2ನೇ ದಿನ ಗೃಹಲಕ್ಷ್ಮಿಗೆ 7.7 ಲಕ್ಷ ನೋಂದಣಿ; ಸರ್ವರ್ ಸಮಸ್ಯೆಗೆ ಹೈರಾಣು
ರಾಜ್ಯದಲ್ಲಿ ಎರಡನೇ ದಿನ ಗೃಹಲಕ್ಷ್ಮೇ ಯೋಜನೆಯಡಿ ಬರೋಬ್ಬರಿ 7.77 ಲಕ್ಷ ಮಂದಿ ಮಹಿಳೆಯರು ನೋಂದಣಿ ಮಾಡಿದ್ದಾರೆ. ಒಂದೇ ದಿನ ಲಕ್ಷಾಂತರ ಮಂದಿ ನೋಂದಣಿಗೆ ಮುಗಿಬಿದ್ದಿದ್ದರಿಂದ ರಾಜ್ಯದ ಹಲವೆಡೆ ಸರ್ವರ್ ಸಮಸ್ಯೆ ಉಂಟಾಗಿ ಜನರು ಪರದಾಡುವಂತಾಯಿತು.
ಬೆಂಗಳೂರು (ಜು.22) : ರಾಜ್ಯದಲ್ಲಿ ಎರಡನೇ ದಿನ ಗೃಹಲಕ್ಷ್ಮೇ ಯೋಜನೆಯಡಿ ಬರೋಬ್ಬರಿ 7.77 ಲಕ್ಷ ಮಂದಿ ಮಹಿಳೆಯರು ನೋಂದಣಿ ಮಾಡಿದ್ದಾರೆ. ಒಂದೇ ದಿನ ಲಕ್ಷಾಂತರ ಮಂದಿ ನೋಂದಣಿಗೆ ಮುಗಿಬಿದ್ದಿದ್ದರಿಂದ ರಾಜ್ಯದ ಹಲವೆಡೆ ಸರ್ವರ್ ಸಮಸ್ಯೆ ಉಂಟಾಗಿ ಜನರು ಪರದಾಡುವಂತಾಯಿತು.
ಎರಡು ದಿನಗಳಲ್ಲಿ ಒಟ್ಟಾರೆ 8.8 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಎರಡನೇ ದಿನವಾದ ಶುಕ್ರವಾರ ಹತ್ತು ಪಟ್ಟು ಹೆಚ್ಚು ಮಂದಿ ನೋಂದಣಿ ಮಾಡಿದ್ದಾರೆ. ನೋಂದಣಿ ಮಾಡಬೇಕಿರುವ ಸಂಖ್ಯೆ ಇನ್ನೂ ಹೆಚ್ಚಿರುವ ಕಾರಣ ಶನಿವಾರ ಹಾಗೂ ಭಾನುವಾರವೂ ಎಲ್ಲಾ ಸೇವಾ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಯೋಜನೆಗೆ ಬುಧವಾರ ಸಂಜೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ವೇಳೆ ಇ-ಆಡಳಿತ ಇಲಾಖೆಯಿಂದ ಯಾರ ಮೊಬೈಲ್‌ಗಳಿಗೆ ನೋಂದಣಿ ಸಮಯ ಹಾಗೂ ಸ್ಥಳದ ಸಂದೇಶ ಬಂದಿರುತ್ತದೆಯೋ ಅವರು ಸಂಬಂಧಪಟ್ಟಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಬೆಳಗಾವಿ ಜಿಲ್ಲೆಯ 14.71 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮೀ ಲಾಭ
ಸಂದೇಶ ಬಾರದಿದ್ದರೆ 1902ಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯ ಸಂದೇಶ ಕಳುಹಿಸುವ ಮೂಲಕ ಸೇವಾ ಕೇಂದ್ರ ಹಾಗೂ ನೋಂದಣಿ ಸಮಯದ ಸಂದೇಶ ಪಡೆಯಲು ಸ್ಪಷ್ಟವಾಗಿ ಸೂಚನೆ ನೀಡಿತ್ತು. ಹೀಗಾಗಿ ಜನಸಂದಣಿ ಉಂಟಾಯಿತು.
ಆದರೆ, ಈ ಮಾಹಿತಿ ಬಹುತೇಕರಿಗೆ ತಲುಪದ ಹಿನ್ನೆಲೆಯಲ್ಲಿ ಶುಕ್ರವಾರವೂ ಬೆಳಗ್ಗೆಯಿಂದ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿಗೆ ಹಾಜರಾದರು. ಹೀಗಾಗಿ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಸೇರಿ 11,000 ಸೇವಾ ಕೇಂದ್ರಗಳಲ್ಲಿ ದಿನಕ್ಕೆ 60 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದ್ದರೂ, ನಿಗದಿತ ಸಂಖ್ಯೆಗಿಂತ ಹೆಚ್ಚು ಜನದಟ್ಟಣೆ ಉಂಟಾಯಿತು. ಅನಿವಾರ್ಯವಾಗಿ ಮೆಸೇಜು ಬಾರದವರಿಗೂ ನೋಂದಣಿ ಮಾಡಿಕೊಟ್ಟಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಹಲವರಿಗೆ ಇಲಾಖೆಯಿಂದ ಸಂದೇಶ ಬಂದಿದ್ದರೂ ಸಂದೇಶದಲ್ಲಿರುವ ವಿಳಾಸ ಯಾವುದು ಎಂದೇ ಗೊತ್ತಿರಲಿಲ್ಲ. ಹೀಗಾಗಿ ವಿಳಾಸ ಹುಡುಕಿಕೊಂಡು ಹಲವು ಮಹಿಳೆಯರು ಸಮಸ್ಯೆ ಎದುರಿಸಿದರು.
ಗೃಹಜ್ಯೋತಿ ಯೋಜನೆಯಡಿ ಆರ್.ಆರ್. ಸಂಖ್ಯೆ ನಮೂದಿಸಿದರೆ ಎಲ್ಲಾ ವಿವರಗಳು ಬರುತ್ತಿದ್ದವು. ಅಲ್ಲಿ ಸಿದ್ಧವಾದ ಮೆಕಾನಿಸಂ ಇತ್ತು. ಆದರೆ ಗೃಹ ಲಕ್ಷ್ಮೇ ಯೋಜನೆ ಇದೇ ಮೊದಲ ಬಾರಿಗೆ ಜಾರಿ ಮಾಡುತ್ತಿರುವುದರಿಂದ ಪ್ರಾರಂಭಿಕ ಗೊಂದಲಗಳು ಸಹಜ. ಆದ್ಯಾಗ್ಯೂ ಎಲ್ಲಾ ಸಿದ್ಧತೆಗಳೊಂದಿಗೆ ಯಾವುದೇ ಸಮಸ್ಯೆ ಇಲ್ಲದೆ ನೋಂದಣಿ ಮಾಡಲು ಯತ್ನಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಂದೇಶ ಇಲ್ಲದೆ ಬಂದವರಿಗೂ ಆದ್ಯತೆ ಮೇರೆಗೆ ಪರಿಗಣಿಸಿ ನೋಂದಣಿ ಮಾಡುವಂತೆ ತಿಳಿಸಲಾಗಿದೆ.
ಸಣ್ಣಕ್ಕಿಬೆಟ್ಟು ಗೀತಕ್ಕನಿಗೆ ಗೃಹಲಕ್ಷ್ಮೀ ಎಸ್‌ಎಂಎಸ್ ಬಂದದ್ದೇ ಗೊತ್ತಿರಲಿಲ್ಲ !
ಇನ್ನು ಗ್ರಾಮ ಮಟ್ಟದಲ್ಲಿ ಪ್ರಜಾಪ್ರತಿನಿಧಿಗಳು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಹೆಚ್ಚು ಮಂದಿಗೆ ನೋಂದಣಿ ಮಾಡಿಕೊಡುವ ಮೂಲಕ ಗೊಂದಲಗಳನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.