ಬೆಂಗಳೂರು[ಡಿ.15]: ಮೀನುಗಾರಿಕೆ ನಡೆಸುವ 39 ಉಪಜಾತಿಗಳನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ಸಂಬಂಧ ಒಂದು ವಾರದೊಳಗೆ ಕೇಂದ್ರ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಶನಿವಾರ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಮೀನುಗಾರರ ಬೃಹತ್‌ ಸ್ವಾಭಿಮಾನಿ ವಿಕಾಸ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮೀನುಗಾರಿಕೆ ಮಾಡುವ ಉಪಜಾತಿಗಳನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ಕುರಿತು ಒಂದು ವಾರದೊಳಗೆ ದೆಹಲಿಗೆ ತೆರಳಿ ಕೇಂದ್ರ ಸಚಿವ ಅರ್ಜುನ್‌ ಮುಂಡಾ ಅವರ ಜೊತೆ ಚರ್ಚಿಸಲಾಗುವುದು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸುತ್ತದೆ ಎಂಬ ನಂಬಿಕೆ ಇದೆ. ಮೀನುಗಾರಿಕೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿದೆ. ಮೀನುಗಾರಿಕೆ ನಡೆಸುವ ಸಮುದಾಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ಪ್ರಸ್ತುತ ನೀಡುತ್ತಿರುವ ಅನುದಾನಕ್ಕಿಂತ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಹೇಳಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೀನುಗಾರರ ಸಾಲ ಮನ್ನಾ ಮಾಡಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಮೀನುಗಾರರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮೀನುಗಾರರು ಸಮಾಜದ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಅಗತ್ಯ ಯೋಜನೆಗಳನ್ನು ಸರ್ಕಾರ ಒದಗಿಸಲಿದೆ ಎಂದು ಹೇಳಿದರು.

++

ಬೇಡಿಕೆ ಪತ್ರ ಸಲ್ಲಿಕೆ:

ತೆಲಂಗಾಣ, ಆಂಧ್ರ, ಒಡಿಶಾದಲ್ಲಿ ಮೀನುಗಾರ ಜನಾಂಗಕ್ಕೆ ಕೆರೆ, ಸರೋವರ, ಅಣೆಕಟ್ಟುಗಳಲ್ಲಿ ಶೇ.90ರಷ್ಟುಮೀನುಗಾರಿಕೆಗೆ ಹಕ್ಕು ನೀಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದ ಮೀನುಗಾರರಿಗೆ ಅವಕಾಶ ಇದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದು, ಸೂಕ್ತ ವಕೀಲರನ್ನು ನೇಮಿಸಿ ತಡೆಯಾಜ್ಞೆ ತೆರವಿಗೆ ಸರ್ಕಾರ ಮುಂದಾಗಬೇಕು. ರಾಷ್ಟಾ್ರದ್ಯಂತ ಏಕರೂಪದ ಕಾನೂನು ಜಾರಿಗೆ ತಂದು ಶೇ.90ರಷ್ಟುಮೀನುಗಾರಿಕೆಗೆ ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಸಮಾಜದ ಮುಖಂಡರಾದ ರವಿಕುಮಾರ್‌, ಲಾಲಾಜಿ ಆರ್‌.ಮೆಂಡನ್‌ ಅವರಿಗೆ ಸಚಿವ ಸ್ಥಾನ ನೀಡಬೇಕು. ಜತೆಗೆ ಪಕ್ಷದಲ್ಲಿ ಇರುವ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನ ಕೊಡಬೇಕು. ನಿಜ ಶರಣ ಅಂಬಿಗರ ಚೌಡಯ್ಯ ಗುರುಪೀಠ ಮತ್ತು ಗದ್ದುಗೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಕೂಡಲಸಂಗಮದಂತೆ ತ್ವರಿತವಾಗಿ ಅಭಿವೃದ್ಧಿ ಮಾಡಬೇಕು. ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರು. ಅನುದಾನ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹಾಪೋಷಕ ಲಾಲಾಜಿ ಆರ್‌.ಮೆಂಡನ್‌, ಸಂಘದ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮುಖ್ಯ ಸಲಹೆಗಾರ ಎಂ.ಪಿ ಪೂರ್ಣಾನಂದ, ಅಧ್ಯಕ್ಷ ಡಾ.ದೇವಿಪ್ರಸಾದ್‌ ಹೆಜಮಾಡಿ, ಪ್ರಧಾನ ಕಾರ್ಯದರ್ಶಿ ಬಿ.ಡಿ.ರವಿಕುಮಾರ್‌, ಚಿತ್ರನಟಿ ಭಾವನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.