Asianet Suvarna News Asianet Suvarna News

ರಾಜ್ಯದಲ್ಲೀಗ 5 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!

5 ಲಕ್ಷ ದಾಟಿದ ದೇಶದ 4ನೇ ರಾಜ್ಯ ಎಂಬ ಅಪ​ಖ್ಯಾ​ತಿ| ದಾಖ​ಲೆಯ 179 ಮಂದಿ ಸಾವು| ಶುಕ್ರವಾರ ಹೊಸ​ದಾಗಿ 8,626 ಪ್ರಕ​ರ​ಣ, 10,949 ಗುಣ​ಮು​ಖ| 

5 Lakh Coronavirus Cases in Karnatakagrg
Author
Bengaluru, First Published Sep 19, 2020, 9:32 AM IST

ಬೆಂಗಳೂರು(ಸೆ.19): ರಾಜ್ಯದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ ಶುಕ್ರವಾರ 5 ಲಕ್ಷ ದಾಟಿದೆ. ಶುಕ್ರವಾರ ಹೊಸದಾಗಿ 8,626 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗುವುದರೊಂದಿಗೆ ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಬಳಿಕ ಅರ್ಧ ಮಿಲಿಯನ್‌ ಕೊರೋನಾ ಸೋಂಕಿತರನ್ನು ಹೊಂದಿರುವ ರಾಜ್ಯ ಎಂಬ ಅಪಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ಇದೇ ವೇಳೆ ಶುಕ್ರವಾರ 179 ಮಂದಿ ಕೊರೋನಾಗೆ ಬಲಿಯಾಗಿದ್ದು, ಇದು ರಾಜ್ಯದಲ್ಲಿ ಕರೋನಾಕ್ಕೆ ಒಂದೆ ದಿನ ಬಲಿಯಾದ ಸರ್ವಾಧಿಕ ಸಂಖ್ಯೆಯಾಗಿದೆ.

ರಾಜ್ಯದಲ್ಲಿ ಶುಕ್ರವಾರಕ್ಕೆ ಕರೋನಾ ಸೋಂಕಿತರ ಒಟ್ಟು ಸಂಖ್ಯೆ 5,02,982 ಆಗಿದೆ. ಕರ್ನಾಟಕದಲ್ಲಿ ಮಾಚ್‌ರ್‍ 9 ರಂದು ಮೊದಲ ಕೊರೋನಾ ಪ್ರಕರಣ ವರದಿಯಾಗಿತ್ತು. ಇದಾದ ಆರು ತಿಂಗಳು ಹತ್ತು ದಿನಗಳ ಬಳಿಕ 5 ಲಕ್ಷದ ಗಡಿ ದಾಟಿದೆ. ಜೂನ್‌ ಅಂತ್ಯದವರೆಗೂ ಕೊರೋನಾ ಹಬ್ಬುವಿಕೆ ತುಸು ನಿಯಂತ್ರಣದಲ್ಲಿತ್ತು. ಅನಂತರ ಅಂಕುಶವಿಲ್ಲದೆ ಕರೋನಾ ಹಬ್ಬುತ್ತಿದೆ. ಅದರಲ್ಲಿಯೂ ಆಗಸ್ಟ್‌ ತಿಂಗಳಲ್ಲಿ ಬಹುತೇಕ ಎಲ್ಲ ರೀತಿಯ ಲಾಕ್‌ಡೌನ್‌ಗಳು ಸಡಿಲಗೊಂಡಿರುವುದು ಮತ್ತು ಕೊರೋನಾ ಹಬ್ಬದಂತೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಜನರ ಮೈ ಮರೆವಿನ ಪರಿಣಾಮ ಬಹುತೇಕ ನಿತ್ಯ 9,000 ಸಮೀಪ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ.

ದಾಖಲೆ ಸಾವು!:

ರಾಜ್ಯದಲ್ಲಿ ಶುಕ್ರವಾರ 179 ಮಂದಿಯನ್ನು ಕೊರೋನಾ ಬಲಿ ತೆಗೆದುಕೊಂಡಿದೆ. ಆಗಸ್ಟ್‌ 25 ರಂದು ಒಂದೇ ದಿನ 148 ಮಂದಿ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಕೊರೋನಾ ರಾಜ್ಯದಲ್ಲಿ ಈ ವರೆಗೆ 7808 ಮಂದಿಯ ಪ್ರಾಣವನ್ನು ಕಿತ್ತುಕೊಂಡಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 1.60ಗಿಂತ ಕಡಿಮೆ ದರದಲ್ಲಿ ಮರಣ ಪ್ರಮಾಣವಿತ್ತು. ಆದರೆ ಶುಕ್ರವಾರ ಈ ಮರಣ ದರ 2.07ಗೆ ಏರಿದ್ದು ಆತಂಕ ಸೃಷ್ಟಿಸಿದೆ.

ಶುಕ್ರವಾರ ಕರ್ನಾಟಕದಲ್ಲಿ ಕೊರೋನಾ ಸೊಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..!

ಇದೇ ವೇಳೆ 10,949 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ 3.94 ಲಕ್ಷ ಮಂದಿ ಕೊರೋನಾವನ್ನು ಜಯಿಸಿದ್ದಾರೆ. ಶನಿವಾರ ಈ ಸಂಖ್ಯೆ 4 ಲಕ್ಷ ದಾಟುವ ನಿರೀಕ್ಷೆಯಿದೆ. ಸದ್ಯ 1,01,129 ಲಕ್ಷ ಸಕ್ರೀಯ ಕೊರೋನಾ ಪ್ರಕರಣಗಳು ರಾಜ್ಯದಲ್ಲಿವೆ. ಇವರಲ್ಲಿ 814 ಮಂದಿ ವಿವಿಧ ಕೋವಿಡ್‌ ಅಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 57,470 ಕೋವಿಡ್‌ ಟೆಸ್ಟ್‌ ಗಳ ವರದಿ ಮಾತ್ರ ಬಂದಿದೆ.

ಹೆಚ್ಚಳಕ್ಕೆ ವಿಳಂಬ ವರದಿಯೇ ಕಾರಣ?:

ರಾಜ್ಯದಲ್ಲಿ ಸರ್ಕಾರಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿನ ಕೊರೋನಾದಿಂದ ಮೃತರಾದವರು ಮತ್ತು ಕೊರೋನಾ ಜಯಿಸಿದವರ ಸಂಖ್ಯೆ ರಾಜ್ಯದ ಆರೋಗ್ಯ ವರದಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಶುಕ್ರವಾರ ಕೆಲ ಜಿಲ್ಲೆಗಳ ಹಳೆ ಬಾಕಿ ಕೂಡ ಸೇರಿ ವರದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಸಾವು ಮತ್ತು ಗುಣಮುಖರ ಸಂಖ್ಯೆ ಹೆಚ್ಚಾಗಿದೆ.

ಸೋಂಕಿನ ಮೈಲಿಗಲ್ಲು

ಮೊದಲ ಕೋವಿಡ್‌ ಪ್ರಕರಣ ಮಾರ್ಚ್‌ 9

1 ಲಕ್ಷದ ಕೋವಿಡ್‌ ಪ್ರಕರಣ ಜುಲೈ 27
2 ಲಕ್ಷದ ಕೋವಿಡ್‌ ಪ್ರಕರಣ ಆಗಸ್ಟ್‌ 13
3 ಲಕ್ಷದ ಕೋವಿಡ್‌ ಪ್ರಕರಣ ಆಗಸ್ಟ್‌ 26
4 ಲಕ್ಷದ ಕೋವಿಡ್‌ ಪ್ರಕರಣ ಸೆಪ್ಟೆಂಬರ್‌ 7
5 ಲಕ್ಷದ ಕೋವಿಡ್‌ ಪ್ರಕರಣ ಸೆಪ್ಟೆಂಬರ್‌ 18

ಸಾವು-ಸೋಂಕು:

ರಾಜ್ಯದ 5 ಜಿಲ್ಲೆಗಳಲ್ಲಿ ಎರಡಂಕಿಯ ಕೋವಿಡ್‌ ಸೋಂಕಿತರ ಮರಣದ ವರದಿಯಾಗಿದೆ. ಬೆಂಗಳೂರು ನಗರ 37, ಬಳ್ಳಾರಿ 25, ಶಿವಮೊಗ್ಗ 18, ಮೈಸೂರು 17, ದಕ್ಷಿಣ ಕನ್ನಡ 11 ಮಂದಿ ಕೊರೋನಾದಿಂದ ಅಸು ನೀಗಿದ್ದಾರೆ. ಧಾರವಾಡ 9, ಬೆಳಗಾವಿ ಮತ್ತು ಕೊಪ್ಪಳ ತಲಾ 8, ಬೆಂಗಳೂರು ಗ್ರಾಮಾಂತರ 7, ಹಾವೇರಿ, ಕಲಬುರುಗಿ ತಲಾ 6, ಉಡುಪಿ 5, ಬಾಗಲಕೋಟೆ, ಚಿಕ್ಕಮಗಳೂರು, ಕೊಡಗು, ತುಮಕೂರು, ಉತ್ತರಕನ್ನಡ ತಲಾ 3, ಮಂಡ್ಯ, ಗದಗ ತಲಾ 2, ವಿಜಯಪುರ, ಹಾಸನ, ರಾಯಚೂರುದಲ್ಲಿ 1 ಸಾವು ಸಂಭವಿಸಿದೆ.

ಬೆಂಗಳೂರು ನಗರದಲ್ಲಿ 3,623, ಮೈಸೂರು 600, ಉಡುಪಿ 493, ದಕ್ಷಿಣ ಕನ್ನಡ 456, ಬಳ್ಳಾರಿ 296, ಶಿವಮೊಗ್ಗ 257, ಬೆಳಗಾವಿ 221, ತುಮಕೂರು 208, ಬಾಗಲಕೋಟೆ 206, ಉತ್ತರ ಕನ್ನಡ 181, ಕಲಬುರಗಿ 179, ಕೊಪ್ಪಳ 176, ಹಾಸನ 173, ದಾವಣಗೆರೆ 146, ಯಾದಗಿರಿ 143, ಚಿತ್ರದುರ್ಗ 141, ಧಾರವಾಡ 135, ರಾಯಚೂರು ಮತ್ತು ಹಾವೇರಿ ತಲಾ 116, ಬೆಂಗಳೂರು ಗ್ರಾಮಾಂತರ 112, ಚಿಕ್ಕಮಗಳೂರು 109, ವಿಜಯಪುರ 86, ರಾಮನಗರ 70, ಮಂಡ್ಯ 69, ಚಾಮರಾಜನಗರ 67, ಚಿಕ್ಕಬಳ್ಳಾಪುರ ಮತ್ತು ಕೋಲಾರ 63, ಬೀದರ್‌ 46, ಕೊಡಗು 44, ಗದಗ 31 ಕೊರೋನಾ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿವೆ.

ಕೊರೋನಾ ವಿರುದ್ಧ ಹೀಗೂ ಸಮರ ಸಾರಿದ್ದಾರೆ ಕೆಲವರು!

"

Follow Us:
Download App:
  • android
  • ios