Asianet Suvarna News Asianet Suvarna News

ರಾಜ್ಯದಲ್ಲಿ ಈಗ 4000 ಮೆ.ವ್ಯಾ. ವಿದ್ಯುತ್ ಅಭಾವ: ಅನಧಿಕೃತ ಲೋಡ್‌ ಶೆಡ್ಡಿಂಗ್‌ ಜಾರಿ

ರಾಜ್ಯದಲ್ಲಿ ವಿದ್ಯುತ್‌ನ ತೀವ್ರ ಕೊರತೆ ಮುಂದುವರೆದಿದೆ. ವಿದ್ಯುತ್‌ ಬೇಡಿಕೆ ಸರಾಸರಿ 15 ಸಾವಿರ ಮೆ.ವ್ಯಾಟ್‌ ತಲುಪಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಮಾಡಲಾಗದೆ ನಿತ್ಯ 3 ಸಾವಿರದಿಂದ 4 ಸಾವಿರ ಮೆ.ವ್ಯಾಟ್‌ನಷ್ಟು ವಿದ್ಯುತ್‌ ಕಡಿಮೆ ಬಳಸುವ ಮೂಲಕ ಅನಧಿಕೃತ ಲೋಡ್‌ ಶೆಡ್ಡಿಂಗ್‌ಗೆ ಇಂಧನ ಇಲಾಖೆ ಮೊರೆ ಹೋಗಿದೆ. 

4000 MW power shortage in the state now gvd
Author
First Published Oct 13, 2023, 2:20 AM IST

ಬೆಂಗಳೂರು (ಅ.13): ರಾಜ್ಯದಲ್ಲಿ ವಿದ್ಯುತ್‌ನ ತೀವ್ರ ಕೊರತೆ ಮುಂದುವರೆದಿದೆ. ವಿದ್ಯುತ್‌ ಬೇಡಿಕೆ ಸರಾಸರಿ 15 ಸಾವಿರ ಮೆ.ವ್ಯಾಟ್‌ ತಲುಪಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಮಾಡಲಾಗದೆ ನಿತ್ಯ 3 ಸಾವಿರದಿಂದ 4 ಸಾವಿರ ಮೆ.ವ್ಯಾಟ್‌ನಷ್ಟು ವಿದ್ಯುತ್‌ ಕಡಿಮೆ ಬಳಸುವ ಮೂಲಕ ಅನಧಿಕೃತ ಲೋಡ್‌ ಶೆಡ್ಡಿಂಗ್‌ಗೆ ಇಂಧನ ಇಲಾಖೆ ಮೊರೆ ಹೋಗಿದೆ. ಈ ಬಗ್ಗೆ ಕೆಪಿಟಿಸಿಎಲ್‌ನಿಂದ ಅನಧಿಕೃತ ಕರ್ಟೈಲ್‌ಮೈಂಟ್ ಆದೇಶ ಆಗಿದ್ದು, ಎಸ್ಕಾಂಗಳು ಗ್ರಿಡ್‌ನಿಂದ ಇಷ್ಟಿಷ್ಟು ಸಮಯದಲ್ಲಿ ಇಂತಿಷ್ಟೇ ವಿದ್ಯುತ್‌ ಪಡೆಯಬೇಕು ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅನಿಯಮಿತ ವಿದ್ಯುತ್‌ ಕಡಿತ ಮುಂದುವರೆದಿದೆ.

ರಾಜ್ಯದಲ್ಲಿ ರಾಜ್ಯ ಸರ್ಕಾರದ ಎಲ್ಲಾ ವಿದ್ಯುತ್‌ ಉತ್ಪಾದನಾ ಮೂಲಗಳಿಗೆ 8,852 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದೆ. ಆದರೆ ಅ.11ರಂದು ಬುಧವಾರ 3,392 ಮೆ.ವ್ಯಾ. ಗರಿಷ್ಠ ವಿದ್ಯುತ್‌ ಮಾತ್ರ ಉತ್ಪಾದನೆಯಾಗಿದೆ. ಆದರೆ, ಗರಿಷ್ಠ ಬೇಡಿಕೆ 14,448 ಮೆ.ವ್ಯಾಟ್ ಸೃಷ್ಟಿಯಾಗಿತ್ತು. ಹೀಗಾಗಿ 5,072 ಮೆ.ವ್ಯಾಟ್‌ ವಿದ್ಯುತ್‌ ಸಿಜಿಎಸ್‌ (ಕೇಂದ್ರೀಯ ಉತ್ಪಾದನಾ ಕೇಂದ್ರ) ಗ್ರಿಡ್‌ನಿಂದ ಹಾಗೂ 3,299 ಮೆ.ವ್ಯಾಟ್‌ನಷ್ಟು ಗರಿಷ್ಠ ವಿದ್ಯುತ್ ಎನ್‌ಸಿಇಪಿ ಮೂಲಗಳಿಂದ ಡ್ರಾ ಮಾಡಲಾಗಿದೆ. ಹೀಗಿದ್ದರೂ ರಾಜ್ಯದ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆಯಾಗದೆ ವಿದ್ಯುತ್‌ ಕಡಿತ ಮುಂದುವರೆದಿದೆ.

ಕಾಂಗ್ರೆಸ್‌ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ: ಚಕ್ರವರ್ತಿ ಸೂಲಿಬೆಲೆ

ಕೃಷಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಕೊರತೆ: 3-4 ಸಾವಿರ ಮೆ.ವ್ಯಾಟ್‌ ನಷ್ಟು ವಿದ್ಯುತ್‌ ಕೊರತೆ ಉಂಟಾಗುತ್ತಿರುವುದರಿಂದ ಕೃಷಿ ಪಂಪ್‌ ಸೆಟ್‌ಗಳಿಗೆ ನಿತ್ಯ 7 ಗಂಟೆ ಪೂರೈಕೆಯಾಗಬೇಕಿದ್ದ 3-ಫೇಸ್‌ ವಿದ್ಯುತ್‌ 2-3 ಗಂಟೆಯೂ ಪೂರೈಕೆಯಾಗುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಗುರುವಾರವೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆ ಮಾಡಲು ಆಗಿಲ್ಲ ಎಂದು ಇಂಧನ ಇಲಾಖೆ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಗುರುವಾರವೂ ಕೊರತೆ ಮುಂದುವರಿಕೆ: ಅ.12ರಂದು ಗುರುವಾರ ಗರಿಷ್ಠ 15 ಸಾವಿರ ಮೆ.ವ್ಯಾಟ್‌ನಷ್ಟು ಬೇಡಿಕೆಯಿದ್ದರೂ ಅಷ್ಟು ಪ್ರಮಾಣದ ವಿದ್ಯುತ್‌ ಪೂರೈಕೆ ಮಾಡಲು ಆಗಿಲ್ಲ. ಸಂಜೆ 4 ಗಂಟೆ ವೇಳೆಗೆ 11,273 ಮೆ.ವ್ಯಾಟ್‌ ಗರಿಷ್ಠ ವಿದ್ಯುತ್‌ ಪೂರೈಕೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ಮೂಲಗಳಿಂದ 4,593 ಮೆ.ವ್ಯಾ, ಸಿಜಿಎಸ್‌ನಿಂದ 4,054 ಮೆ.ವ್ಯಾ, ಎನ್‌ಸಿಇಪಿಯಿಂದ 2,582 ಮೆ.ವ್ಯಾಟ್‌ ಪೂರೈಸಲಾಗಿದೆ. ಬಳಿಕ ಸಂಜೆ 4.45 ಗಂಟೆಗೆ ಈ ಪ್ರಮಾಣ 10,030 ಮೆ.ವ್ಯಾಟ್‌ಗೆ ಕಡಿಮೆ ಆಗಿದ್ದು, ರಾತ್ರಿ 8.45 ಗಂಟೆ ವೇಳೆಗೆ ಪೀಕ್‌ ಅವರ್ ಆಗಿದ್ದರೂ 9 ಸಾವಿರ ಮೆ.ವ್ಯಾಟ್ ಮಾತ್ರ ಪೂರೈಕೆಯಾಗಿದೆ. ಈ ವೇಳೆ ರಾಜ್ಯದ ಮೂಲಗಳಿಂದ 4,700, ಸಿಜಿಎಸ್‌ನಿಂದ 3,338, ಎನ್‌ಸಿಇಪಿಯಿಂದ 943 ಮೆ.ವ್ಯಾಟ್‌ ವಿದ್ಯುತ್‌ ಪೂರೈಕೆಯಾಗಿದೆ. ವಿದ್ಯುತ್‌ ಕೊರತೆಯಿಂದ ಪೀಕ್‌ ಅವರನಲ್ಲೂ ನಿರೀಕ್ಷಿತ ವಿದ್ಯುತ್‌ ಪೂರೈಕೆಯಾಗದ ಕಾರಣ ಅನಿಯಮಿತ ವಿದ್ಯುತ್‌ ಕಡಿತ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲೂ ವಿದ್ಯುತ್‌ ಕಣ್ಣಾಮುಚ್ಚಾಲೆ: ವಿದ್ಯುತ್‌ ಕೊರತೆಯಿಂದ ರಾಜಧಾನಿ ಬೆಂಗಳೂರಿನಲ್ಲೂ ಅನಿಯಮಿತ ವಿದ್ಯುತ್‌ ಕಡಿತ ಮುಂದುವರೆದಿದೆ. ನಗರದ ಪ್ರಮುಖ ಪ್ರದೇಶಗಳಲ್ಲೇ ಮಧ್ಯ ರಾತ್ರಿ ಹಾಗೂ ಮಧ್ಯಾಹ್ನ ಅನಿಯಮಿತ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಇದರ ಜತೆಗೆ ನಿರ್ವಹಣೆ ನೆಪದಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ

ಎಲ್ಲರಿಗಿಂತ ಮೊದಲೇ ತಿಳಿಯುವುದೇ ಇಲ್ಲೇ!: ರಾಜ್ಯದಲ್ಲಿ ಅನಧಿಕೃತ ಲೋಡ್‌ ಶೆಡ್ಡಿಂಗ್ ಆರಂಭವಾಗಿರುವ ಬಗ್ಗೆ ಮೊದಲ ಬಾರಿಗೆ ಆ.14ರಂದೇ ‘ಕನ್ನಡಪ್ರಭ’ ಅಂಕಿ-ಅಂಶಗಳ ಸಹಿತ ವಿಶೇಷ ವರದಿ ಪ್ರಕಟಿಸಿತ್ತು.

Follow Us:
Download App:
  • android
  • ios