ಬೆಂಗಳೂರಲ್ಲಿ(Bengaluru) ಮುಂದಿನ ವರ್ಷ 5ಜಿ ಸೇವೆ ಡಿ.31ಕ್ಕೆ ಮಹಾನಗರಗಳಲ್ಲಿ ಪ್ರಯೋಗ ಪೂರ್ಣ 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ

ನವದೆಹಲಿ(ಡಿ.29): ಸಿಲಿಕಾನ್‌ ಸಿಟಿ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್‌ ಸೇರಿದಂತೆ ದೇಶದ 13 ಮಹಾ ನಗರಗಳಲ್ಲಿ ಮುಂದಿನ ವರ್ಷದಿಂದಲೇ ಅತೀ ವೇಗದ ಇಂಟರ್ನೆಟ್‌(Internet) ಸೇವೆ 5ಜಿ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ಸಂಬಂಧ 2022ರ ಮಾಚ್‌ರ್‍-ಏಪ್ರಿಲ್‌ನಲ್ಲಿ 5ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

5ಜಿ ಸ್ಪೆಕ್ಟ್ರಂನ ಮೂಲ ದರ, ಬ್ಯಾಂಡ್‌ ಪ್ಲ್ಯಾನ್‌, ಬ್ಲಾಕ್‌ ಗಾತ್ರ, ಎಷ್ಟುಪ್ರಮಾಣದ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕು ಎಂಬ ವಿಷಯದ ಬಗ್ಗೆ ಶಿಫಾರಸು ಮಾಡುವಂತೆ ದೂರ ಸಂಪರ್ಕ ಇಲಾಖೆಯು, ಟ್ರಾಯ್‌ಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟೆಲಿಕಾಂ ಉದ್ಯಮ ವಲಯದ ಪಾಲುದಾರರ ಜೊತೆ ಸಮಾಲೋಚನೆ ನಡೆಸಿದ್ದ ಟ್ರಾಯ್‌ ಕೆಲವೊಂದಿಷ್ಟುಶಿಫಾರಸುಗಳನ್ನು ಮಾಡಿತ್ತು.

ಅದರನ್ವಯ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಜಿಯೋ, ವೊಡಾಫೋನ್‌-ಐಡಿಯಾ ಈಗಾಗಲೇ ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್‌, ಲಖನೌ, ಚೆನ್ನೈ, ಹೈದ್ರಾಬಾದ್‌, ಪುಣೆ ಮತ್ತು ಗಾಂಧೀ ನಗರಗಳಲ್ಲಿ ಟೆಲಿಕಾಂ ಇಲಾಖೆ ನೆರವಿನಿಂದ ನಡೆಸಲಾದ 5ಜಿ ಸ್ಪೆಕ್ಟ್ರಂ ಪ್ರಯೋಗ ನಡೆಸಿದ್ದು, ಅದು ಡಿ.31ಕ್ಕೆ ಪೂರ್ಣಗೊಳ್ಳಲಿದೆ. ಹೀಗೆ ಪ್ರಯೋಗ ಪೂರ್ಣಗೊಂಡ 13 ನಗರಗಳಲ್ಲಿ 2022ರಿಂದ ಮೊದಲ ಹಂತದಲ್ಲಿ ಅತಿ ವೇಗದ 5ಜಿ ಇಂಟರ್ನೆಟ್‌ ಸೇವೆ ಲಭ್ಯವಾಗಲಿದೆ ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್‌!

ಹಾಲಿ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ 5ಜಿ ಸೇವೆ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. ಅತ್ಯಂತ ವೇಗದ ಇಂಟೆರ್ನೆಟ್‌ ಸೇವೆ ಒದಗಿಸಲು ಅನುವು ಮಾಡಿಕೊಡುವ 5ಜಿ ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡುವ ಅಪರಿಮಿತ ಅವಕಾಶವನ್ನು ಹೊಂದಿದೆ. ಹೊಸ ಉದ್ಯೋಗ ಸೃಷ್ಟಿಯ ಜೊತೆಗೆ ಹಲವು ಸೇವೆಗಳನ್ನು ಅತ್ಯಂತ ವೇಗವಾಗಿ ಪಡೆಯಲು ಈ ಸೇವೆ ಅವಕಾಶ ಕಲ್ಪಿಸಲಿದೆ.

ಎಲ್ಲೆಲ್ಲಿ ಆರಂಭ?

ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್‌, ಲಖನೌ, ಚೆನ್ನೈ, ಹೈದ್ರಾಬಾದ್‌, ಪುಣೆ, ಗಾಂಧೀ ನಗರ

5ಜಿ ಲಾಭ ಏನು?

4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್‌

ಅತ್ಯಂತ ವೇಗದ ಸೇವೆ, ನಿರ್ವಹಣಾ ವೆಚ್ಚ ಕಡಿಮೆ

ಹೆಚ್‌ಡಿ ಚಲನಚಿತ್ರ ಸೆಕೆಂಡ್‌ಗಳಲ್ಲೇ ಡೌನ್‌ಲೋಡ್‌

ಗೇಮಿಂಗ್‌, ವೀಡಿಯೋ ಉದ್ಯಮಕ್ಕೆ ಹೊಸ ಅವಕಾಶ

ಕೋರ್ಟ್ ಮೆಟ್ಟಿಲೇರಿದ್ದ ನಟಿ:

ಭಾರತ 4G ಟೆಕ್ನಾಲಜಿಯಿಂದ ಇದೀಗ 5Gಯತ್ತೆ ಹೆಜ್ಜೆ ಇಟ್ಟಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಗಿಂತಲೂ ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. 2ಜಿಯಿಂದ 4ಜಿ ಬರವುಷ್ಟರ ಹೊತ್ತಿಗೆ ಹಲವು ಪ್ರಾಣಿಸಂಕುಲವನ್ನೇ ಭಾರತ ಕಳೆದುಕೊಂಡಿದೆ. ಇದೀಗ 5ಜಿ ಮತ್ತಷ್ಟು ಆಪಾಯ ಹಾಗೂ ಆತಂಕಕಾರಿ. ಹೀಗಾಗಿ ಪರೀಕ್ಷಿಸದೇ, ಸುರಕ್ಷತೆ ಖಚಿತಪಡಿಸದ 5ಜಿ ಅನುಷ್ಠಾನದ ವಿರುದ್ಧ ಬಾಲಿವುಡ್ ನಟಿ ಜೂಹಿ ಚಾವ್ಲಾ ಹೈಕೋರ್ಟ್ ಮೆಟ್ಟಿಲೇರಿದ್ದರು. 5ಜಿ ತಂತ್ರಜ್ಞಾನ ಸುರಕ್ಷಿತ ಎಂದು ಪ್ರಮಾಣೀಕರದೇ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಜೂಹಿ ಚಾವ್ಲಾ, ವಿರೇಶ್ ಮಲಿಕ್ ಹಾಗೂ ಟೀನಾ ವಾಚನಿ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಈ ಅರ್ಜಿಯಲ್ಲಿ 5ಜಿ ತಂತ್ರಜ್ಞಾನದಿಂದ ಆರೋಗ್ಯದ ಮೇಲಾಗುವ ಪರಿಣಾಣದ ಕುರಿತು ಬೆಳುಕು ಚೆಲ್ಲಿದ್ದರು. 

4ಜಿ ತಂತ್ರಜ್ಞಾನ ಪ್ರಾಣಿಸಂಕುಲದ ಆರೋಗ್ಯಕ್ಕೆ ಮಾರಕವಾಗಿದೆ. ಇದೀಗ 5ಜಿ ತಂತ್ರಜ್ಞಾನದ ರೆಡಿಯೋಫ್ರಿಕ್ವೆನ್ಸಿ ರೇಡಿಯೇಶನ್ 10 ರಿಂದ 100 ಪಟ್ಟು ಹೆಚ್ಚಿದೆ. ಇದರಿಂದ ಭೂಮಿ ಮೇಲಿನ ಮನುಷ್ಯ, ಪ್ರಾಣಿಸಂಕುಲ ಹಾಗೂ ಸಸ್ಯಗಳು ಈ ರಿಡೇಯೇಶನ್‌ಗೆ ನಶಿಸಿ ಹೋಗಲಿದೆ ಎಂದು ದೂರಿನಲ್ಲಿ ಚಾವ್ಲಾ ಉಲ್ಲೇಖಿಸಿದ್ದರು. ಆದರೆ ಈ ಅರ್ಜಿ ಮಾಧ್ಯಮ ಪ್ರಚಾರ ಗಿಟ್ಟಿಸಿಕೊಳ್ಳಲ ಹಾಗೂ ಕಾನೂನ ಪ್ರಕ್ರಿಯೆ ದುರುಪಯೋಗ ಪಡಿಸಕೊಳ್ಳಲು ಬಳಸಿಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಹೀಗಾಗಿ ಅರ್ಜಿದಾರರಿಗೆ 20 ಲಕ್ಷ ರೂಪಾಯಿ ದಂಡ ವಿಧಿಸಿತ್ತು.