5000 ತಾಂಡಾಗಳಿಗೆ ಕಂದಾಯ ಗ್ರಾಮ ಪಟ್ಟ: ಸಿಎಂ ಸಿದ್ದರಾಮಯ್ಯ
ರಾಜ್ಯದ ವಿವಿಧೆಡೆಯಿರುವ ಐದು ಸಾವಿರ ತಾಂಡಾಗಳನ್ನು ಗುರುತಿಸಿ ಕಂದಾಯ ಗ್ರಾಮವಾಗಿಸಲು ಬದ್ಧವಾಗಿದ್ದು, ಹಿಂದೆ ಇದಕ್ಕಾಗಿ ರಚಿಸಿದ್ದ ಅಧ್ಯಯನ ಸಮಿತಿಗೆ ಜೀವ ತುಂಬುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಬೆಂಗಳೂರು (ಅ.06): ರಾಜ್ಯದ ವಿವಿಧೆಡೆಯಿರುವ ಐದು ಸಾವಿರ ತಾಂಡಾಗಳನ್ನು ಗುರುತಿಸಿ ಕಂದಾಯ ಗ್ರಾಮವಾಗಿಸಲು ಬದ್ಧವಾಗಿದ್ದು, ಹಿಂದೆ ಇದಕ್ಕಾಗಿ ರಚಿಸಿದ್ದ ಅಧ್ಯಯನ ಸಮಿತಿಗೆ ಜೀವ ತುಂಬುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಅವರು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ನಿರ್ಮಿಸಲಾದ ಬಂಜಾರ ಭವನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿಸಲು ತೀರ್ಮಾನಿಸಿ ಕಾನೂನಿಗೆ ತಿದ್ದುಪಡಿ ತರಲಾಯಿತು. ಅದಕ್ಕಾಗಿ ಲಕ್ಷ್ಮೀ ನರಸಿಂಹಯ್ಯ ಸಮಿತಿ ರಚಿಸಿ ವರದಿ ಪಡೆದವು. ನಮ್ಮ ಕಾಲದಲ್ಲಿ 2,800 ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಮಾಡಲಾಯಿತು. ಆದರೆ, ಮುಂದೆ ಬಂದ ಬಿಜೆಪಿ ಕೇವಲ 300ನ್ನು ಕಂದಾಯ ಗ್ರಾಮವಾಗಿಸಿತು. ಇನ್ನೂ ಉಳಿದುಕೊಂಡಿರುವ 5 ಸಾವಿರ ತಾಂಡಾಗಳಿಗೆ ಗ್ರಾಮದ ಸ್ಥಾನಮಾನ ನೀಡಲು ಹಿಂದಿನ ಸಮಿತಿಗೆ ಜೀವ ತುಂಬುತ್ತೇವೆ ಎಂದು ಘೋಷಿಸಿದರು.
ಸರ್ಕಾರ ಹಿಂದೂ ವಿರೋಧಿ ಮಾತ್ರವಲ್ಲ, ಮಹಿಳೆಯ ವಿರೋಧಿ ಸರ್ಕಾರ: ನಳೀನ್ ಕುಮಾರ್ ಕಟೀಲ್
ಬಂಜಾರ ಸಮುದಾಯದ ಏಳ್ಗೆಗೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಗಳ ಪಟ್ಟಿ ನೀಡಿದ ಅವರು, ಸೇವಾಲಾಲ್ ಅಧ್ಯಯನ ಪೀಠ ರಚನೆ, ಸೇವಾಲಾಲ್ ಜಯಂತಿ ಆಚರಣೆ ಆರಂಭಿಸಿದ್ದು ನಾವು. ಅಭಿವೃದ್ಧಿ ನಿಗಮ ಸ್ಥಾಪಿಸಿ 375 ಕೋಟಿ ರು. ಕೊಟ್ಟೆವು. ಕಡಿಮೆ ಬಜೆಟ್ ಇದ್ದಾಗ ಹೆಚ್ಚು ಅನುದಾನ ನೀಡಿದೆವು. ಆದರೆ, ಬಿಜೆಪಿಯವರು ದೊಡ್ಡ ಗಾತ್ರದ ಬಜೆಟ್ ಮಂಡಿಸಿ ಕಡಿಮೆ ಅನುದಾನ ಕೊಟ್ಟರು ಎಂದು ಟೀಕಿಸಿದರು. ಸುರಗೊಂಡನಕೊಪ್ಪನದಲ್ಲಿ ಸೇವಾಲಾಲ್ ವಸತಿ ಶಾಲೆ, ಬಂಜಾರ ಭವನಕ್ಕೆ ಹೆಚ್ಚಿನ ಅನುದಾನ ಸೇರಿದಂತೆ ಇತರೆ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ನೀಡುತ್ತೇನೆ ಎನ್ನುವ ಭರವಸೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಂಜಾರ ಸಮುದಾಯದ ಬದುಕು, ಬವಣೆ, ಸರಳ ಜೀವನವನ್ನು ಕಣ್ಣಾರೆ ಕಂಡಿದ್ದೇನೆ. ಸಮುದಾಯದವರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತು ಅನೇಕ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದೀರಿ, ನಿಮ್ಮ ಸಮುದಾಯದ ಏಳಿಗೆಗೆ ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಭರವಸೆ ನೀಡಿದರು. ಬಂಜಾರ ಕರಕುಶಲ ವಸ್ತು ಪ್ರದರ್ಶನ ಉದ್ಘಾಟಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗ್ರಾಮೀಣ ಬಡಜನತೆ ಸ್ವಾವಲಂಬನೆಯ ಜೀವನ ಸಾಧಿಸಬೇಕು ಎಂಬ ಕಾರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಬಂಜಾರ ಸಮುದಾಯ ಶೈಕ್ಷಣಿಕ, ಔದ್ಯೋಗಿಕ , ಸಾಮಾಜಿಕ ಬೆಳವಣಿಗೆ ಕಾಣಬೇಕು ಎಂದರು.
ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಸೇವಾಲಾಲ್ ಪ್ರತಿಮೆ ಅನಾವರಣಗೊಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಶಾಸಕರಾದ ನೇಮಿರಾಜ ನಾಯ್ಕ್ ಇದ್ದರು. ಮಾಜಿ ಸಚಿವೆ, ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷೆ ಬಿ.ಟಿ.ಲಲಿತಾನಾಯಕ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಅವಿನಾಶ್ ಜಾದವ್, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಸಿದ್ಯಾನಾಯ್ಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇದ್ದರು.
BPL, APL ಕಾರ್ಡ್‌ದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಇಂದಿನಿಂದಲೇ ಈ ಅವಕಾಶ!
ಸಂಸದ ಜಾಧವ್‌ಗೆ ಸಿಎಂ ತಿರುಗೇಟು: ಕಲಬುರಗಿ ಸಂಸದ ಉಮೇಶ್ ಜಾಧವ್ ಮಾತನಾಡುತ್ತ, ಬಿಜೆಪಿ ಕಾಲದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಬಂಜಾರ ಸಮುದಾಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದರು. ಬಳಿಕ ಮಾತಿಗೆ ಬಂದ ಸಿದ್ದರಾಮಯ್ಯ ಅವರು, ‘ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ನಾವು ಮುನ್ನುಡಿ ಬರೆದೆವು. ಆದರೆ, ಬಿಜೆಪಿಯವರು ನಮ್ಮ ಕೆಲಸವನ್ನು ತಾವು ಮಾಡಿದ್ದು ಎಂದು ಹೇಳಿಕೊಂಡರು. ಕೇವಲ ಒಂದಿಷ್ಟು ಜನರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ಮಾಡಿ ಸೇಡಂಗೆ ಪ್ರಧಾನಿ ಮೋದಿ ಕರೆಸಿ ಹಕ್ಕುಪತ್ರ ಕೊಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಇದು ಹೇಗಿದೆ ಅಂದರೆ, ‘ಅಟ್ಟಿಕ್ಕಿದವರಿಗಿಂತ ಬೊಟ್ಟಿಕ್ಕಿದವರು ಮೇಲು’ ಎನ್ನುವ ಗಾದೆ ಮಾತಿನಂತಾಗಿದೆ ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವ್ಯಂಗ್ಯವಾಡಿದರು.