ಬೆಂಗಳೂರು(ಏ.14): ರಾಜ್ಯದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ 65 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ನಿವಾಸಿಯೇ ಈ ಮಾರಕರೋಗಕ್ಕೆ ಬಲಿಯಾದ ಮೊದಲ ಪ್ರಕರಣವಿದು. ಈ ಸಾವಿನೊಂದಿಗೆ ರಾಜ್ಯದಲ್ಲಿ ಒಟ್ಟು 8 ಮಂದಿ ಸೋಂಕಿತರು ಮೃತಪಟ್ಟಂತಾಗಿದೆ.
"

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ವೃದ್ಧೆ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ತೊಂದರೆ (ಎಸ್‌.ಎ.ಆರ್‌.ಐ) ಹಿನ್ನೆಲೆ ಹೊಂದಿದ್ದ ಇವರಿಗೆ ಏ.12ರಂದು ಸೋಂಕು ದೃಢಪಟ್ಟಿತ್ತು. ಅವರಿಗೆ ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ವೃದ್ಧನಿಗೆ ಕೊರೋನಾ ಸೋಂಕು ಇದ್ದದ್ದು ಖಚಿತವಾಗಿದ್ದು, ವೃದ್ಧನ ಸಾವಿನ ಕಾರಣಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಬುಧವಾರ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮುನ್ನ ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಿತ್ತಾದರೂ ಅವರು, ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಬಳ್ಳಾಪುರ ಮೂಲದ ಮಹಿಳೆ ಆಗಿದ್ದರು. ಹೀಗಾಗಿ ಸೋಮವಾರ ಸಂಭವಿಸಿದ ಸಾವು, ಬೆಂಗಳೂರು ಮೂಲದವರ ಮೊದಲ ಸಾವು ಪ್ರಕರಣ ಎಂದು ಹೇಳಬಹುದಾಗಿದೆ.