13 ಜಿಲ್ಲೆಗಳಲ್ಲಿ ಭಾರಿ ಮಳೆ, 1220 ಮನೆಗೆ ನೀರು, ಕೃಷಿಗೂ ಹಾನಿ, 20 ಹಳ್ಳಿಗೆ ಮುಳುಗಡೆ ಭೀತಿ, ಇನ್ನೂ ಚೇತರಿಸಿಕೊಳ್ಳದ ಬೆಂಗಳೂರು

ಬೆಂಗಳೂರು(ಸೆ.07): ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ರಣಮಳೆಗೆ ಅಕ್ಷರಶಃ ಜನಜೀವನ ನಲುಗಿದ್ದು, ಒಂದೇ ದಿನದಲ್ಲಿ 9 ಮಂದಿ ಮಳೆ ಸಂಬಂಧಿ ಕಾರಣಗಳಿಗೆ ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಬಿಡದೆ ಸುರಿಯುತ್ತಿರುವ ಮಳೆಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಧಾರವಾಡ, ಹಾವೇರಿ, ಗದಗ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜನವಸತಿಗೆ ನೀರು ನುಗ್ಗಿರುವುದರಿಂದ ಆಸ್ತಿಪಾಸ್ತಿಗೆ ನಷ್ಟವಾಗಿದ್ದು, ಪ್ರವಾಹದ ನೀರು ಹೊಲಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿಗೂ ಹಾನಿಯಾಗಿದೆ.

ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಮಳೆ ಆರ್ಭಟ ಕಡಿಮೆಯಾಗುತ್ತಿದ್ದಂತೆ ಉತ್ತರ ಕರ್ನಾಟಕದ ಗದಗ, ಹಾವೇರಿ, ಧಾರವಾಡ, ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ ಸೋಮವಾರ ಸಂಜೆಯಿಂದ ಅಪಾರ ಮಳೆಯಾಗುತ್ತಿದೆ. ಒಟ್ಟಾರೆ 1220ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

ಧಾರವಾಡ ಜಿಲ್ಲೆಯಲ್ಲಿ ಮಲಪ್ರಭಾ, ಬೆಣ್ಣಿಹಳ್ಳ, ಹಿರೇಹಳ್ಳ ಸೇರಿದಂತ ಸಣ್ಣ ಪುಟ್ಟಹಳ್ಳ ಕೊಳ್ಳಗಳಿಗೆ ಪ್ರವಾಹ ಬಂದಿದ್ದು, ಹತ್ತಾರು ಗ್ರಾಮಗಳ ಸಂಪರ್ಕ ರಸ್ತೆ ಕಡಿತಗೊಂಡಿದೆ. ಗದಗ ಜಿಲ್ಲೆಯಲ್ಲೂ ವ್ಯಾಪಕ ಅನಾಹುತ ಸಂಭವಿಸಿದ್ದು, ಪ್ರವಾಹದಿಂದ ರೋಣ ತಾಲೂಕಿನ ಕರುವಿನಕೊಪ್ಪ, ಹೊಳೆಆಲೂರು ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಎರಡೂ ಜಿಲ್ಲೆಗಳಲ್ಲಿ ಒಟ್ಟು 17 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, 1050 ಜನ ಆಶ್ರಯ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು, ಮಳೆ ಮತ್ತು ಕೆರೆಯ ನೀರು ಮನೆಗಳಿಗೆ, ಗ್ರಾಮಗಳಿಗೆ ನುಗ್ಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಅಗಸ್ತ್ಯತೀರ್ಥ ಸಂಪೂರ್ಣ ತುಂಬಿ ಹರಿದಿದೆ. ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಬಳಿ ನಿರ್ಮಾಣ ಹಂತದ ಸೇತುವೆ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಜಿಲ್ಲೆಯ ಕೆರೂರ ಪಟ್ಟಣದ ಎಲ್ಲಮ್ಮದೇವಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಎದುರಿನ ಸಲಾಬತ್‌ ದರ್ಗಾಕ್ಕೂ ನೀರು ನುಗ್ಗಿದ್ದರಿಂದ ದರ್ಗಾದ ತಡೆಗೋಡೆ ಕುಸಿದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳು ಮಳೆಗೆ ತತ್ತರಿಸಿವೆ. 89 ವರ್ಷಗಳ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿದ್ದು, ಒಂದೆಡೆ ಹಿನ್ನೀರಿಗೆ ಹೊಸದುರ್ಗ ತಾಲೂಕಿನ 20ಕ್ಕೂ ಹೆಚ್ಳು ಹಳ್ಳಿಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಏತನ್ಮಧ್ಯೆ ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಟ್ಟಿರುವುದರಿಂದ ರಾಯಚೂರು ಜಿಲ್ಲೆಯ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಜಲಾವೃತ ನಗರಿ ಬೆಂಗಳೂರು: ಬಿಟ್ಟುಬಿಡದೇ ಕಾಡುತ್ತಿರುವ ವರುಣನ ಹೊಡೆತಕ್ಕೆ ಬೆಂಗಳೂರು ಕ್ರಮೇಣ ಜಲಾವೃತ ನಗರಿಯಾಗತೊಡಗಿದ್ದು, ಮಹದೇವಪುರ ವ್ಯಾಪ್ತಿಯ ಹಲವು ಬಡಾವಣೆಗಳು, ಜಲಾವೃತಗೊಂಡು ನೂರಾರು ಮನೆಗಳಿಗೆ ನೀರು ನುಗ್ಗಿದೆ. ಅನೇಕ ಕಡೆಗಳಲ್ಲಿ ರಸ್ತೆಗಳು ಕೆರೆಯಂತಾಗಿ ಬೈಕು, ಕಾರುಗಳು, ಆಟೋಗಳು ಮುಳುಗಡೆಯಾಗಿದ್ದವು. ಯಮಲೂರಿನ ಎಪ್ಸಿಲಾನ್‌ ವಿಲ್ಲಾ ಕೂಡ ಜಲಾವೃತ್ತಗೊಂಡಿದ್ದು, ಇಲ್ಲಿನ ನಿವಾಸಿಗಳು ಬೋಟ್‌ಗಳಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಅದೇ ರೀತಿ ಸಾಯಿಲೇಔಟ್‌ನಲ್ಲಿ 40ರಿಂದ 50 ಮನೆಗಳಿಗೆ ನುಗ್ಗಿದ್ದರೆ, ಬಸವನಗರದ ಕಾಳಪ್ಪಲೇಔಟ್‌ನ 60ರಿಂದ 70 ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮಳೆ ಕಾರಣಗಳಿಗೆ 9 ಬಲಿ: ಮಳೆ ಸಂಬಂಧಿ ಕಾರಣಗಳಿಗೆ ರಾಜ್ಯದಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಸಿದ್ದಾಪುರದ ವರ್ತೂರು ಕೆರೆ ಕೋಡಿ ಬಿದ್ದು ನೀರು ಹರಿಯುತ್ತಿದ್ದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಸಿದ್ದಾಪುರದ ಅಖಿಲಾ (23) ಎಂಬ ಯುವತಿ ನೀರಿನ ರಭಸಕ್ಕೆ ಆಯತಪ್ಪಿ ಬೀಳುವ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ವಿದ್ಯುತ್‌ ಕಂಬ ಹಿಡಿದಾಗ ವಿದ್ಯುತ್‌ ಹರಿದು ಮೃತಪಟ್ಟಿದ್ದಾರೆ. ಇನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ನಿಂಗಪ್ಪ ಹಲವಾಗಲಿ ಮತ್ತು ಮಹೇಶ್‌ ಎಂಬ ಇಬ್ಬರು ಪೊಲೀಸರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದಲ್ಲಿ ಹಳ್ಳ ದಾಟುತ್ತಿದ್ದ ಮಹಿಳೆ ನಾಗಮ್ಮ ಯಂಕಪ್ಪ ಕವಲೂರು (50) ನೀರುಪಾಲಾಗಿದ್ದಾರೆ.

Heavy Rain : ಅರ್ಧ ಶತಮಾನದ ದಾಖಲೆ ಮಳೆಗೆ ಕಂಗೆಟ್ಟ ಬೆಂಗಳೂರು

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳದಲ್ಲಿ ಬಸವನಗೌಡ ಶಿವನಗೌಡ ತಿಪ್ಪಣ್ಣವರ(35) ಶಿವಮೊಗ್ಗದ ಮಲವಗೊಪ್ಪದ ಇಂದಿರಾ ಕಾಲೋನಿ ನಿವಾಸಿ ಗೌರಮ್ಮ (62) ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿದು ಮೃತರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಹನುಮಸಾಗರದ ಸಮೀಪ ಕಾಟಾಪುರ ಗ್ರಾಮದ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಸಣ್ಣನೀಲಪ್ಪ ಮಳಿಯಪ್ಪ ಹಾದಿಮನಿ (57), ಚಾಮರಾಜನಗರ ಜಿಲ್ಲೆ ಯಳಂದೂರು ಜಿಲ್ಲೆ ಕಸ್ತೂರ ಗ್ರಾಮದ ರಾಮದಾಸ ಶೆಟ್ಟಿ(44), ಹನೂರು ತಾಲೂಕಿನ ಮೀಣ್ಯಂ ಗ್ರಾಮದ ಮಾದಪ್ಪ(64) ಸಿಡಿಲಿಗೆ ಬಲಿಯಾಗಿದ್ದಾರೆ.

ಅನೇಕರ ರಕ್ಷಣೆ:

ರಾಮನಗರ ಜಿಲ್ಲೆಯಲ್ಲಿ ಅರ್ಕಾ​ವತಿ ಉಕ್ಕಿ ಹರಿಯುತ್ತಿದ್ದು, ನದಿ​ ಪ್ರವಾ​ಹಕ್ಕೆ ಸುಗ್ಗ​ನ​ಹಳ್ಳಿ ಸಂಪರ್ಕ ಸೇತುವೆ ಕುಸಿದು ನೀರಿ​ನಲ್ಲಿ ಕೊಚ್ಚಿ ಹೋಗು​ತ್ತಿದ್ದ ಬೈಕ್‌ ಸವಾ​ರ​ ಕೆಂಡಾದಯ್ಯ ಎಂಬವರನ್ನು ಸ್ಥಳೀಯ ಯುವ​ಕರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಳ್ಳ ನಾಗೇನಹಳ್ಳ ಮಧ್ಯೆ ಸಿಲುಕಿದ್ದ ಮಹಾರಾಷ್ಟ್ರ ಮೂಲದ 6 ಕಾರ್ಮಿಕರನ್ನು ರಕ್ಷಿಸಲು ಬೆಳಗಾವಿಯಿಂದ ಎನ್‌ಡಿಆರ್‌ಎಫ್‌ ತಂಡ ಆಗಮಿಸಿದ್ದು, ಸಂಜೆಯ ವೇಳೆಗೆ ಎಲ್ಲರನ್ನೂ ರಕ್ಷಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಕಡಪಟ್ಟಿ- ಹಳ್ಯಾಳ ಹಳ್ಳದಲ್ಲಿ ಸಿಲುಕಿದ್ದ ಆರು ಜನರನ್ನು ಅಗ್ನಿಶಾಮಕ- ಪೊಲೀಸ್‌ ಇಲಾಖೆಯವರು ರಕ್ಷಿಸಿದ್ದಾರೆ. ಕೊಪ್ಪಳ ಬಳಿ ನೀರಿನಲ್ಲಿ ಸಿಲುಕಿದ್ದ ಶಿಕ್ಷಕರೊಬ್ಬರನ್ನು ಸಹ ರಕ್ಷಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲೂ ನೀರಿನ ಸೆಳವಿನಲ್ಲಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಬೆಂಗಳೂರಿನ ಔಟರ್‌ ರಿಂಗ್‌ ರಸ್ತೆಯಲ್ಲಿ ಸಿಲುಕಿದ್ದ ಬೆಂಜ್‌ ಕಾರಿನಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ.