Asianet Suvarna News Asianet Suvarna News

Independence Day: 'ನಾವು ನವಭಾರತ ಕಟ್ಟೋಣ, ಎಲ್ಲ ವರ್ಗವನ್ನು ಜೊತೆಯಲ್ಲಿ ಒಯ್ಯೋಣ!'

* ಹೋರಾಟದಲ್ಲಿ ಯಾರ ಪಾತ್ರ ಹೆಚ್ಚು, ಕಡಿಮೆ ಎನ್ನುವುದಕ್ಕಿಂತ ಎಲ್ಲ ಮಹನೀಯರು ಗೌರವಾರ್ಹರು

* ನವಭಾರತಕ್ಕೆ ಅಮೃತೋತ್ಸವ ಅಡಿಗಲ್ಲಾಗಲಿ

75th Independence Day Special Write Up By Karnataka Power Minister Sunil kumar pod
Author
Bangalore, First Published Aug 15, 2021, 11:32 AM IST | Last Updated Aug 15, 2021, 11:32 AM IST

- ಸುನೀಲ್‌ ಕುಮಾರ್‌ ಕಾರ್ಕಳ

ಸಚಿವರು, ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ

ಸ್ವಾತಂತ್ರ್ಯ ಎಂದ ಕೂಡಲೇ ನೆನಪಾಗುವ ಶಬ್ದಗಳೆಂದರೆ ‘ಹೋರಾಟ, ಪ್ರಾಣಾಹುತಿ, ತ್ಯಾಗ ಹಾಗೂ ಬಲಿದಾನ’. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯಾರ ಪಾತ್ರ ಹೆಚ್ಚು, ಯಾರ ಪಾತ್ರ ಕಡಿಮೆ ಎನ್ನುವುದಕ್ಕಿಂತ, ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನಲ್ಲಿ ಭಾಗಿಯಾದ ಪ್ರತಿಯೊಬ್ಬ ಮಹನೀಯರು ಗೌರವಕ್ಕೆ ಪಾತ್ರರು ಎನ್ನುವುದೇ ಹೆಚ್ಚು ಸಮಂಜಸ. ಆದರೆ ಸ್ವಾತಂತ್ರ್ಯ ಹೋರಾಟದ ಹೆಸರಲ್ಲಿ ಈ ಮಣ್ಣಿನ ಸಂಸ್ಕೃತಿಯ, ಈ ನೆಲದ ಆಚಾರ ವಿಚಾರಗಳಿಗೆ ವಿರುದ್ಧವಾಗಿ ನಡೆದವರನ್ನು ನಾಡಿನ ಪ್ರತಿಯೊಬ್ಬ ರಾಷ್ಟ್ರೀಯವಾದಿಯೂ ಅತ್ಯುಗ್ರವಾಗಿ ಖಂಡಿಸುತ್ತಾನೆ ಎಂಬುದು ನನ್ನ ಬಲವಾದ ನಂಬಿಕೆ.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭಗೊಂಡು 1945ರ ಆಗಸ್ಟ್‌ 14ರ ತನಕದ ಹೋರಾಟವನ್ನು ವೀರರ, ಶೂರರ ಪ್ರಾಣಾಹುತಿಯ ಸಂಗಮವೆಂದೇ ಕರೆಯಬಹುದು. ಭಗತ್‌ ಸಿಂಗ್‌, ಚಂದ್ರಶೇಖರ್‌ ಆಜಾದ್‌, ವಿನಾಯಕ ದಾಮೋದರ ಸಾವರ್ಕರ್‌, ಸುಭಾಷ್‌ ಚಂದ್ರ ಬೋಸ್‌ ಆದಿಯಾಗಿ ಈ ಮಣ್ಣಿನ ಸಂಸ್ಕೃತಿಯ ಪ್ರತೀಕವಾದ ಅನೇಕ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಜೊತೆಗೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ದೃಢ ಸಂಕಲ್ಪ, ದೇಶದ ಸ್ವಾತಂತ್ರ್ಯಕ್ಕಾಗಿ ಅವರೊಳಗಿದ್ದ ಅದಮ್ಯ ಉತ್ಸಾಹ, ಅಹಿಂಸಾ ಮಾರ್ಗದಲ್ಲಿ ಕೊನೆ ತನಕ ಬದಲಾಗದ ಗಾಂಧೀಜಿಯವರ ದೃಢ ನಿಲುವು ಇವೆಲ್ಲವೂ ಈ ದೇಶದ ಮಣ್ಣಿನ ಆದರ್ಶದ ಪ್ರತೀಕ.

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಕನ್ನಡ ನಾಡಿನ ಕೊಡುಗೆ ಅಸಾಮಾನ್ಯವಾದುದು. ದೇಶಕ್ಕೆ ಸ್ವಾತಂತ್ರ್ಯ ತರಲೇಬೇಕೆಂಬ ಕೆಚ್ಚೆದೆಯ ಹೋರಾಟದಲ್ಲಿ ಮಡಿದವರು ಹಲವರು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಮುಂತಾದವರು ಜೀವ ತೆತ್ತಿದ್ದಾರೆ. ಪೊಲೀಸರ ಗುಂಡೇಟಿಗೆ ಎದೆಯೊಡ್ಡಿದ್ದಾರೆ.

ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಡೆದ ಹಿಂಸಾಚಾರ ಪಂಜಾಬಿನ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡವನ್ನು ನೆನಪಿಸುತ್ತದೆ. ಕನ್ನಡದ ಹಲವು ಹೋರಾಟಗಾರರು ಬ್ರಿಟೀಷರ ಗುಂಡೇಟಿಗೆ ಬಲಿಯಾದರು.

ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಹೋರಾಟಗಾರರಾದ ಬಳ್ಳಾರಿ ಸಿದ್ದಮ್ಮ, ಯಶೋದರಮ್ಮ ದಾಸಪ್ಪ ಮುಂತಾದವರು ಜೈಲುಪಾಲಾದರು. 1942ರ ಈಸೂರಿನ ದಂಗೆಯಲ್ಲಿ ನಿರಾಯುಧರಾಗಿದ್ದ ಹೋರಾಟಗಾರರ ಮೇಲೆ ಗುಂಡು ಹಾರಿಸಿ ಕೊಲ್ಲಲಾಯಿತು. ಈ ಘಟನೆಯಲ್ಲಿ ಸೂರ್ಯನಾರಾಯಣಾಚಾರಿ ಹಾಗೂ ಶಂಕರಪ್ಪ ಅವರನ್ನು ಗಲ್ಲಿಗೇರಿಸಲಾಯಿತು.

ಇವರಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಲಾರ ಮಹಾದೇವ, ದೊಡ್ಡಮೇಟಿ ಅಂದಾನಪ್ಪ, ಹರ್ಡೀಕರ್‌ ಮಂಜಪ್ಪ, ಕಮಲಾದೇವಿ ಚಟ್ಟೋಪಾಧ್ಯಾಯ, ಗಂಗಾಧರರಾವ್‌ ದೇಶಪಾಂಡೆ, ಹಳ್ಳಿಕೇರಿ ಗುದ್ಲೆಪ್ಪ, ಯಮುನಾದೇವಿ ಕುಂದಾಪುರ ಮುಂತಾದವರು ಹೋರಾಡಿದ್ದಾರೆ.

ಇತಿಹಾಸವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತಗಳಿಗೆಯ ಹೊಸ್ತಿಲಲ್ಲಿ ನಿಂತಿರುವ ದೇಶವಾಸಿಗಳು ಮಾಡಬೇಕಾದ ಯೋಚನೆ, ಯೋಜನೆಯ ಜೊತೆಗೆ ಅನ್ಯ ದೇಶಗಳು ಭಾರತವನ್ನು ನೋಡುತ್ತಿರುವ ಸ್ವರೂಪದ ಬಗ್ಗೆಯೂ ನಾವು ಹೇಳಬೇಕಿದೆ. ಹಿಂದಿನ ಸಿಹಿ- ಕಹಿ, ಸರಿ- ತಪ್ಪುಗಳನ್ನು ಮೆಲಕು ಹಾಕುತ್ತಾ, ಮುಂದೆ ಆಗಬೇಕಿರುವ ಪ್ರಸ್ತುತ ವರ್ತಮಾನದ ಬಗೆಗೆ ಚರ್ಚೆ ಮಾಡಿದರೆ ನವ ಭಾರತ ನಿರ್ಮಾಣದ ಕನಸು ಹೊತ್ತ ಕಂಗಳಿಗೆ ಸ್ಫೂರ್ತಿಯ ಜೊತೆಗೆ ಒಂದು ಆಶಾವಾದವೂ ಮೂಡೀತು.

ಸ್ವಾತಂತ್ರ್ಯಾ ನಂತರ ನಮ್ಮ ದೇಶಗಳಲ್ಲಿ ಆದ ಬದಲಾವಣೆಗಳೇನು? ಈ ಹಿಂದೆ ನಮ್ಮನ್ನು ಆಳಿದ ರಾಜಕೀಯ ಪಕ್ಷಗಳ ನಿಲುವುಗಳು ಹೇಗಿದ್ದವು? ಕಳೆದ 60-65 ವರ್ಷಗಳಲ್ಲಿ ಈ ದೇಶದಲ್ಲಿ ಆದ ಕ್ರಾಂತಿಕಾರಿ ಬದಲಾವಣೆಗಳೇನು? ತಪ್ಪು - ಒಪ್ಪುಗಳೇನು ಎಂಬುದನ್ನು ನಾವೆಲ್ಲರೂ ಪ್ರಾಂಜಲ ಚಿತ್ತದಿಂದ ಗಮನಿಸಬೇಕಾಗಿದೆ. ಭಾರತದ ವಿದೇಶಾಂಗ ನೀತಿ ಹೇಗಿತ್ತು? ಅನ್ಯ ರಾಷ್ಟ್ರಗಳು ನಮ್ಮನ್ನು ಹೇಗೆ ಕಾಣುತ್ತಿದ್ದವು ಮತ್ತು ಕೇವಲ ಐದಾರು ವರ್ಷದಲ್ಲಿ ದೇಶದಲ್ಲಿ ಆದ ಪ್ರಗತಿಯ ದಿಕ್ಕು ಹೇಗಿದೆ ಎಂಬುದನ್ನು ಗಮನಿಸಿದರೆ ಈ ಹಲವು ವಿಷಯಗಳು ವೇದ್ಯವಾಗುತ್ತವೆ.

ವಿಶ್ವ ಗುರುವಾಗುವತ್ತ ಭಾರತ

ಅದೊಂದು ಕಾಲವಿತ್ತು. ಅಮೆರಿಕ ನೀಡಿದ ಗೋಧಿಯನ್ನು ನಂಬಿರುವ ದೇಶ, ಹಾವಾಡಿಗರ ದೇಶ, ಆಧುನಿಕತೆಗೆ ಒಗ್ಗಿಕೊಳ್ಳದ ದೇಶ ಎಂದೆಲ್ಲಾ ಇತರ ರಾಷ್ಟ್ರಗಳು ಭಾರತದ ಬಗ್ಗೆ ಮಾತಾಡಿಕೊಳ್ಳುತ್ತಿದ್ದವು. ಅಷ್ಟೇ ಯಾಕೆ ದೇಶದ ಪ್ರಧಾನಿಯೊಬ್ಬರು ವಿದೇಶಕ್ಕೆ ಹೊರಟಿದ್ದಾರೆ ಎಂದರೆ ಭಿಕ್ಷೆ ಪಾತ್ರೆ ಜೊತೆಗೆ ಹೊರಟಿದ್ದಾರೆ ನೋಡಿ ಎಂದು ಮೂದಲಿಸುವ ಕಾಲವೊಂದಿತ್ತು. ಆದರೆ ಈಗ ಸಮಯ ಬದಲಾಗಿದೆ. ದೇಶಕ್ಕೆ ಸಮರ್ಥ ನಾಯಕತ್ವ ಸಿಕ್ಕಿದೆ. ಮೂದಲಿಸುತ್ತಿದ್ದ ದೇಶಗಳು ಭಾರತದತ್ತ ಅಚ್ಚರಿಯಿಂದ ತಿರುಗಿ ನೋಡುತ್ತಿದೆ. 2030ರ ವೇಳೆಗೆ ಭಾರತವು ಆರ್ಥಿಕವಾಗಿ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವಭಾರತದ ಪರಿಕಲ್ಪನೆಯ ಕನಸನ್ನು ಹೊತ್ತು ಮುನ್ನಡೆದಿರುವ ದೇಶದ ಈಗಿನ ಸಮರ್ಥ ನಾಯಕತ್ವವು ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಚೀನಾ, ಪಾಕಿಸ್ತಾನದ ವೈರತ್ವವನ್ನೇ ಸೇತುವಾಗಿಸಿಕೊಂಡು ಇಂದು ಕಮ್ಯುನಿಸ್ಟ್‌ ರಾಷ್ಟ್ರಕ್ಕೆ ತಕ್ಕ ಉತ್ತರ ನೀಡುತ್ತಿದೆ. ನಮ್ಮ ಯೋಧರಿಗೆ ಬುಲೆಟ್‌ ಪ್ರೂಫ್‌ ಜಾಕೆಟ್‌ ಕೂಡ ಇಲ್ಲದ ಆ ಕಷ್ಟದ ಸಮಯವನ್ನು ದಾಟಿ ಬಂದಾಗಿದೆ. ಸೈನಿಕರು ಗಡಿ ಕಾಯ್ತಾರೆ, ಆಡಳಿತ ನಡೆಸೋರು ಗಾಜಿನ ಮನೆಯಲ್ಲಿ ಕುಳಿತಿರ್ತಾರೆ ಎನ್ನುವ ಮಾತು ಇದೀಗ ಸುಳ್ಳಾಗಿದೆ. ಸ್ವತಃ ಪ್ರಧಾನಿಗಳೇ ಈಗ ಯೋಧರ ಬಳಿ ತೆರಳಿ ದೀಪಾವಳಿ ಆಚರಿಸುವ ಭಾವನಾತ್ಮಕ ಕ್ಷಣಗಳನ್ನು ಕಣ್ತುಂಬಿಕೊಂಡಾಗಿದೆ.

ಪಾರದರ್ಶಕ ಆಡಳಿತ

ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಓದುವ ಕಾಲ ಬದಲಾಗಿದೆ. ಯಾರು ಭ್ರಷ್ಟಾಚಾರ ಮಾಡಿದರು, ಹೇಗೆ ಮಾಡಿದರು, ಯಾವುದರಲ್ಲಿ ಮಾಡಿದರು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ, ವಿಮರ್ಶೆ ಅಗತ್ಯವಿಲ್ಲ. ಕಾರಣ ಜನಸಾಮಾನ್ಯರಿಗೆ ಅದರ ಬಗ್ಗೆ ಅರಿವಿದೆ. ಹೀಗಾಗಿಯೇ ನವಭಾರತದ ಪರಿಕಲ್ಪನೆಗೆ ದೇಶದ 137 ಕೋಟಿ ಜನ ಕೈಜೋಡಿಸುವ ಘಳಿಗೆ ಬಂದಿದೆ.

ಜಿಎಸ್‌ಟಿ ವ್ಯವಸ್ಥೆ ಜಾರಿಗೆ

ಏಕರೂಪದ ತೆರಿಗೆ ಸಂಗ್ರಹ, ಒನ್‌ ನೇಷನ್‌ ಒನ್‌ ಟ್ಯಾಕ್ಸ್‌ ಪರಿಕಲ್ಪನೆಯಡಿ ಜಾರಿಗೆ ತರಲಾದ ಜಿಎಸ್‌ಟಿ ಇಂದು ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಕೋವಿಡ್‌ ನಂತಹ ಮಹಾಸಾಂಕ್ರಾಮಿಕ ರೋಗ ಜಗತ್ತನ್ನೇ ಬಾಧಿಸುತ್ತಿದ್ದರೂ ದೇಶದಲ್ಲಿ ಅತ್ಯಧಿಕ ಅಂದರೆ ಏಪ್ರಿಲ್‌ ತಿಂಗಳಲ್ಲಿ 1 ಲಕ್ಷ 41 ಸಾವಿರದ 384 ಕೋಟಿ ರು. ತೆರಿಗೆ ಸಂಗ್ರಹವಾಗಿದೆ.

ಸಂವಿಧಾನದ 370ನೇ ವಿಧಿ ರದ್ದು

ದೇಶದಲ್ಲಿ ‘ದೊ ಪ್ರಧಾನ್‌, ದೊ ವಿಧಾನ್‌, ದೊ ನಿಶಾನ್‌ ನಹಿ ಚಲೇಗಿ, ನಹಿ ಚಲೇಗಿ’ ಎಂದು ದೇಶದ ಐಕ್ಯತೆಗಾಗಿ, ದೇಶದ ಒಕ್ಕೂಟ ವ್ಯವಸ್ಥೆಯ ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದ ನಮ್ಮ ಹೆಮ್ಮೆಯ ಸರ್ವೋಚ್ಚ ನಾಯಕ ದಿವಂಗತ ಶ್ಯಾಮ್‌ ಪ್ರಕಾಶ್‌ ಮುಖರ್ಜಿಯವರ ಕನಸಿನ ಭಾರತದ ಪರಿಕಲ್ಪನೆಯಡಿ ಪ್ರಧಾನಿ ಮೋದಿಯವರು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ನಾವೆಲ್ಲಾ ಒಂದು ಎನ್ನುವ ಕನಸಿನ ಭಾರತದ ಮುನ್ನೋಟಕ್ಕೆ ಮುನ್ನುಡಿ ಬರೆದರು. ಪರಿಣಾಮ ಕಾಶ್ಮೀರದಲ್ಲಿ ಕಲ್ಲು ಹೊಡೆಯುತ್ತಿದ್ದವರು, ಕೈಯಲ್ಲಿ ಬಂದೂಕು ಹಿಡಿದು ನಿಂತವರು, ಗಡಿಯೊಳಗೆ ನುಸುಳಿ ದೇಶದ ಭದ್ರತೆಗೆ ತೊಡಕಾದವರು ಇಂದು ಬಾಲ ಮುದುರಿ ಕುಳಿತಿದ್ದಾರೆ. ಭಾರತದ ತ್ರಿವರ್ಣ ಧ್ವಜಕ್ಕೆ ಅಗೌರವ ನೀಡುತ್ತಿದ್ದ ಅಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದು ಕಂಗಾಲಾಗಿವೆ. ಯಾವ ಲಾಲ್‌ ಚೌಕ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ಅವಕಾಶ ಇರಲಿಲ್ಲವೋ, ಅದೇ ಲಾಲ್‌ಚೌಕ್‌ನಲ್ಲಿಂದು ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಜಮ್ಮು- ಕಾಶ್ಮೀರದಲ್ಲಿ ಅಭಿವೃದ್ಧಿಯ ಯುಗ ಆರಂಭವಾಗಿದೆ. ಉದ್ಯಮಿಗಳು ಬಂಡವಾಳ ಹೂಡುತ್ತಿದ್ದಾರೆ. ಶಾಲೆ, ಕಾಲೇಜುಗಳು ಕಣಿವೆ ರಾಜ್ಯದಲ್ಲಿ ತಲೆ ಎತ್ತುತ್ತಿವೆ. ಇದೇ ಅಲ್ಲವೇ ನವ ಭಾರತದ ಕಲ್ಪನೆಗೆ ದಿಕ್ಸೂಚಿ?

ಅಭಿವೃದ್ಧಿಯ ಮಹಾಪರ್ವ

ಅದೆಷ್ಟೊತಾಯಂದಿರು ತಾವು ಹೊಗೆಯಲ್ಲಿ ಮುಳುಗಿ, ಹಸಿದ ಹೊಟ್ಟೆಗೆ ಅನ್ನ ನೀಡುತ್ತಿದ್ದರೂ ಆ ತಾಯಂದಿರ ಕಷ್ಟವನ್ನು ಯಾರೂ ಗುರುತಿಸಿರಲಿಲ್ಲ. ಆ ಸಮಯದಲ್ಲಿ ಜಾರಿಗೆ ಬಂದಿದ್ದು ಉಜ್ವಲ ಯೋಜನೆ. ಈ ಯೋಜನೆ ಮೂಲಕ 8 ಕೋಟಿ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕವನ್ನು ನೀಡಲಾಗಿದೆ. ಅಷ್ಟೇ ಯಾಕೆ ಬ್ಯಾಂಕ್‌ ಮೆಟ್ಟಿಲನ್ನೇ ಹತ್ತಿಲ್ಲದ ಅದೆಷ್ಟೋ ಸಾಮಾನ್ಯ ಜನರಿಗೆ ಜನ ಧನ್‌ ಖಾತೆ ತೆರೆದು, ಸರ್ಕಾರದ ಯೋಜನೆಯ ಹಣ ನೇರವಾಗಿ ಅವರ ಖಾತೆ ಸೇರುವಂತೆ ಮಾಡಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಿದ್ದು, ಸ್ವಾತಂತ್ರ್ಯಾ ನಂತರ ಭಾರತದ ಐತಿಹಾಸಿಕ ತೀರ್ಮಾನ ಮಾತ್ರವಲ್ಲ, ಆಡಳಿತ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸಿದ ಪಾರದರ್ಶಕ ನಡೆ ಎಂದರೆ ಖಂಡಿತ ತಪ್ಪಲ್ಲ. ಜನ್‌ಧನ್‌ ಯೋಜನೆಯ ಮೂಲಕ 42 ಕೋಟಿ ಜನ ಬ್ಯಾಂಕ್‌ ಖಾತೆ ತೆರೆದಿದ್ದು ಭ್ರಷ್ಟಾಚಾರ ರಹಿತ ಆಳ್ವಿಕೆಗೆ ಆರಂಭಿಕ ಮೆಟ್ಟಿಲಾಯ್ತು.

ಕತ್ತಲಿನಿಂದ ಬೆಳಕಿನೆಡೆಗೆ

ನನಗಿನ್ನೂ ನೆನಪಿದೆ, ಭಾರತ ಅಂದರೆ ಹಿಂದುಳಿದ ದೇಶ.ಅಲ್ಲಿನ ರಸ್ತೆಗಳಲ್ಲಿ ಕೇವಲ ದನಕರುಗಳು ಓಡಾಡುತ್ತಾ ಇರುತ್ತವೆ ಎಂದು ಸರಿಸುಮಾರು 20-25 ವರ್ಷಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ತಂಡದ ಸದಸ್ಯನೋರ್ವ ಹೇಳಿದ್ದ. ಹಾಗಿದ್ದ ದೇಶವಿಂದು ಅಭಿವೃದ್ಧಿ ಪಥದಲ್ಲಿ ಓಡುತ್ತಿದೆ. ಬ್ರಿಟಿಷರ ಪಳಯುಳಿಕೆಯನ್ನೇ ನಂಬಿ ದೇಶ ನಡೆಯುತ್ತಿದೆ ಎಂದು ಗೊಣಗುತ್ತಿದ್ದವರ ಬಾಯಲ್ಲಿ ಇಂದು ಭಾರತದ ಗುಣಗಾನ ಶುರುವಾಗಿದೆ. ಬುಡ್ಡಿ ದೀಪದ ಬೆಳಕಿನಲ್ಲಿ ಓದುತ್ತಿದ್ದ ಗ್ರಾಮೀಣ ಭಾಗದ ಮಕ್ಕಳಿಗೆ ಇಂದು ವಿದ್ಯುತ್‌ ಬೆಳಕಿನ ಕೆಳಗೆ ಕುಳಿತು ತಮ್ಮ ಭವಿಷ್ಯದ ದೀಪ ಬೆಳಗಲು ಸಹಕಾರಿ ಆಗಿದೆ. ಶೇ. 100ರಷ್ಟುಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಮಾಡಲಾಗಿದೆ. ನಂಬಲು ಕಷ್ಟಎನಿಸಬಹುದು ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ 18 ಸಾವಿರ ಗ್ರಾಮಗಳು ವಿದ್ಯುತ್‌ ಬೆಳಕನ್ನೇ ಕಂಡಿರಲಿಲ್ಲ! ಆದರೆ ಕಳೆದ ಐದು ವರ್ಷಗಳಲ್ಲಿ 100% ವಿದ್ಯುತ್‌ ಸಂಪರ್ಕ ಸಾಧ್ಯವಾಗಿದೆ ಎಂದರೆ ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಳೆದ ಐದಾರು ವರ್ಷದಲ್ಲಿ ಭಾರತಕ್ಕೆ ಸಿಕ್ಕಿರುವ ನಾಯಕತ್ವ ಹೇಗಿರಬಹುದು ಯೋಚಿಸಿ.

ಜಗತ್ತಿನ ನಾಯಕತ್ವ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಒದ್ದಾಡುತ್ತಿರುವ ಹೊತ್ತಿನಲ್ಲಿ ದೇಶದ ಪ್ರಧಾನಿಯೊಬ್ಬರು ಅದರ ಅಧ್ಯಕ್ಷತೆ ವಹಿಸಿರುವುದು ಭಾರತದ ಕೀರ್ತಿ ಶಿಖರಕ್ಕೆ ಸಿಕ್ಕ ಕಳಶವಲ್ಲವೇ ಇದು?

ಜಗತ್ತಿನ ಔಷಧಿ ಫ್ಯಾಕ್ಟರಿ

ಸರಿ ಸುಮಾರು ಆರು ಸಾವಿರ ಜನೌಷಧಿ ಕೇಂದ್ರಗಳ ಸ್ಥಾಪನೆ. ಕೊರೋನಾ ಮೊದಲ ಅಲೆಯ ವೇಳೆಯಲ್ಲಿ 120 ರಾಷ್ಟ್ರಗಳಿಗೆ ಹೈಡ್ರಾಕ್ಸಿ ಕ್ಲೋರೊಕ್ವಿನ್‌ ಹಂಚಿಕೆ ಮಾಡುವಷ್ಟರ ಮಟ್ಟಿಗೆ ಭಾರತದ ವಿಜ್ಞಾನ ಕ್ಷೇತ್ರ ಬೆಳೆದಿದೆ. ವಿಶ್ವವೇ ಕೊರೋನಾ ಮುಂದೆ ಮಂಡಿಯೂರಿ ಕುಳಿತಿದ್ದಾಗ ಎರಡೆರಡು ವ್ಯಾಕ್ಸಿನ್‌ ಆವಿಷ್ಕಾರ ಮಾಡಿ, ಮತ್ತೆ ಜಗತ್ತಿಗೆ ಔಷಧಿ ನೀಡಿದ್ದು ಭಾರತ. ಅದರಲ್ಲೂ ಪುಕ್ಕಟೆಯಾಗಿ ಲಸಿಕೆ ನೀಡಿದ್ದು ನಮ್ಮ ಸರ್ಕಾರದ ಮಾನವೀಯ ತೀರ್ಮಾನ ಎನ್ನುವುದನ್ನು ಒತ್ತಿ ಹೇಳಬೇಕಿಲ್ಲ.

ದೇಶದ ಜನರ ಗೌರವ ಎತ್ತಿಹಿಡಿದ ಕೇಂದ್ರ

ಹೇಳಿಕೊಳ್ಳಲು ಮುಜುಗರಪಡುತ್ತಿದ್ದ, ಕತ್ತಲೆ ಆಗುವುದನ್ನೇ ಕಾಯುತ್ತಿದ್ದ ಅದೆಷ್ಟೋ ಜನರು ಪಾಪ ಬಹಿರ್ದೆಸೆಗೆ ಅವಲಂಬಿಸಿದ್ದು ಬಯಲನ್ನೇ! ಆದರೆ ಸುಲಭ ಶೌಚಾಲಯ ನಿರ್ಮಾಣ ಮಾಡಿ, ಈ ದೇಶದ ಗೌರವ ಎತ್ತಿಹಿಡಿದಿದ್ದು ಮೋದಿ ನೇತೃತ್ವದ ಸರ್ಕಾರ ಎನ್ನುವುದು ಹೆಮ್ಮೆಪಡುವ ಸಂಗತಿ.

ಸ್ವಾತಂತ್ರ್ಯ ಪೂರ್ವದ ಭಾರತದ ಬಗ್ಗೆ ಕೇಳಿದ್ದೇವೆ. ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರ ಸಾಧನೆ, ಶ್ರಮ, ತ್ಯಾಗ, ಬಲಿದಾನಕ್ಕೆ ಗೌರವ ನೀಡಿದ್ದೇವೆ. ಈ ಎಲ್ಲಾ ಸ್ವಾತಂತ್ರ್ಯ ವೀರರ ಬಲಿದಾನ ಸಾರ್ಥಕವಾಗುವ ರೀತಿಯಲ್ಲಿ ಪ್ರಸ್ತುತ ಭಾರತದ ಸಾಧನೆಯನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ಕಳೆದ ಐದಾರು ವರ್ಷದಲ್ಲಿ ಭಾರತದಲ್ಲಾದ ಅನೇಕ ಧನಾತ್ಮಕ ಬದಲಾವಣೆಗಳಲ್ಲಿ ಬಹುಮುಖ್ಯವಾದ ಕೆಲವು ವಿಚಾರಗಳನ್ನು ಮಾತ್ರ ನಿಮ್ಮ ಮುಂದಿಟ್ಟಿದ್ದೇನೆ.

ರಾಷ್ಟ್ರೀಯತೆ, ಹಿಂದುತ್ವ, ದೇಶದ ರಕ್ಷಣೆ, ಅಭಿವೃದ್ಧಿ.. ಇವುಗಳಲ್ಲಿ ಯಾವುದರಲ್ಲೂ ಕಿಂಚಿತ್ತೂ ರಾಜಿಯಾಗದೆ ನಾವು ನವ ಭಾರತ ಕಟ್ಟುವೆಡೆಗೆ ಹೆಜ್ಜೆ ಹಾಕಬೇಕಿದೆ. ನಮ್ಮ ಜೊತೆಗೆ ನಾಡಿನ ಎಲ್ಲಾ ವರ್ಗದ ಬಂಧುಗಳನ್ನು ನಮ್ಮ ಜೊತೆ ಅಭಿವೃದ್ಧಿಯ ಗಮ್ಯದೆಡೆಗೆ ಒಯ್ಯಬೇಕಿದೆ.

ಈ ಸಂದರ್ಭದಲ್ಲಿ ಹೊಸ ಚೈತನ್ಯದೊಂದಿಗೆ ಹೊಸ ಬದ್ಧತೆಯೊಂದಿಗೆ ಮುಂದಿನ ದಿನಗಳನ್ನು ಎದುರು ನೋಡಬೇಕಾಗಿದೆ. ಈಗ ಆತ್ಮನಿರ್ಭರ ಭಾರತಕ್ಕಾಗಿ ಪಣ ತೊಡಬೇಕಾಗಿದೆ. ಭಾರತ ದೇಶವನ್ನು ಜಗತ್ತಿನಲ್ಲೇ ಮಂಚೂಣಿಯಲ್ಲಿ ನೋಡಬಯಸುವ ಅಗಾಧವಾದ ದೇಶಪ್ರೇಮವನ್ನು, ಅದಕ್ಕೆ ಪೂರಕವಾಗುವ ವಾಸ್ತವ ಕಾರ್ಯ ಯೋಜನೆಯನ್ನು ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಸ್ವಾತಂತ್ರ್ಯದ 75 ನೇ ವರ್ಷದ ಮಹೋತ್ಸವವನ್ನು ಆಚರಿಸುವ ಸಂಕಲ್ಪವನ್ನು ಮಾಡಬೇಕು.

ನವ ಭಾರತದ ನಿರ್ಮಾಣಕ್ಕೆ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಡಿಗಲ್ಲಾಗಲಿ.

Latest Videos
Follow Us:
Download App:
  • android
  • ios