ಬೆಂಗಳೂರು(ಫೆ.24): ಗೋಸಂರಕ್ಷಣೆಯ ಹಕ್ಕೊತ್ತಾಯದ "ಅಭಯಾಕ್ಷರ" ಅಭಿಯಾನದಲ್ಲಿ ರಾಜ್ಯಾದ್ಯಂತ ಸಂಗ್ರಹವಾದ ಸುಮಾರು ಒಂದು ಕೋಟಿ ಅರ್ಜಿಗಳನ್ನು ದೇಶದ ಪ್ರಧಾನಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸುವ ಕಾರ್ಯಕ್ರಮ ನಾಳೆ (25-02-2019) ರಾಜ್ಯಾದ್ಯಂತ ನಡೆಯಲಿದೆ. 

ಈ ಹಿಂದೆ 21.01.2019 ರಂದು ಸಲ್ಲಿಕೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಅಂದು ಪೂಜ್ಯ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಕಾರಣಕ್ಕೆ ರಾಜ್ಯಾದ್ಯಂತ ಅಭಯಾಕ್ಷರ ಸಲ್ಲಿಕೆ ಮುಂದೂಡಲ್ಪಟ್ಟಿತ್ತು.

ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭಾರತೀಯ ಗೋಪರಿವಾರದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಅಭಯಾಕ್ಷರ ಸಲ್ಲಿಕೆಯಾಗಲಿದ್ದು, ನಾಡಿನ ಅನೇಕ ಗೋಪ್ರೇಮಿ ಸಂತರು, ಗಣ್ಯಮಾನ್ಯರು ಉಪಸ್ಥಿತರಿರಲಿದ್ದಾರೆ. 

ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಸಂಗ್ರಹವಾದ ಅಭಯಾಕ್ಷರ ಸಲ್ಲಿಕೆ ನಾಳೆ (25-02-2019) ಮಧ್ಯಾಹ್ನ 3.00 ರಿಂದ 4.00 ಗಂಟೆಯ ಸಮಯಕ್ಕೆ ನಡೆಯಲಿದೆ. 

ಈ ಸಂದರ್ಭದಲ್ಲಿ ಗೋಪ್ರೇಮಿ ಸಂತರು - ಗಣ್ಯರು ಹಾಗೂ ಅನೇಕ ಗೋಪ್ರೇಮಿಗಳು ಉಪಸ್ಥಿತರಿದ್ದು, ಹಕ್ಕೊತ್ತಾಯದ ಪತ್ರಗಳನ್ನು ಸಲ್ಲಿಕೆಮಾಡಿ ; ಸಂಪೂರ್ಣ ಗೋಹತ್ಯಾ ನಿಷೇಧಕ್ಕೆ ಆಗ್ರಹಿಸಲಿದ್ದಾರೆ.