Asianet Suvarna News Asianet Suvarna News

ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ದಿನಕ್ಕೆ 3 ಬಾರಿ ಹಾಜರಿ

* ಶೇ.80ಕ್ಕಿಂತ ಕಡಿಮೆ ಹಾಜರಿ ಇದ್ದರೆ ವೇತನ ತಡೆ

* ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ದಿನಕ್ಕೆ 3 ಬಾರಿ ಹಾಜರಿ

* ಆರೋಗ್ಯ ಇಲಾಖೆ ನೌಕರರಿಗೂ ಇದೇ ನಿಯಮ

* - ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ

* ಸಚಿವ ಡಾ.ಸುಧಾಕರ್‌ ಅವರಿಂದ ಕಠಿಣ ನಿರ್ಧಾರ

3 times attendance compulsory for  Hospital Doctors Staffs and Health Department Workers pod
Author
Bangalore, First Published Apr 22, 2022, 6:10 AM IST | Last Updated Apr 22, 2022, 6:10 AM IST

ಬೆಂಗಳೂರು(ಏ.22): ರಾಜ್ಯದ ಆರೋಗ್ಯ ಇಲಾಖೆ ಆಸ್ಪತ್ರೆಗಳು ಮತ್ತು ಕಚೇರಿಗಳಲ್ಲಿ ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಯೋಮೆಟ್ರಿಕ್‌ ಹಾಜರಾತಿ ಆಧರಿಸಿಯೇ ವೇತನ ಪಾವತಿಸುವ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ದಿನದಲ್ಲಿ ಮೂರು ಬಾರಿ ಹಾಜರಾತಿ ಹಾಕಬೇಕಿದ್ದು, ಮಾಸಿಕ ಶೇ.80ಕ್ಕಿಂತ ಕಡಿಮೆ ಹಾಜರಾತಿ ಇದ್ದವರ ವೇತನ ತಡೆಹಿಡಿಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸೋಮವಾರ ಆರೋಗ್ಯಸೌಧದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಕೆ.ಸುಧಾಕರ್‌ ಈ ನಿರ್ಧಾರ ಕೈಗೊಂಡಿದ್ದಾರೆ. ಸಭೆಯ ಬಳಿಕ ಮಾತನಾಡಿದ ಸಚಿವರು, ಆಸ್ಪತ್ರೆ, ಇಲಾಖೆ ಕಚೇರಿ ಮತ್ತು ಸಂಸ್ಥೆಗಳಲ್ಲಿ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದಿರುವ ಬಗ್ಗೆ ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ದೂರುಗಳು ಬಂದಿದ್ದವು. ನಿಜವಾದ ಕಾರಣಗಳಿಲ್ಲದೆ ಕೆಲಸ ಕದಿಯುವುದನ್ನು ಸಹಿಸಲು ಆಗುವುದಿಲ್ಲ. ಅವರ ಕರ್ತವ್ಯಲೋಪದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಹೀಗಾಗಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದ ಯಾರೇ ಆಗಲಿ ಅಂತಹವರ ವೇತನ ಕಡಿತಕ್ಕೆ ಸೂಚನೆ ನೀಡಲಾಗಿದೆ. ಇಲಾಖೆ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೂ ಅವರ ಆಧಾರ್‌ ಆಧರಿತ ಬಯೋಮೆಟ್ರಿಕ್‌ ಹಾಜರಾತಿ (ಎಇಬಿಎಎಸ್‌) ಕಡ್ಡಾಯಗೊಳಿಸಲಾಗಿದೆ. ಅದನ್ನು ಆಧರಿಸಿಯೇ ಇನ್ನು ಮುಂದೆ ವೇತನ ನೀಡುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಡಿಡಿಒ ಹೊಣೆ:

ಇಲಾಖೆಯ ಆಸ್ಪತ್ರೆ, ಸಂಸ್ಥೆ ಮತ್ತು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಡಿಡಿಒ (ಸ್ಯಾಲರಿ ಡ್ರಾಯಿಂಗ್‌ ಆಫೀಸರ್‌) ಪ್ರತಿ ತಿಂಗಳು ಎಇಬಿಎಎಸ್‌ ನಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಬೇಕು. ಬಳಿಕ ವೇತನ ಪಾವತಿಗೆ ವರದಿ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಆಯಾ ಜಿಲ್ಲಾ ಆರೋಗ್ಯ ಅಧಿಕಾರಿಗೆ (ಡಿಎಚ್‌ಒ) ಸಲ್ಲಿಸಬೇಕು. ಒಂದು ವೇಳೆ ಎಇಬಿಎಎಸ್‌ ಅನುಷ್ಟಾನಗೊಳಿಸದೆ, ಹಾಜರಾತಿ ಪರಿಶೀಲಿಸದೆ ವೇತನ ಪಾವತಿಸಿದರೆ ಆಯಾ ಡಿಡಿಒಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಇದನ್ನು ಸರಿಯಾಗಿ ಉಸ್ತುವಾರಿ ಮಾಡದಿದ್ದಲ್ಲಿ ಡಿಎಚ್‌ಒಗಳ ವಿರುದ್ಧವೂ ಕ್ರಮ ಕೈಗೊಳ್ಳಲು ವರದಿ ನೀಡುವಂತೆ ಜಿಲ್ಲೆಗಳ ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಶೇ.80ಕ್ಕಿಂತ ಕಡಿಮೆ ಹಾಜತಿ ಇದ್ದವರಿಗೆ ವೇತನ ತಡೆ;

ಶೇ.80ರಷ್ಟುಹಾಜರಾತಿಗಿಂತ ಕಡಿಮೆ ಇದ್ದಲ್ಲಿ ಅವರ ವೇತನ ತಡೆ ಹಿಡಿಯಲಾಗುತ್ತದೆ. ನಂತರ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ವಹಿಸಲಾಗುವುದು. ಒಂದು ವೇಳೆ ಶೇ. 80 ರಷ್ಟುಹಾಜರಾತಿ ಇದ್ದಲ್ಲಿ ವೇತನ ಬಿಡುಗಡೆ ಮಾಡಿ ಉಳಿದ ಶೇ.20 ಹಾಜರಾತಿ ದಾಖಲು ಮಾಡದಿರುವುದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಸಿಬ್ಬಂದಿ ನೀಡುವ ಕಾರಣ ನಿಜವಾಗಿದ್ದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗುವುದು. ಒಂದು ವೇಳೆ ಸಬೂಬು ನೀಡಿದರೆ ಅಥವಾ ನೀಡಿರುವ ಮಾಹಿತಿ ಸುಳ್ಳು ಆಗಿದ್ದಲ್ಲಿ ಮುಂದಿನ ತಿಂಗಳ ವೇತನದಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

*ಎಷ್ಟು ಮಂದಿಗೆ ಅನ್ವಯ?

ಅಧಿಕಾರಿ ಮತ್ತು ಸಿಬ್ಬಂದಿ 65,318

ಆರೋಗ್ಯ ಇಲಾಖೆಯಲ್ಲಿ ವ್ಯಾಪ್ತಿಯ 3,230 ಸಂಸ್ಥೆಗಳು.

ಹಾಜರಾತಿ ದಾಖಲು ವೇಳಾಪಟ್ಟಿಏನು?

*ಆಡಳಿತ ಕಚೇರಿಗಳು - ಬೆಳಗ್ಗೆ 10, ಮಧ್ಯಾಹ್ನ 1, ಸಂಜೆ - 5.30

*ಆಸ್ಪತ್ರೆಗಳು - ಬೆಳಗ್ಗೆ 9, ಮಧ್ಯಾಹ್ನ 1, ಸಂಜೆ - 4.30, (ಸಾರ್ವತ್ರಿಕ ರಜಾ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಮಾತ್ರ)

*ಆಸ್ಪತ್ರೆಗಳಲ್ಲಿ ಪಾಳಿಯಲ್ಲಿ ಕೆಲಸ ಮಾಡುವವರು

1ನೇ ಪಾಳಿ ಬೆಳಗ್ಗೆ 8, ಬೆಳಗ್ಗೆ 11, ಮಧ್ಯಾಹ್ನ 2.

2ನೇ ಪಾಳಿ ಮಧ್ಯಾಹ್ನ 2, ಸಂಜೆ 5, ರಾತ್ರಿ 8.

3ನೇ ಪಾಳಿ ರಾತ್ರಿ 8, ಮಧ್ಯರಾತ್ರಿ 12, ಮರುದಿನ ಬೆಳಗ್ಗೆ 8.

*ವಿಶೇಷ ಸಂದರ್ಭಗಳಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ಅಥವಾ ಆಡಳಿತ ವೈದ್ಯಾಧಿಕಾರಿಗಳು ಖಾತರಿಪಡಿಸಿಕೊಂಡು ವಿನಾಯಿತಿ ನೀಡಬಹುದು.

Latest Videos
Follow Us:
Download App:
  • android
  • ios