Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ 30 ಲಕ್ಷ ರೈತರಿಗೆ ಬಂಪರ್

  • ಪ್ರಸಕ್ತ ವರ್ಷ ಸಹಕಾರಿ ಬ್ಯಾಂಕುಗಳ ಮೂಲಕ ರಾಜ್ಯದ 30 ಲಕ್ಷ ರೈತರಿಗೆ 20,810 ಕೋಟಿ ರು. ಸಾಲ 
  • ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಮಾಹಿತಿ
30 lakh farmers will get loan from govt snr
Author
Bengaluru, First Published Sep 15, 2021, 8:16 AM IST

 ವಿಧಾನಪರಿಷತ್‌ (ಸೆ.15):  ಪ್ರಸಕ್ತ ವರ್ಷ ಸಹಕಾರಿ ಬ್ಯಾಂಕುಗಳ ಮೂಲಕ ರಾಜ್ಯದ 30 ಲಕ್ಷ ರೈತರಿಗೆ 20,810 ಕೋಟಿ ರು. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಬಿಜೆಪಿಯ ಭಾರತಿಶೆಟ್ಟಿಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ವರ್ಷ 14,500 ಕೋಟಿ ರು. ಸಾಲ ನೀಡುವ ಗುರಿ ಹೊಂದಿದ್ದರೂ ಸಹ ಗುರಿ ಮೀರಿ ಸಾಲ ನೀಡಲಾಗಿದೆ. ಈ ವರ್ಷ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಅನೇಕ ಕ್ರಮಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಸಹಕಾರ ಸಂಘಗಳಲ್ಲಿ 3 ಲಕ್ಷ ರು.ವರೆಗೆ ಹೈನುಗಾರಿಕೆ ಒಳಗೊಂಡಂತೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಹಾಗೂ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲವನ್ನು ಶೇ. 3ರ ಬಡ್ಡಿ ದರದಲ್ಲಿ 10 ಲಕ್ಷ ರು.ವರೆಗೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ ಆಯವ್ಯಯದಲ್ಲಿ 1100 ಕೋಟಿ ರು.ಅವಕಾಶ ಕಲ್ಪಿಸಲಾಗಿದೆ.

ರೈತರಿಗೆ ಬಂಪರ್ ಗಿಫ್ಟ್; 2022-23ರ ಸಾಲಿನ ಕೃಷಿ ಬೆಳೆಗೆ ಕನಿಷ್ಠ ಬೆಂಬಲ ಘೋಷಿಸಿದ ಕೇಂದ್ರ ಸರ್ಕಾರ!

ಶೂನ್ಯ ಬಡ್ಡಿ ದರದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಹಾಗೂ ಶೇ. 4ರ ಬಡ್ಡಿ ದರದಲ್ಲಿ ಪುರುಷ ಸ್ವ ಸಹಾಯ ಸಂಘಗಳಿಗೆ 5 ಲಕ್ಷ ರು.ವರೆಗೆ ಸಾಲ ನೀಡಲಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪ್ಯಾಕ್ಸ್‌) ಬಹುಸೇವಾ ಸಂಸ್ಥೆಗಳಾಗಿ ಅಭಿವೃದ್ಧಿ ಪಡಿಸಿ ಮೂಲಭೂತ ಸೌಲಭ್ಯ ಒದಗಿಸಲು ಗೋದಾಮು, ಶೀತಲಕೇಂದ್ರ ನಿರ್ಮಾಣ ಮಾಡಲು ಮತ್ತು ರೈತ ಸೇವಾ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ನಬಾರ್ಡ್‌ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರದ ಉತ್ತೇಜನದೊಂದಿಗೆ ಸುಮಾರು 900 ಪ್ಯಾಕ್ಸ್‌ಗಳಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ಸಚಿವ ಸೋಮಶೇಖರ್‌ ವಿವರಿಸಿದರು.

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯನ್ನು ಸದೃಢಗೊಳಿಸಲು 402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಸಚಿವರು, ಸಹಕಾರ ಸಂಘಗಳಲ್ಲಿ ಅಕ್ರಮ, ಅವ್ಯವಹಾರ ತಡೆಯಲು ಆಡಿಟ್‌ ಇಲಾಖೆಯನ್ನು ಬಲಪಡಿಸಲಾಗುತ್ತಿದೆ. ತಪ್ಪು ಲೆಕ್ಕಪರಿಶೋಧನಾ ವರದಿ ನೀಡಿದ ಲೆಕ್ಕ ಪರಿಶೋಧಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios