ಬೆಂಗಳೂರು (ಸೆ.01): ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಕರ್ತವ್ಯದಲ್ಲಿ ತೊಡಗಿದ ರಾಜ್ಯದ ಗ್ರಾಮ ಪಂಚಾಯಿತಿ ನೌಕರರು ಸೋಂಕಿನಿಂದ ಸಾವನ್ನಪ್ಪಿದರೆ 30 ಲಕ್ಷ ರು. ವಿಮಾ ಪರಿಹಾರ ನೀಡಲಿದೆ ಮತ್ತು ಸೋಂಕಿಗೊಳಗಾದರೆ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.

ಗ್ರಾಮಪಂಚಾಯತ್‌ ಬಿಲ್‌ ಕಲೆಕ್ಟರ್‌, ಕ್ಲರ್ಕ್, ಕ್ಲರ್ಕ್ ಕಮ್‌ ಡಾಟಾ ಎಂಟ್ರಿ ಆಪರೇಟರ್‌, ವಾಟರ್‌ಮೆನ್‌, ಜವಾನ ಮತ್ತು ಸ್ವಚ್ಛತಾಗಾರರು ಕೋವಿಡ್‌-19 ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕರಲ್ಲಿ ರೋಗದ ಬಗ್ಗೆ ಅರಿವು ಮೂಡಿಸುವಲ್ಲಿ ತೊಡಗಿದ್ದಾರೆ.

 ಕಂಟೈನ್ಮೆಂಟ್‌ ವಲಯದಲ್ಲಿ ಅವಶ್ಯಕ ವಸ್ತುಗಳನ್ನು ಒದಗಿಸುವುದು, ಅಂಗನವಾಡಿ, ಶಾಲಾ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ನೆರವಾಗುವುದು, ಆರೋಗ್ಯ ಸೇವಾ ಕೇಂದ್ರದಲ್ಲಿ ನೆರವು ನೀಡುತ್ತಿದ್ದಾರೆ. ಇವರಿಗೆ ನೀಡುತ್ತಿರುವ ವೇತನ ಕನಿಷ್ಠವಾಗಿರುವ ಹಿನ್ನೆಲೆಯಲ್ಲಿ ವಿಮಾ ಸೌಲಭ್ಯ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ.