-ಆತ್ಮಭೂಷಣ್‌

ಧರ್ಮಸ್ಥಳ[ಫೆ.11]: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆರಂಭಗೊಂಡ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪರ್ವ ಕಾಲದಲ್ಲಿ ಭಾನುವಾರ ಐದು ಮಂದಿ ಬ್ರಹ್ಮಚಾರಿಗಳು ವೈಭೋಗದ ಜೀವನ ತ್ಯಜಿಸಿ ಜೈನ ಮುನಿ ದೀಕ್ಷೆ ಪಡೆದುಕೊಂಡರು.

ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಬೆಂಗಳೂರಿನ ಪಂಡಿತ ದಿವ್ಯಕುಮಾರ ಪುರೋಹಿತ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಐದು ಮಂದಿ ಕ್ಷುಲ್ಲಕ ದೀಕ್ಷೆಯನ್ನು ಸ್ವೀಕರಿಸಿದರು. ಆಚಾರ್ಯ ಶ್ರೀವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿಮಹಾರಾಜರ ಮಾರ್ಗದರ್ಶನದಲ್ಲಿ ಲೌಕಿಕ ಸಂಗ ಪರಿತ್ಯಾಗ ನಡೆಸಿದರು. ಈ ಅಪೂರ್ವ ಕಾರ್ಯಕ್ರಮಕ್ಕೆ ಆಚಾರ್ಯ 108 ವರ್ಧಮಾನ ಸಾಗರಜಿ ಮುನಿಮಹಾರಾಜರು, ದಿಗಂಬರ ಮುನಿಗಳು, ಆರ್ಯಿಕಾ ಮಾತಾಜಿಗಳು, ಜೈನ ಶ್ರಾವಕ, ಶ್ರಾವಕಿಯರು ಸಾಕ್ಷಿಯಾದರು.

ಸನ್ಯಾಸ ದೀಕ್ಷೆ ಪಡೆದ ಐವರು:

ಮಧ್ಯಪ್ರದೇಶದ ಸತೀಶ್‌ ಕುಮಾರ್‌ ಜೈನ್‌(ಸತೀಶ್‌ ಭೈಯ್ಯಾಜಿ), ಉತ್ತರ ಪ್ರದೇಶದ ಶಿವಂ ಕುಮಾರ್‌ ಜೈನ್‌, ಹೈದರಾಬಾದ್‌ನ ಪೂರಣ್‌ ಮಲ್‌ ಜೈನ್‌(ದದ್ದು ಭಯ್ಯಾ), ಬಳ್ಳಾರಿ ಜಿಲ್ಲೆಯ ಸಂಯಮ ದೀದಿ ಮತ್ತು ಬೆಳಗಾವಿಯ ಸಮತಾ ದೀದಿ ಕ್ಷುಲ್ಲಕ ದೀಕ್ಷೆ ಪಡೆದವರು. ಸನ್ಯಾಸ ದೀಕ್ಷೆ ಪಡೆದ ಬಳಿಕ ಇವರಿಗೆ ಹೊಸದಾಗಿ ನಾಮಕರಣ ಮಾಡಲಾಯಿತು. ಸತೀಶ್‌ ಕುಮಾರ್‌ ಜೈನ್‌ ಅವರಿಗೆ ಪರ್ವಸಾಗರಜಿ, ಶಿವಂ ಕುಮಾರ್‌ ಜೈನ್‌ ಅವರು ಪ್ರಭಾಕರ ಸಾಗರಜಿ, ಪೂರಣ್‌ ಮಲ್‌ ಜೈನ್‌ ಅವರು ಪರಮಾತ್ಮ ಸಾಗರ ಮಹಾರಾಜ್‌, ಸಂಯಮ ದೀದಿ ಅವರು ಅಮರಜ್ಯೋತಿ ಮಾತಾಜಿ ಹಾಗೂ ಸಮತಾ ದೀದಿ ಅವರು ಅಮೃತ ಜ್ಯೋತಿ ಮಾತಾಜಿಯಾಗಿ ನಾಮಾಂಕಿತಗೊಂಡರು.

ವೈಭೋಗ ತ್ಯಜಿಸಿ ವೈರಾಗ್ಯ:

ಸನ್ಯಾಸ ದೀಕ್ಷೆ ಪಡೆಯುವ ಈ ಐವರು ಬ್ರಹ್ಮಚಾರಿಗಳನ್ನು ಶನಿವಾರ ಸಂಜೆ ಧರ್ಮಸ್ಥಳದ ಪ್ರಮುಖ ಬೀದಿಗಳಲ್ಲಿ ರಾಜಪೊಷಾಕಿನೊಂದಿಗೆ ವೈಭವದ ಮೆರವಣಿಗೆ ನಡೆಸಲಾಯಿತು. ಲೌಕಿಕತೆಯಿಂದ ಸನ್ಯಾಸತ್ವಕ್ಕೆ ತೆರಳುವ ಮುನ್ನ ವೈಭೋಗದ ಅಂತಿಮ ಘಟ್ಟದ ದರ್ಶನ ಮಾಡಿಸಲಾಯಿತು. ಬಳಿಕ ಅರಸಿನ ಶಾಸ್ತ್ರ ನಡೆಸಲಾಯಿತು. ಭಕ್ತರು ಉಡಿ ತುಂಬಿಸಿದರು. ಸನ್ಯಾಸ ದೀಕ್ಷೆ ನೀಡಲಿರುವ ಪುಷ್ಪದಂತಸಾಗರ ಮುನಿಮಹಾರಾಜರ ಕುಂದಕುಂದ ಕುಟೀರದಲ್ಲಿ ಬ್ರಹ್ಮಚಾರಿಗಳು ರಾತ್ರಿ ಕಳೆದರು.

ಮರುದಿನ ಅಂದರೆ ಭಾನುವಾರ ರಾಜವೈಭವದ ಮೆರವಣಿಗೆಯಲ್ಲಿ ಬ್ರಹ್ಮಚಾರಿಗಳನ್ನು ಸಭಾಂಗಣಕ್ಕೆ ಕರೆತರಲಾಯಿತು. ನಂತರ ಸಭಾವೇದಿಕೆಯಲ್ಲಿ ಸನ್ಯಾಸ ಸ್ವೀಕಾರದ ವಿಧಿವಿಧಾನಗಳನ್ನು ನಡೆಸಲಾಯಿತು. ಮೊದಲು ತಮ್ಮ ಗುರುಗಳಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುಟುಂಬದ ಅನುಮತಿಯನ್ನು ಪಡೆದು ಸನ್ಯಾಸ ದೀಕ್ಷೆಯ ವಿಧಾನವನ್ನು ಆರಂಭಿಸಲಾಯಿತು. ಮೊದಲಿಗೆ ಅವರ ಕೇಶಲೋಚನ ಮಾಡಲಾಯಿತು. ಅಂದರೆ ಮುನಿಗಳು ಬ್ರಹ್ಮಚಾರಿಗಳ ತಲೆಯ ಕೂದಲನ್ನು ಕಿತ್ತುತೆಗೆದರು. ಬಳಿಕ ಈ ಬ್ರಹ್ಮಚಾರಿಗಳು ಧರಿಸಿದ್ದ ಒಂದೊಂದೇ ಆಭರಣಗಳನ್ನು ಕಳಚಿದರು. ವಸ್ತ್ರಗಳನ್ನೂ ತೆಗೆದು ಕುಟುಂಬದವರ ಕೈಗೆ ನೀಡಿದರು. ನಂತರ ಕೇವಲ ಎರಡು ವಸ್ತ್ರಗಳನ್ನು ಉಳಿಸಿಕೊಂಡು ಸನ್ಯಾಸ ದೀಕ್ಷೆಗೆ ಸನ್ನದ್ಧರಾದರು. ಬ್ರಹ್ಮಚಾರಿಗಳ ಕುಟುಂಬಸ್ಥರಲ್ಲದೆ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್‌ ಮತ್ತು ಅನಿತಾ ಸುರೇಂದ್ರ ಕುಮಾರ್‌, ಡಾ.ಹೆಗ್ಗಡೆ ಪುತ್ರಿ ಶ್ರದ್ಧಾ ಮತ್ತು ಅಮಿತ್‌ ದಂಪತಿ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

ಗೃಹಸ್ಥನಿಂದ ವೈರಾಗ್ಯಕ್ಕೆ

ಹೈದರಾಬಾದ್‌ನ ಮಟಿಕಾಶೇಟ್‌ ಎಂಬಲ್ಲಿ ಜನಿಸಿದ ಪೂರಣ್‌ ಮಲ್‌ ಜೈನ್‌ ಅವರು ಐದು ಮಕ್ಕಳ ತಂದೆ. 1972ರಲ್ಲಿ ಹೈದರಾಬಾದ್‌ನ ಒಸ್ಮಾನಿಯಾ ವಿವಿಯಲ್ಲಿ ಎಲ್‌ಎಲ್‌ಬಿ ತೇರ್ಗಡೆಯಾಗಿ 1975ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಪುತ್ರ, ಮೂವರು ಪುತ್ರಿಯರಿದ್ದಾರೆ. 2017ರಲ್ಲಿ ಬ್ರಹ್ಮಚಾರಿ ದೀಕ್ಷೆ ಪಡೆದರು.

14ನೇ ವಯಸ್ಸಿಗೆ ಬ್ರಹ್ಮಚಾರಿ:

1996ರಲ್ಲಿ ಜನಿಸಿದ ಸತೀಶ್‌ ಕುಮಾರ್‌ ಜೈನ್‌ ಅವರು ಮಧ್ಯಪ್ರದೇಶದ ದಮೋಹ್‌ ಜಿಲ್ಲೆಯ ಪುರ್ಲ ನಿವಾಸಿ. ತಂದೆ ಸುಮತ್‌ ಕುಮಾರ್‌ ಜೈನ್‌, ತಾಯಿ ಗುಡ್ಡೀಬಾಯಿ ಜೈನ್‌. ಮುನಿಶ್ರೀ ತರುಣಸಾಗರ ಮಹಾರಾಜರ ಜನ್ಮಸ್ಥಳ ಗಾವೂಂಜಿ ಗ್ರಾಮದಿಂದ 10 ಕಿ.ಮೀ. ದೂರದಲ್ಲಿದೆ ಇವರ ಊರು. ತನ್ನ 14ನೇ ವಯಸ್ಸಿನಲ್ಲಿ ಅಂದರೆ 2010ರಲ್ಲಿ ಬ್ರಹ್ಮಾಚಾರಿ ದೀಕ್ಷೆ ಪಡೆದಿದ್ದರು.

8ನೇ ತರಗತಿ ವಿದ್ಯಾಭ್ಯಾಸ:

ಶಿವಂ ಕುಮಾರ್‌ ಜೈನ್‌ ಅವರು ಕಲಿತದ್ದು ಕೇವಲ 8ನೇ ತರಗತಿ. 1996 ಮೇ 7ರಂದು ಉತ್ತರ ಪ್ರದೇಶದ ಇಟವಾದಲ್ಲಿ ಸುನಿತ್‌ ಕುಮಾರ್‌ ಜೈನ್‌ ಮತ್ತು ಮುನ್ನಿ ದೇವಿ ಜೈನ್‌ ದಂಪತಿ ಪುತ್ರನಾಗಿ ಜನಿಸಿದರು. 2011ರಲ್ಲಿ ಬ್ರಹ್ಮಚಾರಿ ದೀಕ್ಷೆ ಪಡೆದರು.

ಗೃಹಿಣಿಯೂ ವೈರಾಗ್ಯಕ್ಕೆ:

ಇಬ್ಬರು ಹೆಣ್ಣಕ್ಕಳು ಮತ್ತು ಮೂವರು ಗಂಡು ಮಕ್ಕಳ ಗೃಹಿಣಿ ಸಮತಾ ದೀದಿ ಅವರು ಬೆಳಗಾವಿಯ ಬುಡಕರಕಟ್‌ ನಿವಾಸಿ. ಇವರ ತಂದೆ ಅರ್ಜುನಪ್ಪ, ತಾಯಿ ರತ್ನಮ್ಮ. 108 ಜಿನವಾಣಿ ಮಾತಾಜಿ ಅವರಿಂದ ದೀಕ್ಷೆ ಪಡೆದಿದ್ದರು. ಸಂಯಮ ದೀದಿ ಅವರು 10 ವರ್ಷಗಳ ಹಿಂದೆ ಸಪ್ತಮ ಬ್ರಹ್ಮಚಾರಿ ಅವರಿಂದ ದೀಕ್ಷೆ ಪಡೆದರು.