ಬೆಂಗಳೂರು [ಮಾ.06] ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಸಾರಿಗೆ ಅಭಿವೃದ್ಧಿಗೆ ತಕ್ಕಮಟ್ಟಿನ ಆದ್ಯತೆ ನೀಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಹೊಸ ಬಸ್‌ಗಳ ಖರೀದಿ, ರೈಲು ಮಾರ್ಗ ಕಾಮಗಾರಿಗಳು, ಹಾಗೂ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಕೊಂಚ ಅನುದಾನ ಮೀಸಲು ಸೇರಿದಂತೆ ಕೆಲ ನೂತನ ಯೋಜನೆಗಳನ್ನು ಘೋಷಿಸಲಾಗಿದೆ.

ರಾಜ್ಯದಲ್ಲಿ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಡಿಯಲ್ಲಿ ಸ್ಥಾಪಿಸಿರುವ ‘ರಸ್ತೆ ಸುರಕ್ಷತಾ ನಿಧಿ’ಗೆ ಬಜೆಟ್‌ನಲ್ಲಿ 200 ಕೋಟಿ ರು. ಅನುದಾನ ಘೋಷಿಸಲಾಗಿದೆ. ಅಂತೆಯೆ ಈ ನಿಧಿಯಲ್ಲಿ ಸಂಗ್ರಹವಾಗುವ ಉಪಕರವನ್ನು ವಿವಿಧ ರಸ್ತೆ ಸುರಕ್ಷತಾ ಚಟುವಟಿಕೆಗಳಿಗೆ ವಿನಿಯೋಗಿಸಲಾಗುವುದು. ಅಲ್ಲದೆ, ರಾಜ್ಯದಲ್ಲಿ ಸಂಚರಿಸುವ ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಲ್ಲಿ 20 ಕೋಟಿ ರು. ವೆಚ್ಚದಲ್ಲಿ ‘ವೆಹಿಕಲ್‌ ಲೊಕೇಶನ್‌ ಟ್ರಾಕಿಂಗ್‌’ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಇದಕ್ಕೆ ರಸ್ತೆ ಸುರಕ್ಷತಾ ನಿಧಿಯಿಂದ 8 ಕೋಟಿ ರು. ನೀಡುವುದಾಗಿ ಹೇಳಲಾಗಿದೆ.

ಬಜೆಟ್‌ನ ಈ ಬಾರಿ ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 2 ಸಾವಿರ ರು. ನೆರವು ನೀಡುವುದಾಗಿ ಘೋಷಿಸಲಾಗಿದೆ. ಇದಕ್ಕಾಗಿ 2020-21ನೇ ಸಾಲಿಗೆ 40 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಸಾರಿಗೆ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿ, ಈಶಾನ್ಯ, ವಾಯವ್ಯ ಸಾರಿಗೆ ನಿಗಮಗಳಿಂದ 2,450 ಹೊಸ ಬಸ್‌ಗಳನ್ನು ಖರೀದಿಸುವುದಾಗಿ ಘೋಷಿಸಲಾಗಿದೆ.

ಕರ್ನಾಟಕ ಬಜೆಟ್ 2020 : ಪ್ರತೀ ಇಲಾಖೆಗೆ ಸಿಕ್ಕ ಅನುದಾನದ ಸಂಪೂರ್ಣ ಮಾಹಿತಿ..

ಧಾರವಾಡ-ಬೆಳಗಾವಿ ನಡುವೆ ಕಿತ್ತೂರಿನ ಮೂಲಕ ನೂತನ ರೈಲು ಮಾರ್ಗ ನಿರ್ಮಾಣದಿಂದ ಧಾರವಾಡ-ಬೆಳಗಾವಿ ನಡುವಿನ ಅಂತರ 121 ಕಿ.ಮೀ. ನಿಂದ 73 ಕಿ.ಮೀ.ಗೆ ಇಳಿಕೆಯಾಗಲಿದೆ. ಹೀಗಾಗಿ ಈ ನೂತನ ರೈಲು ಮಾರ್ಗ ಯೋಜನೆಗೆ ಉಚಿತ ಭೂಮಿ ಹಾಗೂ ಶೇ.50ರಷ್ಟುಕಾಮಗಾರಿ ವೆಚ್ಚ ಭರಿಸುವುದಕ್ಕೆ ರೈಲ್ವೆಗೆ ಇಲಾಖೆಗೆ ಒಪ್ಪಿಗೆ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಹಾಸನ-ಮಂಗಳೂರು ರೈಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ (ಎಚ್‌ಎಂಆರ್‌ಡಿಸಿ) ಸಂಸ್ಥೆಯಿಂದ ಸಕಲೇಶಪುರ, ಸುಬ್ರಮಣ್ಯ ನಿಲ್ದಾಣಗಳ ನಡುವಿನ ಘಾಟಿ ಪ್ರದೇಶದ ರೈಲು ಮಾರ್ಗದ ಕ್ಷಮತೆಯನ್ನು ಹೆಚ್ಚಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಇದರಿಂದ ಬೆಂಗಳೂರು-ಮಂಗಳೂರಿನ ನಡುವಿನ ರೈಲುಗಳ ವೇಗ ಹೆಚ್ಚಳವಾಗುವುದರೊಂದಿಗೆ ಹೆಚ್ಚುವರಿ ರೈಲು ಸೇವೆ ಆರಂಭಿಸಲು ನೆರವಾಗಲಿದೆ ಎಂದು ಹೇಳಲಾಗಿದೆ.

ಬಿಎಂಟಿಸಿಯು 600 ಕೋಟಿ ರು. ವೆಚ್ಚದಲ್ಲಿ 1500 ಡೀಸೆಲ್‌ ಬಸ್‌ಗಳನ್ನು ಖರೀದಿಸಲಿದೆ. ಇದಕ್ಕೆ ರಾಜ್ಯ ಸರ್ಕಾರವು ಸಹಾಯಧನದ ರೂಪದಲ್ಲಿ ಏಳು ವರ್ಷಗಳ ಕಾಲ ಪ್ರತಿ ವರ್ಷ 100 ಕೋಟಿ ರು. ಸಹಾಯಧನ ನೀಡಲಿದೆ. ಅಂತೆಯೆ 500 ಸಾಮಾನ್ಯ ಎಲೆಕ್ಟ್ರಿಕ್‌ ಬಸ್‌ ಖರೀದಿಸಲು ಬಿಎಂಟಿಸಿಗೆ 100 ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ರೂಪಿಸಿರುವ 18 ಸಾವಿರ ಕೋಟಿ ರು. ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗೆ ಬಜೆಟ್‌ನಲ್ಲಿ 500 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಅಂತೆಯೆ ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ರೈಲು ಮಾರ್ಗಗಳನ್ನು ಜೋಡಿ ರೈಲು ಮಾರ್ಗಗಳಾಗಿ ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಮಾರ್ಗಗಳು ಬೆಂಗಳೂರು ಉಪನಗರ ರೈಲು ಯೋಜನೆಗೆ ಪೂರಕವಾಗಿರುವುದರಿಂದ ಯೋಜನಾ ವೆಚ್ಚದ ಶೇ.50ರಷ್ಟನ್ನು ರಾಜ್ಯ ಸರ್ಕಾರ ಭರಿಸಲು ನಿರ್ಧರಿಸಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.