈಗಲೇ ನನಗೆ ಶಿಕ್ಷೆ ನೀಡಿ ಸ್ವಾಮಿ ಎಂದು ನ್ಯಾಯಾದೀಶರಲ್ಲಿ ಪರಿಪರಿಯಾಗಿ ಮನವಿ ಮಾಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಿಮ್ಮ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವಂತಹ ಆರೋಪ ಇದೆ. ತಪ್ಪು ಒಪ್ಪಿಕೊಂಡ ಕೂಡಲೇ ನಿಮಗೆ ಶಿಕ್ಷೆ ಕಡಿಮೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಕೀಲರನ್ನು ನೇಮಿಸುವ ಬಗ್ಗೆ ಪೊಲೀಸರ ಜೊತೆ ಚರ್ಚಿಸಿ ತಿಳಿಸಿ ಎಂದು ಸೂಚಿಸಿ, ಪ್ರಕರಣವನ್ನು ಜ.7ಕ್ಕೆ ಮುಂದೂಡಿದರು.

ಪ್ರಕರಣದ ಹಿನ್ನಲೆ

2013 ನವೆಂಬರ್‌ 19 ರಂದು ಬೆಳಗ್ಗೆ ತನ್ನ ಮಗಳ ಹುಟ್ಟುಹಬ್ಬಕ್ಕೆ ಆಚರಣೆಗೆ ಹಣ ತೆಗೆಯಲು ಜ್ಯೋತಿ ಉದಯ್‌ ಅವರು ಕಾರ್ಪೊರೇಶನ್‌ ವೃತ್ತದಲ್ಲಿರುವ ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಆಗ ಒಳ ನುಗ್ಗಿದ್ದ ಆರೋಪಿ ಎಟಿಎಂ ಶೆಟರ್‌ ಮುಚ್ಚಿ ಜ್ಯೋತಿ ಉದಯ್‌ ಅವರಿಗೆ ಹಣ ನೀಡುವಂತೆ ಬೆದರಿದ್ದರು. ಹಣ ನೀಡದಿದ್ದಾಗ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡ ಜ್ಯೋತಿ ಉದಯ್‌ ಅವರ ಬಲಗೈ ಮತ್ತು$ಬಲಗಾಲು ಸ್ವಾಧೀನ ಕಳೆದುಕೊಂಡಿತ್ತು. ಎಸ್‌.ಜೆ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲವು ವರ್ಷಗಳ ತಲೆಮರೆಸಿಕೊಂಡಿದ್ದ ಆರೋಪಿ ಮಧುಕರ ರೆಡ್ಡಿ ಬಗ್ಗೆ ಸುಳಿವು ನೀಡಿದವರಿಗೆ ರಾಜ್ಯ ಸರ್ಕಾರ 10 ಲಕ್ಷ ಬಹುಮಾನ ಘೋಷಿಸಿತ್ತು. ಕಳೆದ ವರ್ಷ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಮಧುಕರ ರೆಡ್ಡಿಯನ್ನು ಬಂಧಿಸಲಾಗಿತ್ತು.

Follow Us:
Download App:
  • android
  • ios