Asianet Suvarna News Asianet Suvarna News

ಬೆಂಗಳೂರಿನಲ್ಲಿ ಕೇಸ್‌ ಇಳಿಕೆ, ರಾಜ್ಯದ ಇತರೆಡೆ ತೀವ್ರ ಏರಿಕೆ!

* ನಿನ್ನೆ ಬೆಂಗಳೂರಲ್ಲಿ 14,316 ಜನಕ್ಕೆ ಸೋಂಕು, ಇತರ ಜಿಲ್ಲೆಗಳಲ್ಲಿ 27,463 ಕೇಸ್‌

* ಬೆಂಗಳೂರಿನಲ್ಲಿ ಕೇಸ್‌ ಇಳಿಕೆ, ರಾಜ್ಯದ ಇತರೆಡೆ ತೀವ್ರ ಏರಿಕೆ

* ರಾಜ್ಯದ ಒಟ್ಟು ಸೋಂಕಿನಲ್ಲಿ ಶೇ.63ರಷ್ಟಿದ್ದ ಬೆಂಗಳೂರು ಪಾಲು ಶೇ.34ಕ್ಕೆ ಕುಸಿತ

41k fresh Covid cases in Karnataka 35k recover pod
Author
Bangalore, First Published May 15, 2021, 7:24 AM IST

ಬೆಂಗಳೂರು(ಮೇ.15): ರಾಜಧಾನಿ ಬೆಂಗಳೂರು ನಗರದಲ್ಲಿ ಕೋವಿಡ್‌ ಅಬ್ಬರ ತುಸು ಕಡಿಮೆ ಆದಂತೆ ಕಂಡುಬರುತ್ತಿದ್ದರೂ ರಾಜ್ಯದ ಅನ್ಯ ಭಾಗಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ. ಶುಕ್ರವಾರ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಹೆಚ್ಚಿನ ಕೋವಿಡ್‌ ಸಾವು ಮತ್ತು ಸೋಂಕಿನ ಪ್ರಕರಣ ದಾಖಲಾಗಿದ್ದು, 41,779 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 373 ಮಂದಿ ಮೃತರಾಗಿದ್ದಾರೆ. ದಾಖಲೆಯ 35,879 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 14,316 ಮಂದಿಯಲ್ಲಿ ಹಾಗೂ ಉಳಿದ ಕಡೆ 27,463 ಪ್ರಕರಣ ದಾಖಲಾಗಿದೆ. ಮೇ ಮೊದಲ ವಾರದವರೆಗೂ ರಾಜ್ಯದ ಒಟ್ಟು ಸೋಂಕಿನ ಪ್ರಕರಣದಲ್ಲಿ ಶೇ.57ರಿಂದ ಶೇ.63ರಷ್ಟಿದ್ದ ಬೆಂಗಳೂರಿನ ಪಾಲು ಈಗ ಶೇ.34ಕ್ಕೆ ಕುಸಿದಿದೆ. ಏಪ್ರಿಲ್‌ 21ರಂದು 13,460 ಪ್ರಕರಣ ದಾಖಲಾದ ಬಳಿಕ ಮೊದಲ ಬಾರಿಗೆ 15 ಸಾವಿರಕ್ಕಿಂತ ಕಡಿಮೆ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಶೇ.30ಕ್ಕಿಂತ ತುಸು ಕೆಳಗಿಳಿದಿದ್ದ ಪಾಸಿಟಿವಿಟಿ ದರ ಮತ್ತೆ ಶೇ.32.86ಕ್ಕೆ ಜಿಗಿದಿದೆ. ಮೇ 9ರ ಬಳಿಕ ಮತ್ತೆ ಹೊಸ ಪ್ರಕರಣಗಳ ಸಂಖ್ಯೆ 40 ಸಾವಿರದ ಗಡಿ ದಾಟಿದೆ. 1.27 ಲಕ್ಷ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5.98 ಲಕ್ಷಕ್ಕೆ ಏರಿಕೆ ಆಗಿದೆ.

ಸಾವಿನ ವಿವರ:

ಬೆಂಗಳೂರು ನಗರದಲ್ಲಿ 121 ಮಂದಿ ಮೃತರಾಗಿದ್ದು, ಉಳಿದಂತೆ ಬಳ್ಳಾರಿಯಲ್ಲಿ 26, ಕಲಬುರಗಿ 21, ಹಾಸನ 20, ತುಮಕೂರು 19, ಉತ್ತರ ಕನ್ನಡ 15, ಬಾಗಲಕೋಟೆ 14, ಮಂಡ್ಯ 13, ಮೈಸೂರು, ಬೆಂಗಳೂರು ಗ್ರಾಮಾಂತರ ತಲಾ 12, ಹಾವೇರಿ, ವಿಜಯಪುರ ತಲಾ 9, ಕೊಡಗು 8, ಯಾದಗಿರಿ, ಕೊಪ್ಪಳ, ಚಾಮರಾಜನಗರ 6, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಶಿವಮೊಗ್ಗ ತಲಾ 5, ಗದಗ, ಬೀದರ್‌ ಮತ್ತು ಬೆಳಗಾವಿ ತಲಾ 4, ಚಿಕ್ಕಮಗಳೂರು, ಉಡುಪಿ ತಲಾ 3, ಚಿತ್ರದುರ್ಗ 2, ದಾವಣಗೆರೆ ಮತ್ತು ಕೋಲಾರ ತಲಾ ಒಬ್ಬರು ಮರಣ ಹೊಂದಿದ್ದಾರೆ.

ಪ್ರಮುಖವಾಗಿ ತುಮಕೂರು 2,668, ಬಳ್ಳಾರಿ 2,421, ಮೈಸೂರು 2,340, ಬೆಳಗಾವಿ 1,592, ಮಂಡ್ಯ 1,385, ಹಾಸನ 1,339, ಉಡುಪಿ 1,219, ದಕ್ಷಿಣ ಕನ್ನಡ 1,215, ರಾಯಚೂರು 1,063, ಶಿವಮೊಗ್ಗ 1,045 ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 21.30 ಲಕ್ಷ ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು 15.10 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 21,085 ಮಂದಿ ಮೃತರಾಗಿದ್ದಾರೆ.

ಸೋಂಕಿನ ಏರಿಳಿತ

- ಮೇ ಮೊದಲ ವಾರದವರೆಗೂ ರಾಜ್ಯದ ಒಟ್ಟು ಸೋಂಕಿನ ಪ್ರಕರಣದಲ್ಲಿ ಬೆಂಗಳೂರಿನದು ಸಿಂಹಪಾಲು; ಈಗ ಇಳಿಕೆ

- ಏಪ್ರಿಲ್‌ 21ರ ನಂತರ ಬೆಂಗಳೂರಿನಲ್ಲಿ ನಿನ್ನೆ ಮೊದಲ ಬಾರಿ 15 ಸಾವಿರಕ್ಕಿಂತ ಕಡಿಮೆ ಪ್ರಕರಣ

- ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಶೇ.30ಕ್ಕಿಂತ ಕೆಳಗಿಳಿದಿದ್ದ ಪಾಸಿಟಿವಿಟಿ ದರ ಮತ್ತೆ ಶೇ.32.86ಕ್ಕೆ ಜಿಗಿತ

- ಮೇ 9ರ ಬಳಿಕ ರಾಜ್ಯದಲ್ಲಿ ಮತ್ತೆ ಹೊಸ ಪ್ರಕರಣಗಳ ಸಂಖ್ಯೆ ನಿನ್ನೆ 40 ಸಾವಿರಕ್ಕಿಂತ ಹೆಚ್ಚು

ಬೆಂಗಳೂರಲ್ಲಿ ಕೇಸ್‌ ಇಳಿಕೆಗೆ ಕಾರಣವೇನು?

ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣ ಕುಸಿಯಲು ಲಾಕ್‌ಡೌನ್‌ ಪರಿಣಾಮ ಕಾರಣವೇ ಅಥವಾ ಪರೀಕ್ಷಾ ಪ್ರಮಾಣದಲ್ಲಿ ದೊಡ್ಡ ಮಟ್ಟದ ಇಳಿಕೆ ದಾಖಲಾಗಿರುವುದು ಕಾರಣವೇ ಎಂಬುದರ ಬಗ್ಗೆ ಆರೋಗ್ಯ ತಜ್ಞರಲ್ಲಿ ಗೊಂದಲವಿದೆ. ಬೆಂಗಳೂರಿನಲ್ಲಿ ದಿನ ನಿತ್ಯ 75 ಸಾವಿರ ಮೀರಿ ನಡೆಯುತ್ತಿದ್ದ ಕೊರೋನಾ ಪರೀಕ್ಷೆ ಇದೀಗ 40 ಸಾವಿರದ ಆಸುಪಾಸಿಗೆ ಕುಸಿದಿದೆ.

"

ನಿನ್ನೆ 56 ಸಾವಿರ ಮಂದಿಗೆ ಲಸಿಕೆ

ರಾಜ್ಯದಲ್ಲಿ ಶುಕ್ರವಾರ 56,350 ಮಂದಿ ಲಸಿಕೆ ಪಡೆದಿದ್ದಾರೆ. ಈ ಪೈಕಿ 46,307 ಮಂದಿ ಎರಡನೇ ಡೋಸ್‌ ಲಸಿಕೆಯನ್ನು ಸ್ವೀಕರಿಸಿದ್ದು 10,043 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟ43,312 ಮಂದಿ, ಮುಂಚೂಣಿ ಕಾರ್ಯಕರ್ತರು 1,683, ಆರೋಗ್ಯ ಕಾರ್ಯಕರ್ತರು 1,492 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು 435, ಮುಂಚೂಣಿ ಕಾರ್ಯಕರ್ತರು 1,683, 18 ವರ್ಷದಿಂದ 44 ವರ್ಷದೊಳಗಿನ 3.067, 45 ವರ್ಷ ಮೇಲ್ಪಟ್ಟ4,368 ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ.

ಸತತ 3ನೇ ದಿನ ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಬಲಿ

ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಾ ಚೇತರಿಕೆ ಪ್ರಮಾಣ ಹೆಚ್ಚುತ್ತಿರುವ ಹೊರತಾಗಿಯೂ, ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಮತ್ತೆ ಕೊರೋನಾ ವೈರಸ್‌ ಅಬ್ಬರಕ್ಕೆ 4000 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಸತತ 3ನೇ ದಿನ ದೇಶದಲ್ಲಿ 4000ಕ್ಕಿಂತ ಹೆಚ್ಚ ಸಾವು ದಾಖಲಾದಂತೆ ಆಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 2,62,317ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 3,43,144 ಮಂದಿಗೆ ಹೊಸದಾಗಿ ಸೋಂಕು ವ್ಯಾಪಿಸಿದ್ದು, ಒಟ್ಟು ಸೋಂಕಿತರ ಸಂಖ್ಯೆ 2.40 ಕೋಟಿ ದಾಟಿದೆ. ಈ ಪೈಕಿ 2 ಕೋಟಿಗಿಂತ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಚೇತರಿಕೆ ಪ್ರಮಾಣ ಶೇ.83.50ಕ್ಕೆ ಸುಧಾರಿಸಿದೆ. ಇನ್ನು ಸಕ್ರಿಯ ಸೋಂಕಿತರ ಸಂಖ್ಯೆ 37,04,893 ಆಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios