Asianet Suvarna News Asianet Suvarna News

ರಾಜ್ಯದ ಸೋಂಕಿತರಿಗೆ NRI ವೈದ್ಯರ ಫೋನ್ ಟ್ರೀಟ್ಮೆಂಟ್!

* 50 ಎನ್‌ಆರ್‌ಐ ವೈದ್ಯರಿಂದ ರಾಜ್ಯದ ಸೋಂಕಿತರಿಗೆ ಚಿಕಿತ್ಸೆ

* ಕರ್ನಾಟಕ ಸ್ವಯಂ ಸೇವಕರ ತಂಡದ ಸೇವೆ

* ಬಿಎಂಸಿ ಹಳೆ ವಿದ್ಯಾರ್ಥಿಗಳಿಂದ ‘ಫೋನ್‌ ಟ್ರೀಟ್ಮೆಂಟ್‌’

50 NRI Doctors Giving Treatmrent To Covid Patients Of Karnataka pod
Author
Bangalore, First Published May 23, 2021, 11:11 AM IST

ಬೆಂಗಳೂರು(ಮೇ.23): ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜ್ಯದ ಜನರಿಗೆ ಅಗತ್ಯ ವೈದ್ಯಕೀಯ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಗುಣಮುಖರನ್ನಾಗಿ ಮಾಡುವ ಕೆಲಸವನ್ನು ವಿದೇಶದಲ್ಲಿ ನೆಲೆಸಿರುವ ಕನ್ನಡಿಗ ವೈದ್ಯರೂ ಮಾಡುತ್ತಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನೆರವಾಗುತ್ತಿದ್ದಾರೆ.

ಬೆಂಗಳೂರು ಮೆಡಿಕಲ್‌ ಕಾಲೇಜಿನ 1992ನೇ ಸಾಲಿನ ಅನೇಕ ವಿದ್ಯಾರ್ಥಿಗಳು ವಿದೇಶದಲ್ಲೇ ಇದ್ದುಕೊಂಡು ಕರ್ನಾಟಕ ಸ್ವಯಂ ಸೇವಕರ ತಂಡ (ಕೆಸಿವಿಟಿ)ದ ಸಹಾಯದೊಂದಿಗೆ ವೈದ್ಯಕೀಯ ಸೇವೆ ನೀಡುವ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಈವರೆಗೆ 10 ಸಾವಿರ ಸೋಂಕಿತರ ಜೊತೆ ಕೆಸಿವಿಟಿ ಸಂಪರ್ಕ ಸಾಧಿಸಿದೆ. ಜೊತೆಗೆ ಒಂದು ಸಾವಿರಕ್ಕೂ ಹೆಚ್ಚು ವೈದ್ಯರು ರೋಗಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಲಹೆ, ಸೂಚನೆ ನೀಡಿದ್ದಾರೆ.

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

ಕೆಸಿವಿಟಿ ಗುಂಪಿನಲ್ಲಿ ವಿದೇಶಗಳಲ್ಲಿ ನೆಲೆಸಿರುವ 50ಕ್ಕೂ ಹೆಚ್ಚು ಕನ್ನಡಿಗ ವೈದ್ಯರ ಜೊತೆಗೆ, ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗ ವೈದ್ಯರು ಕೈಜೋಡಿಸಿದ್ದಾರೆ. ಅಷ್ಟೇ ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 800ಕ್ಕೂ ಹೆಚ್ಚು ಸ್ವಯಂಸೇವಕರು ಈ ಸೇವೆಯಲ್ಲಿ ನಿರತರಾಗಿದ್ದು, ಸೋಂಕಿತರ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿದ್ದಾರೆ.

ಪೋರ್ಟಲ್‌ ಮೂಲಕ ವೈದ್ಯರ ಸಂಪರ್ಕ:

ಕೊರೋನಾ ಸೋಂಕಿತರಿಗೆ ನೆರವಾಗಲು ಕೆಸಿವಿಟಿ ಗುಂಪು ವೆಬ್‌ ಪೋರ್ಟಲ್‌ ಸಿದ್ಧಪಡಿಸಿಕೊಂಡಿದೆ. ಈ ಪೋರ್ಟಲ್‌ನಲ್ಲಿ ಕೆಸಿವಿಟಿ ಸಂಪರ್ಕದಲ್ಲಿರುವ ಎಲ್ಲ ಸೋಂಕಿತರ ಆರೋಗ್ಯದ ಸ್ಥಿತಿಗತಿ ಹಾಗೂ ಮೊಬೈಲ್‌ ಸಂಖ್ಯೆ ಸೇರಿದಂತೆ ಸಂಪೂರ್ಣ ದತ್ತಾಂಶವನ್ನು ಸೇರ್ಪಡೆ ಮಾಡಲಾದೆ. ಸ್ವಯಂ ಸೇವಕರು ಸೋಂಕಿತರ ಮೇಲೆ ನಿಗಾ ಇರಿಸುತ್ತಾರೆ. ಸೋಂಕಿತರ ಆರೋಗ್ಯದ ಸ್ಥಿತಿ ಗಂಭೀರವಿದ್ದಲ್ಲಿ ಪೋರ್ಟಲ್‌ ಮೂಲಕ ವೈದ್ಯರಿಗೆ ನೇರವಾಗಿ ಸಂದೇಶ ರವಾನೆಯಾಗಲಿದೆ. ತಕ್ಷಣ ವೈದ್ಯರು ದೂರವಾಣಿ ಮೂಲಕ ಸೋಂಕಿತರನ್ನು ಸಂಪರ್ಕಿಸಿ ವೈದ್ಯಕೀಯ ಸಲಹೆ ನೀಡುತ್ತಾರೆ. ಜೊತೆಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಅಗತ್ಯವಿದ್ದಲ್ಲಿ ಸ್ವಯಂ ಸೇವಕರಿಗೆ ಸೂಚನೆ ನೀಡುತ್ತಾರೆ. ಸ್ವಯಂಸೇವಕರು ತಕ್ಷಣ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಗುಂಪಿನ ಸದಸ್ಯ ಪ್ರಕಾಶ್‌ ಮಾಹಿತಿ ನೀಡಿದರು.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಪ್ರತಿ ಜಿಲ್ಲೆಯಲ್ಲಿ ಸ್ವಯಂ ಸೇವಕರು:

ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು 800ಕ್ಕೂ ಹೆಚ್ಚು ಸ್ವಯಂಸೇವಕರು ಕೆಸಿವಿಟಿ ಗುಂಪಿನಲ್ಲಿದ್ದಾರೆ. ಇವರು ಆಯಾ ಜಿಲ್ಲೆಗಳ ಸೋಂಕಿತರ ಸಂಪರ್ಕದಲ್ಲಿರಲಿದ್ದು, ಪ್ರತಿ ದಿನ ಸೋಂಕಿತರಿಗೆ ಕರೆ ಮಾಡಿ ಆರೋಗ್ಯ ಸ್ಥಿತಿಗತಿಯ ಮೇಲೆ ನಿಗಾ ಇರಿಸಲಿದ್ದಾರೆ.

ಸೋಂಕಿತರಿಗಾಗಿ 080- 47166115 ಸಹಾಯವಾಣಿ ಪರಿಚಯಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದ ಈ ಸಂಖ್ಯೆಗೆ ಕರೆ ಮಾಡಬಹುದು. ಕರೆ ಮಾಡಿ ವಿವರ ನೀಡಿದಲ್ಲಿ ಆಯಾ ಜಿಲ್ಲೆಗಳಲ್ಲಿರುವ ಸ್ವಯಂಸೇವಕರು ಸೋಂಕಿತರಿಗೆ ಕರೆ ಮಾಡಿ ಆರೋಗ್ಯ ಸ್ಥಿತಿಗತಿಯ ಬಗ್ಗೆ ವಿವರಣೆ ಪಡೆದು ಪ್ರತಿ ದಿನ ವೆಬ್‌ ಪೋರ್ಟಲ್‌ನಲ್ಲಿ ಸೇರ್ಪಡೆ ಮಾಡಲಿದ್ದಾರೆ ಎಂದು ಪ್ರಕಾಶ್‌ ಅವರು ವಿವರಿಸಿದರು.

ಅಗತ್ಯವಿರುವ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ:

ಕೆಸಿವಿಟಿ ಗುಂಪಿನ ಸಂಪರ್ಕದಲ್ಲಿರುವ ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾದಲ್ಲಿ ಆಯಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗುವುದು. ಜೊತೆಗೆ, ಬಿಬಿಎಂಪಿ ಮತ್ತು ಜಿಲ್ಲಾಡಳಿತಗಳೊಂದಿಗೆ ಸಂಪರ್ಕದಲ್ಲಿದ್ದು ತಕ್ಷಣ ಆಕ್ಸಿಜನ್‌ ವ್ಯವಸ್ಥೆಯುಳ್ಳ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನೆರವಾಗುವಂತೆ ಮಾಡುತ್ತೇವೆ. ಜೊತೆಗೆ, ಅಗತ್ಯವಿರುವ ಸೋಂಕಿತರಿಗೆ ಪಲ್ಸ್‌ ಆಕ್ಸಿಮೀಟರ್‌ ಮತ್ತು ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ದೂರಸಂಪರ್ಕ ಚಿಕಿತ್ಸೆ

ರಾಜ್ಯದ ಸೋಂಕಿತರು 080-47166115ಕ್ಕೆ ಕರೆ ಮಾಡಬಹುದು. ಸ್ವಯಂ ಸೇವಕರು ಇವರನ್ನು ದೇಶ ಹಾಗೂ ವಿದೇಶದಲ್ಲಿರುವ ಕನ್ನಡಿಗ ವೈದ್ಯರ ಸಂಪರ್ಕಕ್ಕೆ ತರುತ್ತಾರೆ. ಅವರು ಫೋನ್‌ನಲ್ಲೇ ಮಾರ್ಗದರ್ಶನ ನೀಡುತ್ತಾರೆ. ಹೀಗೆ ಈವರೆಗೆ 10 ಸಾವಿರಕ್ಕೂ ಹೆಚ್ಚು ಸೋಂಕಿತರಿಗೆ ವೈದ್ಯಕೀಯ ನೆರವು ನೀಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios