ಕರ್ನಾಟಕದಲ್ಲಿ ಮತ್ತೆ 1 ಸಾವಿರಕ್ಕಿಂತ ಕೆಳಗಿಳಿದ ಕೊರೋನಾ..!
* ಶನಿವಾರ 989 ಕೊರೋನಾ ಪ್ರಕರಣಗಳು ವರದಿ
* 802 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ
* 27 ಸಾವಿರ ಕೋವಿಡ್ ಟೆಸ್ಟ್
ಬೆಂಗಳೂರು(ಜು.10): ರಾಜ್ಯದಲ್ಲಿ ಸತತ ಮೂರು ದಿನಗಳ ಕಾಲ ಒಂದು ಸಾವಿರದ ಮೇಲೆ ವರದಿಯಾಗುತ್ತಿದ್ದ ಕೊರೋನಾ ಸೋಂಕು ಪ್ರಕರಣಗಳು ಮತ್ತೆ ಇಳಿಕೆಯಾಗಿದ್ದು, ಶನಿವಾರ 989 ಕೊರೋನಾ ಪ್ರಕರಣಗಳು ವರದಿಯಾಗಿವೆ.
802 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. ಸದ್ಯ 6693 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 27 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 3.6ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಮೂರು ಸಾವಿರ ಹೆಚ್ಚು ನಡೆದಿದೆ. ಆದರೆ, ಹೊಸ ಪ್ರಕರಣಗಳು ಮಾತ್ರ 48 ಕಡಿಮೆಯಾಗಿವೆ (ಶುಕ್ರವಾರ 1037 ಕೇಸ್, ಒಂದು ಸಾವು).
COVID CRISIS: ಬೆಂಗಳೂರಿನಲ್ಲಿ 932 ಕೊರೋನಾ ಕೇಸ್: ಓರ್ವ ಬಾಲಕ ಸಾವು
ಸದ್ಯ ಸಕ್ರಿಯ ಸೋಂಕಿತರ ಪೈಕಿ 93 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದ 6,600 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.7 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.2 ಲಕ್ಷ ಮಂದಿ ಗುಣ ಮುಖರಾಗಿದ್ದು, 40,081 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಕೊರೋನಾ ವರದಿಯಲ್ಲಿ ತಿಳಿಸಿದೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು:
ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 927 ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ 21, ಬೆಂಗಳೂರು ಗ್ರಾಮಾಂತರ 14, ಧಾರವಾಡ 8, ಶಿವಮೊಗ್ಗ 6, ಬಳ್ಳಾರಿ 4, ಬೆಳಗಾವಿ, ಹಾಸನ ತಲಾ ಮೂರು, ಚಿತ್ರದುರ್ಗ, ಮಂಡ್ಯ ಹಾಗೂ ಉತ್ತರ ಕನ್ನಡದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 19 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.