ಬೆಳಗಾವಿ(ಜ.15): ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ದಾರುಣ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ನಡೆದಿದೆ.

ಸವದತ್ತಿ ತಾಲೂಕು ಕಡಬಿ ಶಿವಾಪುರ್ ಬಳಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು ಕಡಬಿ ಗ್ರಾಮದವರಾದ ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಲಗಮಣ್ಣ ಪೂಜೇರಿ(38), ಪಾರವ್ವ ಪೂಜೇರಿ(50) ಮತ್ತು ಲಕ್ಷ್ಮೀ ಪೂಜೇರಿ(40)  ಸಾವಿಗೀಡಾಗಿದ್ದಾರೆ.

ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು ಗೋಕಾಕ್‌ನಲ್ಲಿ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ವಾಪಾಸಾಗುತ್ತಿದ್ದರು.

ಘಟಪ್ರಭಾ ಎಡದಂಡೆ ಕಾಲುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಕಾಲುವೆಗೆ ಉರುಳಿ ಬಿದ್ದಿದೆ. ಕಾಲುವೆಯಲ್ಲಿ ನೀರಿನ ಹರಿವು ಜೋರಾಗಿದ್ದ ಕಾರಣ ಕಾರು ನೀರಿನಲ್ಲಿ ಮುಳುಗಿ ಎಲ್ಲರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಕಾರು ಚಾಲಕ ಅಡಿವೇಪ್ಪ ಮಾಳಗಿ ಮಾತ್ರವೇ ಈಜಿ ದಡ ಸೇರಿದ್ದಾನೆ. ಕತ್ತಲಾವರಿಸಿದ್ದ ಕಾರಣ ಅಗ್ನಿಶಾಮಕ ದಳ ಸಹ ತಕ್ಷಣ ಕಾರ್ಯಾಚರಣೆ ನಡೆಸುವಲ್ಲಿ ಅಡ್ಡಿಯಾಗಿದೆ. 

ಮಂಗಳವಾರ ಬೆಳಿಗ್ಗೆ ನೀರಿನಲ್ಲಿ ಮುಳುಗಿದ್ದ ಕಾರು ಹಾಗೂ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನೆ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.

"