ರಾಜ್ಯದಲ್ಲಿ ನಿನ್ನೆ 36 ಮಂದಿಗೆ ಕೊರೋನಾ| ಬೆಂಗಳೂರಲ್ಲಿ ಒಬ್ಬನಿಂದಲೇ 14 ಜನರಿಗೆ ಸೋಂಕು| ಮುಂಬೈನಿಂದ ಬಂದ 10 ಮಂದಿಗೆ ವೈರಸ್‌| ಸೋಂಕಿತರ ಸಂಖ್ಯೆ 1092ಕ್ಕೆ| ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣ 559| ನಿನ್ನೆ 16 ಜನ ಡಿಸ್‌ಚಾಜ್‌ರ್‍|  ಈ ತನಕ ಗುಣಮುಖ ಆದವರ ಸಂಖ್ಯೆ 496ಕ್ಕೆ ಏರಿಕೆ

ಬೆಂಗಳೂರು(ಮೇ.17): ರಾಜ್ಯದಲ್ಲಿ ಶನಿವಾರ ಮತ್ತೆ 36 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಕ್ವಾರಂಟೈನ್‌ಗೆ ನಿಗದಿಪಡಿಸಿದ್ದ ಹೋಟೆಲ್‌ ಹೌಸ್‌ಕೀಪಿಂಗ್‌ ಸಿಬ್ಬಂದಿಯಿಂದಲೇ ಶನಿವಾರ 14 ಮಂದಿಗೆ ಸೋಂಕು ದೃಢಪಟ್ಟಿದೆ.

ಶನಿವಾರ ವರದಿಯಾದ 36 ಸೋಂಕಿನಲ್ಲಿ ಬೆಂಗಳೂರಿನಲ್ಲಿ 14, ಕಲಬುರಗಿ 8, ಶಿವಮೊಗ್ಗ 3, ಹಾಸನ 4, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಉಡುಪಿ, ಮಂಡ್ಯ, ದಾವಣಗೆರೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ.

ಶನಿವಾರ 16 ಜನ ಗುಣಮುಖರಾಗಿದ್ದಾರೆ. ಇದರಿಂದಾಗಿ ಈವರೆಗೆ ರಾಜ್ಯದಲ್ಲಿ 1092 ಸೋಂಕಿತರ ಪೈಕಿ 496 ಜನ ಗುಣಮುಖರಾದಂತಾಗಿದೆ. 559 ಸಕ್ರಿಯ ಪ್ರಕರಣ ಇವೆ.

ಎಸಿ ರೂಂನಲ್ಲಿ ಕುಳಿತು ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸರಿಯಲ್ಲ: ಸೋನು ಸೂದ್!

ಒಬ್ಬನಿಂದಲೇ 29 ಮಂದಿಗೆ ಸೋಂಕು:

ಬೆಂಗಳೂರಿನ ಶಿವಾಜಿನಗರದ ಹೌಸ್‌ಕೀಪಿಂಗ್‌ ಸಿಬ್ಬಂದಿಯೊಬ್ಬನಿಂದ ಶನಿವಾರ 14 ಮಂದಿಗೆ ಸೋಂಕು ತಾಗಿದ್ದು ದೃಢಪಟ್ಟಿದೆ. ಈ ಮೂಲಕ ಈ ವ್ಯಕ್ತಿಯಿಂದ ಬರೋಬ್ಬರಿ 29 ಮಂದಿಗೆ ನೇರವಾಗಿ ಸೋಂಕು ಹರಡಿದಂತಾಗಿದ್ದು, ಪಾದರಾಯನಪುರ, ಹೊಂಗಸಂದ್ರದ ಬಳಿಕ ಶಿವಾಜಿನಗರ ಮತ್ತೊಂದು ಸೋಂಕು ವಲಯವಾಗಿ ಬದಲಾಗಿ ತೀವ್ರ ಆತಂಕ ಸೃಷ್ಟಿಸಿದೆ.

ಶಿವಾಜಿನಗರದಲ್ಲಿ ಕ್ವಾರಂಟೈನ್‌ಗೆ ನಿಗದಿಪಡಿಸಿದ್ದ ರಿಜೆಂಟಾ ಪ್ಲೇಸ್‌ ಹೋಟೆಲ್‌ನ 35 ವರ್ಷದ ಹೌಸ್‌ ಕೀಪಿಂಗ್‌ ಸಿಬ್ಬಂದಿಯಿಂದ (653ನೇ ಸೋಂಕಿತ) ಮೇ 8 ರಂದು 4 ಮಂದಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಶುಕ್ರವಾರ 11 ಮಂದಿಗೆ ಸೋಂಕು ಉಂಟಾಗಿದ್ದು, ಶನಿವಾರ ಮತ್ತೆ 14 ಮಂದಿಗೆ ಸೋಂಕು ದೃಢಪಟ್ಟಿದೆ.

ಉಸಿರಾಟ ತೊಂದರೆ (ಸಾರಿ) ಹಿನ್ನೆಲೆಯ ಸೋಂಕಿತರೊಬ್ಬರಿಂದ ಶಿಫಾ ಆಸ್ಪತ್ರೆಯ ವೈದ್ಯರಿಗೆ (196ನೇ ಸೋಂಕಿತ) ಸೋಂಕು ಉಂಟಾಗಿತ್ತು. ಇವರ ಸಂಪರ್ಕಕ್ಕೆ ಬಂದಿದ್ದ 28 ವರ್ಷದ (420ನೇಸೋಂಕಿತೆ) ಮಹಿಳೆಯನ್ನು ಶಿವಾಜಿನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಇವರ ಸಂಪರ್ಕದಿಂದ ಹೌಸ್‌ಕೀಪಿಂಗ್‌ ಸಿಬ್ಬಂದಿಗೆ ಸೋಂಕು ಹರಡಿತ್ತು.

ಬಳಿಕ ಇವರು ವಾಸವಿದ್ದ ಚಾಂದಿನಿ ಚೌಕ್‌ನ ಕಟ್ಟಡದ 72 ಮಂದಿ ಹಾಗೂ ಹೋಟೆಲ್‌ನ ಸಿಬ್ಬಂದಿ ಸೇರಿ 102 ಮಂದಿಯನ್ನು ಕ್ವಾರಂಟೈನ್‌ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಈವರೆಗೆ 29 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಾಜಿನಗರಕ್ಕೆ ಕಂಟಕನಾದ ‘ಪಿ-653’!

ಒಟ್ಟು 1,092 ಸೋಂಕಿತರ ಪೈಕಿ 559 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಮಂದಿ ಐಸಿಯುನಲ್ಲಿದ್ದಾರೆ. ಶನಿವಾರ ಬಿಡುಗಡೆಯಾದ 16 ಮಂದಿ ಸೇರಿ 496 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮುಂಬೈನಿಂದ ಮತ್ತೆ 10 ಸೋಂಕು:

ವಿದೇಶಿ ಹಾಗೂ ಅಂತರ್‌ರಾಜ್ಯದಿಂದ ವಾಪಸಾಗುತ್ತಿರುವ ಕನ್ನಡಿಗರಿಂದ ಸೋಂಕು ಆತಂಕ ಮುಂದುವರೆದಿದ್ದು, ಮುಂಬೈನಿಂದ ಆಗಮಿಸಿದ್ದ 10 ಮಂದಿಗೆ ಶನಿವಾರ ಸೋಂಕು ದೃಢಪಟ್ಟಿದೆ. ಉಳಿದಂತೆ ದುಬೈನಿಂದ ಬಂದಿರುವ ಒಬ್ಬರಿಗೆ ಹಾಗೂ ಗುಜರಾತ್‌ನ ಅಹಮದಾಬಾದ್‌ ಪ್ರಯಾಣ ಹಿನ್ನೆಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಕಲಬುರಗಿಯ 8 ಪ್ರಕರಣದಲ್ಲಿ 35 ವರ್ಷದ 848ನೇ ಸೋಂಕಿತನಿಂದ ಆರು ಮಂದಿಗೆ ಸೋಂಕು ಉಂಟಾಗಿದೆ.

4 ಪುಟ್ಟಮಕ್ಕಳಿಗೆ ಸೋಂಕು

ಉಡುಪಿಯಲ್ಲಿ ದುಬೈನಿಂದ ವಾಪಸಾಗಿದ್ದ 1 ವರ್ಷದ ಪುಟ್ಟ ಹೆಣ್ಣು ಮಗುವಿಗೆ ಹಾಗೂ ವಿಜಯಪುರ, ಶಿವಮೊಗ್ಗದಲ್ಲಿ 4 ವರ್ಷದ ಪುಟ್ಟಹೆಣ್ಣು ಮಕ್ಕಳಿಗೆ ಸೋಂಕು ತಗುಲಿದೆ.

ಕಲಬುರಗಿಯಲ್ಲಿ 10 ವರ್ಷದ ಮತ್ತೊಬ್ಬ ಹೆಣ್ಣು ಮಗುವಿಗೆ ಶನಿವಾರ ಸೋಂಕು ದೃಢಪಟ್ಟಿದೆ.

ಇತರೆ ಅಂಕಿ-ಅಂಶ

*ಶನಿವಾರ ವಿಮಾನ ನಿಲ್ದಾಣ, ಬಂದರುಗಳಲ್ಲಿ ತಪಾಸಣೆಗೆ ಒಳಗಾದವರು: 106 ಮಂದಿ

- ಒಟ್ಟು ಸೋಂಕು ಪರೀಕ್ಷೆ - 1,42,962

- ಶನಿವಾರದ ಪರೀಕ್ಷೆ - 6,300

- ಸೋಂಕು ದೃಢ - 36

- ಒಟ್ಟು ಕ್ವಾರಂಟೈನ್‌ನಲ್ಲಿರುವವರು - 19,688