ಅಕ್ರಮ ಆಸ್ತಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು (ಜು.17): ಅಕ್ರಮ ಆಸ್ತಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಸ್ ತಲುಪಿದ 10 ದಿನಗಳೊಳಗೆ ತನಿಖಾಧಿಕಾರಿ ಮುಂದೆ ತಮ್ಮ ಮೇಲಿನ ಆರೋಪಗಳಿಗೆ ಪೂರಕವಾದ ದಾಖಲೆ ಸಮೇತ ಹಾಜರಾಗಿ ಹೇಳಿಕೆ ದಾಖಲಿಸಬೇಕು ಎಂದು ಜಮೀರ್ ಅವರಿಗೆ ಎಸಿಬಿ ಸೂಚಿಸಿದೆ. ಹೀಗಾಗಿ ಸೋಮವಾರ ಅಥವಾ ಮಂಗಳವಾರ ಎಸಿಬಿ ಮುಂದೆ ಜಮೀರ್ ಹಾಜರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜಾರಿ ನಿರ್ದೇಶನಾಲಯ (ಇ.ಡಿ.)ದ ವರದಿ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಎಸಿಬಿ, ಜು.6 ರಂದು ಜಮೀರ್ ಅವರ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಹಾಗೂ ಅತಿಥಿ ಗೃಹ ಸೇರಿ ಐದು ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿತ್ತು. ಈ ದಾಳಿ ವೇಳೆ ಮನೆಯಲ್ಲಿದ್ದ ಜಮೀರ್ ಅವರು, ತಮ್ಮ ಆಸ್ತಿ-ಪಾಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವಿವರಣೆ ನೀಡಿದ್ದರು. ಆಗ ಅಧಿಕಾರಿಗಳು, ಜು.8ರಂದು ಕಚೇರಿಗೆ ಆಗಮಿಸಿ ದಾಖಲೆ ಸಲ್ಲಿಸುವಂತೆ ಸೂಚಿಸಿದ್ದರು.
ಬಿಜೆಪಿಯಲ್ಲಿ ತಪ್ಪು ಮಾಡೋರೇ ಇಲ್ಲವೆ, ಅವರ ಮೇಲೆ ದಾಳಿ ಏಕಿಲ್ಲ?: ಜಮೀರ್
ಆದರೆ ತಾವು ಬಕ್ರೀದ್ ಹಬ್ಬ ಮುಗಿದ ನಂತರ ವಿಚಾರಣೆಗೆ ಬರುವುದಾಗಿ ಹೇಳಿ ಜಮೀರ್ ಕಾಲಾವಕಾಶ ಕೇಳಿದ್ದರು. ಹೀಗಾಗಿ, ಈಗ ದಾಖಲೆ ಸಲ್ಲಿಸುವಂತೆ ಜಮೀರ್ ಅವರಿಗೆ ಎಸಿಬಿ ನೋಟಿಸ್ ನೀಡಿದೆ ಎಂದು ಮೂಲಗಳು ಹೇಳಿವೆ. ತಮ್ಮ ಆದಾಯಕ್ಕಿಂತ 87.44 ಕೋಟಿ ರು. (ಶೇ.2031)ಗೂ ಅಧಿಕ ಅಕ್ರಮ ಆಸ್ತಿಯನ್ನು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಸಂಪಾದಿಸಿದ್ದಾರೆ ಎಂದು ಎಸಿಬಿಗೆ ಇ.ಡಿ. ವರದಿ ಸಲ್ಲಿಸಿತ್ತು.
87 ಕೋಟಿ ಅಕ್ರಮ ಆಸ್ತಿ ಪತ್ತೆ: ತಮ್ಮ ಆದಾಯಕ್ಕಿಂತ ಶೇ.2031 ಪಟ್ಟು ಹೆಚ್ಚು ಅಕ್ರಮ ಆಸ್ತಿಯನ್ನು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಸಂಪಾದಿಸಿದ್ದಾರೆ ಎಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ.
ಇಡಿ ವರದಿ ಆಧರಿಸಿ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ, ಜಮೀರ್ ಅವರ ಸಾಮ್ರಾಜ್ಯದ ಮೇಲೆ ಮಂಗಳವಾರ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ಜಪ್ತಿ ಮಾಡಿತ್ತು. ಜಮೀರ್ ಅವರು .87.44 ಕೋಟಿ (ಶೇ.2031) ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಇಡಿ ಉಲ್ಲೇಖಿಸಿದ್ದು, ಈ ವರದಿ ಆಧರಿಸಿ ಶಾಸಕರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಎಸಿಬಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ದಲಿತ ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್!
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರ್‌ನಲ್ಲಿರುವ ಜಮೀರ್ ಅವರ ವೈಭವೋಪೇತ ಮನೆ, ಸದಾಶಿವ ನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿನ ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಂಪನಿಯ ಕಚೇರಿ, ಓಕಾ ಅಪಾರ್ಚ್‌ಮೆಂಟ್ ಫ್ಲ್ಯಾಟ್ ಹಾಗೂ ಬನಶಂಕರಿಯ ಜಿ.ಕೆ.ಅಸೋಸಿಯೇಟ್ಸ್ ಕಚೇರಿ ಸೇರಿ ಐದು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಐಎಂಐ ಬಹುಕೋಟಿ ವಂಚನೆ ಪ್ರಕರಣದ ತನಿಖೆ ವೇಳೆ ಶಾಸಕ ಜಮೀರ್ ಅವರ ಆಸ್ತಿ ಬಗ್ಗೆ ಇಡಿ ಪತ್ತೆ ಹಚ್ಚಿತ್ತು.
