ಬೆಂಗಳೂರು[ಜ.16]: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಕ್ಕೆ ಜೆಡಿಎಸ್‌ ತಿರುಗೇಟು ನೀಡಲು ಮುಂದಾಗಿದ್ದು, ಮೈತ್ರಿ ಪಕ್ಷಗಳ ಶಾಸಕರಿಗೆ ಬಿಜೆಪಿ ಗಾಳ ಹಾಕಿದ ಬೆನ್ನಲ್ಲೇ ಜೆಡಿಎಸ್‌ ಪಕ್ಷವು ಸಹ ಬಿಜೆಪಿಯ ಆರು ಶಾಸಕರನ್ನು ಸೆಳೆಯಲು ಮುಂದಾಗಿದೆ.

ಬಿಜೆಪಿ ಆರು ಶಾಸಕರು ಜೆಡಿಎಸ್‌ನ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಸಚಿವ ಸಾ.ರಾ.ಮಹೇಶ್‌ ಹೊಸ ಬಾಂಬ್‌ ಸ್ಫೋಟಿಸಿದ್ದಾರೆ.

ಮಂಗಳವಾರ ರಾತ್ರಿ ಪದ್ಮನಾಭನಗರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ದೆಹಲಿ ಬಳಿಯ ಗುರುಗ್ರಾಮದ ಹೋಟೆಲ್‌ನಲ್ಲಿರುವ ಶಾಸಕರು ಹೊರಬರಲಿ. ಆಗ ನಮ್ಮ ಸಂಪರ್ಕದಲ್ಲಿರುವ ಆರು ಶಾಸಕರು ಯಾರೆಂಬುದನ್ನು ಬಹಿರಂಗಪಡಿಸಲಾಗುತ್ತದೆ. ಬಿಜೆಪಿಯವರು ಹೊರಬಂದ ಮೇಲೆ ನಮ್ಮ ಆಟ ಶುರುವಾಗುತ್ತದೆ ಎಂದು ತೀಕ್ಷ$್ಣವಾಗಿ ಹೇಳಿದರು.

ಬಿಜೆಪಿಯವರ ಸಂಪರ್ಕದಲ್ಲಿ 6-8 ಶಾಸಕರಿಲ್ಲ. ಪಕ್ಷೇತರರು ಇಬ್ಬರು ಸೇರಿದಂತೆ 3-4 ಶಾಸಕರು ಇರಬಹುದು. ಎಲ್ಲವೂ ಶೀಘ್ರದಲ್ಲಿಯೇ ಬಯಲಾಗುತ್ತದೆ. ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರೇ ರಾಜೀನಾಮೆ ಕೊಡಬಹುದು. ಜೆಡಿಎಸ್‌ ಪಕ್ಷದ ಶಾಸಕರು ಒಗ್ಗಟ್ಟಾಗಿದ್ದಾರೆ. ಸರ್ಕಾರ ಉಳಿಸಲು ನಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ತಿಳಿಸಿದರು.