ಬೆಂಗಳೂರು(ಮೇ.06): ಕೊರೋನಾ ಲಾಕ್‌ಡೌನ್‌ನಿಂದ ವಿದೇಶಗಳಲ್ಲಿ ಸಿಲುಕಿರುವ 10 ಸಾವಿರಕ್ಕೂ ಹೆಚ್ಚು ಜನ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿರುವ 47 ಸಾವಿರಕ್ಕೂ ಹೆಚ್ಚು ಜನ ಸೇರಿದಂತೆ ಒಟ್ಟು 57 ಸಾವಿರ ಕನ್ನಡಿಗರು ಶೀಘ್ರದಲ್ಲೇ ತಾಯ್ನಾಡಿಗೆ ಹಿಂತಿರುಗಲಿದ್ದು, ಅದರಿಂದ ಯಾವುದೇ ಸಮಸ್ಯೆಯಾಗದಂತೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟುಬಿಗಿ ಕ್ರಮಗಳನ್ನು ಕೈಗೊಳ್ಳಬೇಕಾದ ಬಹುದೊಡ್ಡ ಸವಾಲು ರಾಜ್ಯ ಸರ್ಕಾರದ ಮೇಲಿದೆ.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮೇ 7ರಿಂದ (ಶುಕ್ರವಾರ) ವಾಪಸ್‌ ಕರೆತರಲಾಗುತ್ತದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ವಿದೇಶಗಳಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಪೈಕಿ 10,832 ಜನ ಕರ್ನಾಟಕದವರಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ 6,100 ಜನರು ತವರಿಗೆ ಮರಳಲಿದ್ದಾರೆ.

ಅಲ್ಲದೆ, ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ದೇಶದ 38 ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 47,355 ಜನ ಕರ್ನಾಟಕದ ಜನರು ಸಿಲುಕಿಕೊಂಡಿರುವುದಾಗಿ ಸರ್ಕಾರದ ಸಾಮಾನ್ಯ ನಾಗರಿಕ ಸೇವಾ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಈ ಪೈಕಿ 38,704 ಜನರು ಈಗಲೇ ರಾಜ್ಯಕ್ಕೆ ವಾಪಸ್‌ ಬರಲು ಸಿದ್ಧರಿದ್ದಾರೆ. ಪ್ರಕ್ರಿಯೆ ಆರಂಭವಾಗಿದೆ. ಉಳಿದವರು ಬೇರೆ ಬೇರೆ ಕಾರಣದಿಂದ ಸ್ವಲ್ಪ ತಡವಾಗಿ ಬರುವ ಸಾಧ್ಯತೆಗಳಿವೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಹೊರ ರಾಜ್ಯಗಳಿಂದ ಬರುವವರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದಿಂದ ಅತಿ ಹೆಚ್ಚು 10,121 ಜನ, ಮಣಿಪುರದಿಂದ 8463, ಆಂಧ್ರಪ್ರದೇಶದಿಂದ 6146, ಬಿಹಾರ 4576, ತಮಿಳುನಾಡಿನಿಂದ 7884, ಮಧ್ಯಪ್ರದೇಶದಿಂದ 3354, ತೆಲಂಗಾಣದಿಂದ 2978, ಉತ್ತರ ಪ್ರದೇಶದಿಂದ 2360, ರಾಜಸ್ಥಾನದಿಂದ 2575, ಕೇರಳದಿಂದ 3354 ಜನ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ. ಉಳಿದ ರಾಜ್ಯಗಳಿಂದ ಕನಿಷ್ಠ 100ರಿಂದ ಗರಿಷ್ಠ 2000 ಜನರು ರಾಜ್ಯಕ್ಕೆ ವಾಪಸಾಗಲಿದ್ದಾರೆ.

ಹಿಂದಿನ ತಪ್ಪು ಮರುಕಳಿಸದಿರಲಿ:

ದೇಶಕ್ಕೆ ಕೊರೋನಾ ಕಾಲಿಟ್ಟಿದ್ದೇ ಹೊರರಾಜ್ಯದವರಿಂದ ಹಾಗೂ ಹೊರ ದೇಶದಿಂದ ಬಂದ ಅನಿವಾಸಿ ಭಾರತೀಯರಿಂದ. ಅಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದೇಶದಿಂದ ಬಂದ ಎಲ್ಲರಿಗೂ ಕಟ್ಟುನಿಟ್ಟಾಗಿ ಆರೋಗ್ಯ ತಪಾಸಣೆ ಮಾಡಿ, ಸೋಂಕು ಪತ್ತೆಯಾಗಲಿ ಬಿಡಲಿ ಕ್ವಾರಂಟೈನ್‌ನಲ್ಲಿ ಇಡಲು ಕ್ರಮ ಕೈಗೊಳ್ಳದೆ ಕೊಂಚ ನಿರ್ಲಕ್ಷ್ಯ ತಾಳಿದ್ದವು. ಈ ತಪ್ಪು ಕರ್ನಾಟಕದಲ್ಲೂ ನಡೆಯಿತು.

ವಿದೇಶದಿಂದ ಬಂದ ಕನ್ನಡಿಗರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಯಿತಾದರೂ ಸೋಂಕು ಲಕ್ಷಣಗಳಿಲ್ಲ ಎಂದು ಮನೆಯಲ್ಲಿ ಸ್ವಯಂ ಕ್ವಾರಂಟೈನ್‌ನಲ್ಲಿರಲು ತಿಳಿಸಲಾಯಿತು. ಅಂತಹ ಅನೇಕ ಜನರಿಂದ ತಮ್ಮ ಪತಿ, ಪತ್ನಿ, ಮಕ್ಕಳು ಸೇರಿದಂತೆ ಇತರೆ ಕುಟುಂಬದವರಿಗೂ ಸೋಂಕು ಹಬ್ಬಿತು. ಇಂತಹ ಪ್ರಕರಣಗಳು ಸಾಕಷ್ಟುಸಿಗುತ್ತವೆ. ಇಂತಹದ್ದೇ ತಪ್ಪು ಈಗಲು ಆಗಬಾರದು. ಈಗ ಹೊರ ದೇಶ, ಹೊರ ರಾಜ್ಯಗಳಿಂದ ಕರೆತರುವವರನ್ನು ಕಡ್ಡಾಯವಾಗಿ 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಬೇಕು ಎಂದು ತಜ್ಞರು ಹಾಗೂ ವೈದ್ಯರು ಒತ್ತಾಯಿಸಿದ್ದಾರೆ.

ಅನ್ಯರಾಜ್ಯದಿಂದ ಎಷ್ಟೆಷ್ಟು?

ಮಹಾರಾಷ್ಟ್ರ 10,121

ತಮಿಳುನಾಡು 7884

ಆಂಧ್ರಪ್ರದೇಶ 6146

ಬಿಹಾರ 4576

ಕೇರಳ 3354

ತೆಲಂಗಾಣ 2978

ರಾಜಸ್ಥಾನ 2575

ಉತ್ತರ ಪ್ರದೇಶ 2360

ಪಶ್ಚಿಮ ಬಂಗಾಳ 1140

ಜಾರ್ಖಂಡ್‌ 1508

ವಿದೇಶದಿಂದ ಬರುವವರು

ಪ್ರವಾಸಕ್ಕೆ ತೆರಳಿದವರು 4,408

ವಿದ್ಯಾರ್ಥಿಗಳು 3,074

ವಲಸೆ, ಉದ್ಯೋಗ 2,784

ಹಡಗು ಸಿಬ್ಬಂದಿ 557

ಒಟ್ಟು 10,823