ಬೆಂಗಳೂರು(ಮೇ.10): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶನಿವಾರ ಒಂದೇ ದಿನ ಮತ್ತೆ 41 ಜನರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.

ಹೊಸ 41 ಪ್ರಕರಣಗಳ ಪೈಕಿ ರಾಜಧಾನಿ ಬೆಂಗಳೂರಲ್ಲಿ 12, ಉತ್ತರ ಕನ್ನಡದ ಭಟ್ಕಳದಲ್ಲಿ 8, ದಾವಣಗೆರೆಯಲ್ಲಿ 6, ತುಮಕೂರು 4, ದಕ್ಷಿಣ ಕನ್ನಡದ ಬಂಟ್ವಾಳ, ಚಿತ್ರದುರ್ಗ ಮತ್ತು ಬೀದರ್‌ ತಲಾ 3, ವಿಜಯಪುರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಂದು ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಬೆಂಗಳೂರಿನ 12 ಪ್ರಕರಣಗಳ ಪೈಕಿ ಐವರು ಹೊಂಗಸಂದ್ರದ ಬಿಹಾರಿ ಕಾರ್ಮಿಕರಾಗಿದ್ದು, ಇವರಿಗೆ ಪಿ419 ಸಂಖ್ಯೆಯ ರೋಗಿಯಿಂದ ಸೋಂಕು ಹರಡಿದೆ. ಉಳಿದ ಏಳು ಪ್ರಕರಣಗಳು ಪಾದರಾಯನಪುರದಲ್ಲಿ ಪತ್ತೆಯಾಗಿದ್ದು, ಇಲ್ಲಿನ ಗಲಭೆಯಲ್ಲಿ ಭಾಗಿಯಾಗಿದ್ದ ಪಿ449 ಮತ್ತು ಪಿ454 ಸಂಖ್ಯೆಯ ಸೋಂಕಿತರ ಕುಟುಂಬ ಸದಸ್ಯರಾಗಿದ್ದಾರೆ.

ಸೋಂಕಿತೆ ಸಾವು ಬಚ್ಚಿಟ್ಟ ಖಾಸಗಿ ಆಸ್ಪತ್ರೆ ಈಗ ಸೀಲ್‌ಡೌನ್!

ತುಮಕೂರಿಗೂ ತಬ್ಲೀಘಿ ಕಂಟಕ:

ರಾಜ್ಯದಲ್ಲಿ ತಬ್ಲೀಘಿಗಳ ಕಂಟಕ ಹೆಚ್ಚಾಗುತ್ತಿದ್ದು ಚಿತ್ರದುರ್ಗದ ಬಳಿಕ ಈಗ ತುಮಕೂರಿಗೂ ವ್ಯಾಪಿಸಿದೆ. ಗುಜರಾತ್‌ನಿಂದ ಚಿತ್ರದುರ್ಗಕ್ಕೆ ಬಂದಿದ್ದ 33 ತಬ್ಲೀಘಿಗಳ ಪೈಕಿ ಮೂವರಿಗೆ ಶುಕ್ರವಾರ ಸೋಂಕು ದೃಢಪಟ್ಟಿತ್ತು. ಶನಿವಾರ ಇನ್ನೂ ಮೂವರು ತಬ್ಲೀಘಿಗಳಿಗೆ ಸೋಂಕು ಹರಡಿದೆ. ಇದರಿಂದ ಚಿತ್ರದುರ್ಗದಲ್ಲಿ ಒಟ್ಟು ತಬ್ಲೀಘಿ ಪ್ರಕರಣ ಸಂಖ್ಯೆ ಆರಕ್ಕೇರಿದೆ. ಅಲ್ಲದೆ, ಗುಜರಾತ್‌ನಿಂದ ತುಮಕೂರಿಗೆ ಬಂದಿದ್ದ ಮೂವರು ತಬ್ಲೀಘಿಗಳಿಗೂ ಸೋಂಕು ದೃಢಪಟ್ಟಿದೆ. ಜತೆಗೆ, ಬೆಂಗಳೂರಿನ ಪಾದರಾಯನಪುರದಿಂದ ಶಿರಾಗೆ ಹೋಗಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 11ರಷ್ಟಾಗಿದೆ.

ಕರಾವಳಿಯಲ್ಲಿ ಹೆಚ್ಚುತ್ತಿದೆ ಸೋಂಕು:

ಶುಕ್ರವಾರ ಇದ್ದಕ್ಕಿದ್ದಂತೆ 12 ಪ್ರಕರಣಗಳು ಪತ್ತೆಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಿ659 ಮತ್ತು ಪಿ740ನೇ ಸೋಂಕಿತರಿಂದ ಮತ್ತೆ 8 ಜನರಿಗೆ ಸೋಂಕು ಹರಡಿದೆ. Ü ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 32ಕ್ಕೇರಿದೆ. ಕೆಲ ದಿನ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳದಲ್ಲಿ ಮತ್ತೆ ಮೂವರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 25ರಷ್ಟಾಗಿದೆ.

ಲಾಕ್‌ಡೌನ್ ಸಡಿಲಿಕೆ ಬಳಿಕ ದೇಶದಲ್ಲಿ ಬರೋಬ್ಬರಿ 21000 ಕೇಸ್‌!

ದಾವಣಗೆರೆಯಲ್ಲಿ ನಿಲ್ಲದ ಸೋಂಕು:

ಬೆಣ್ಣೆ ನಗರಿಯಲ್ಲಿ ಸತತ ಐದನೇ ದಿನವೂ ಆರು ಜನರಿಗೆ ಸೋಂಕು ಹರಡಿದೆ. ಪಿ651ನೇ ಸೋಂಕಿತನಿಂದ ಇವರಿಗೆ ಕೋವಿಡ್‌ ಹರಡಿದೆ. ಮೇ 3ರ ವರೆಗೂ ಕೇವಲ 10ರ ಸಂಖ್ಯೆಯಲ್ಲಿದ್ದ ಜಿಲ್ಲೆಯ ಕೊರೋನಾ ಸೋಂಕಿತರ ಸಂಖ್ಯೆ ಐದೇ ದಿನದಲ್ಲಿ 67ಕ್ಕೆ ಏರಿದೆ. ಇನ್ನು ಚಿಕ್ಕಬಳ್ಳಾಪುರ ಮತ್ತು ವಿಜಯಪುರದಲ್ಲಿ ಜಿಲ್ಲೆಯಲ್ಲಿ ಕೂಡ ಕೆಲ ದಿನಗಳ ಬಳಿಕ ಒಂದು ಪ್ರಕರಣಗಳು ಪತ್ತೆಯಾಗಿವೆ.

386 ಜನ ಗುಣಮುಖ:

ಶನಿವಾರ ಮಂಡ್ಯದಲ್ಲಿ 3, ಮೈಸೂರು, ಬೆಂಗಳೂರು ನಗರ ಮತ್ತು ಕಲಬುರಗಿಯಲ್ಲಿ ತಲಾ ಇಬ್ಬರು ಹಾಗೂ ತುಮಕೂರಿನಲ್ಲಿ ಒಬ್ಬರು ಸೇರಿ ಒಟ್ಟು 10 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ಒಟ್ಟು 794 ಜನ ಸೋಂಕಿತರದಲ್ಲಿ ಗುಣಮುಖರಾದವರ ಸಂಖ್ಯೆ 386ರಷ್ಟಾಗಿದೆ. ಉಳಿದ 386 ಜನರು ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಆತ್ಮಹತ್ಯೆಗೊಳಗಾದ ಓರ್ವ ಸೋಂಕಿತ ಸೇರಿ ಒಟ್ಟು 31 ಜನರು ಮೃತಪಟ್ಟಿದ್ದಾರೆ.