ಬೀದರ್‌ನಲ್ಲಿ ಏಪ್ರಿಲ್ 11 ಮತ್ತು 12 ರಂದು 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 

 ಬೆಂಗಳೂರು (ಏ.10): ಬೀದರ್‌ನಲ್ಲಿ ಏ.11 ಮತ್ತು 12 ರಂದು 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದ್ದು, ಗುರುವಾರ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ಡಾ. ಭೀಮಣ್ಣ ಖಂಡ್ರೆ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಸಮ್ಮೇಳನವನ್ನು 11ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಸ್ತುಪ್ರದರ್ಶನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.

ಅರಣ್ಯ, ಪರಿಸರ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಪೌರಾಡಳಿತ ಸಚಿವ ರಹೀಂಖಾನ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸಂಸದ ಸಾಗರ ಖಂಡ್ರೆ ವ್ಯಂಗ್ಯಚಿತ್ರ ಪ್ರದರ್ಶನ ಅನಾವರಣಗೊಳಿಸುವರು.

12ಂದು ಸಮಾರೋಪ:

ಏ.12 ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಮಾರೋಪ ಭಾಷಣ ಮಾಡಲಿದ್ದು, ಸ್ಪೀಕರ್ ಯು.ಟಿ.ಖಾದರ್ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉಪಸ್ಥಿತರಿರುವರು. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿನಂದನಾ ನುಡಿ ನೆರವೇರಿಸಲಿದ್ದು, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣ ಪಾಟೀಲ್, ಬೋಸರಾಜು ಪಾಲ್ಗೊಳ್ಳಲಿದ್ದಾರೆ. ಕಲ್ಯಾಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜೇಯ ಸಿಂಗ್ ಉಪಸ್ಥಿತರಿರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರಗೌಡ, ರಾಜ್ಯ ಸಮಿತಿ ಸದಸ್ಯ ಎಚ್.ಆರ್.ರವೀಶ್, ಉಪಾಧ್ಯಕ್ಷ ಡಾ.ಸ್ವಾಮಿ, ಹಿರಿಯ ಪತ್ರಕರ್ತರಾದ ಧ್ಯಾನ್ ಪೂಣಚ್ಚ, ಜುಕ್ರಿಯಾ ಮತ್ತಿತರರು ಇದ್ದರು.