ರಾಜ್ಯದಲ್ಲಿ ಪ್ರತಿ ದಿನ ದೃಢಪಡುತ್ತಿರುವ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ಎರಡರಿಂದ ಮೂರು ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಎರಡು ರೀತಿಯ ಕಾರಣ ನೀಡುತ್ತಿದ್ದಾರೆ.

ಬೆಂಗಳೂರು (ಜೂ. 29): ರಾಜ್ಯದಲ್ಲಿ ಪ್ರತಿ ದಿನ ದೃಢಪಡುತ್ತಿರುವ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ಎರಡರಿಂದ ಮೂರು ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಎರಡು ರೀತಿಯ ಕಾರಣ ನೀಡುತ್ತಿದ್ದಾರೆ.

ಒಂದೆಡೆ ಕಳೆದ ಮೂರು ದಿನಗಳಿಂದ ಕೋವಿಡ್‌ ಪರೀಕ್ಷಾ ಪ್ರಮಾಣ ಹೆಚ್ಚಾಗಿದೆ. ನಿತ್ಯ 13ರಿಂದ 14 ಸಾವಿರಕ್ಕೂ ಹೆಚ್ಚು ಜನರ ಪರೀಕ್ಷೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಲ್ಯಾಬ್‌ ಸಿಬ್ಬಂದಿಗೆ ಸೋಂಕು ತಗಲಿದ್ದರಿಂದ ಕೆಲ ದಿನಗಳಿಂದ ಬಂದ್‌ ಆಗಿದ್ದ ವಿಕ್ಟೋರಿಯಾ ಆಸ್ಪತ್ರೆ ಆವರಣದ ಪ್ರಯೋಗಾಲಯ ಸೇರಿದಂತೆ ಕೆಲವು ಲ್ಯಾಬ್‌ಗಳಲ್ಲಿ ಬಾಕಿ ಇದ್ದ ಪರೀಕ್ಷಾ ವರದಿಗಳನ್ನು ತಡವಾಗಿ ನೀಡಲಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಎರಡು ಮೂರು ಪಟ್ಟು ಹೆಚ್ಚಾಗಿದೆ. ಆದರೆ, ಇದರಲ್ಲಿ ವರದಿ ಬಾಕಿ ಇದ್ದ ಪ್ರಕರಣಗಳು ಹೆಚ್ಚೇನೂ ಇಲ್ಲ. ಏಕೆಂದರೆ ರಾಜ್ಯದಲ್ಲಿ 78 ಪ್ರಯೋಗಾಲಯಗಳಿದ್ದು, ಕೇವಲ ಒಂದೆರಡು ಲ್ಯಾಬ್‌ಗಳು ಸ್ಥಗಿತವಾದ ಮಾತ್ರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ಪರೀಕ್ಷಾ ಪ್ರಮಾಣ ಹೆಚ್ಚಾಗಿರುವುದೇ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನುತ್ತಾರೆ ಅಧಿಕಾರಿಗಳು.

ಗದಗ: 40 ಮಂದಿಗೆ ಕೊರೋನಾ ವೈರಸ್‌ ಅಂಟಿಸಿದ ನೀರಾವರಿ ಇಲಾಖೆಯ ಅಕೌಂಟೆಂಟ್

ಈ ಮಧ್ಯೆ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ವಲಯ ಹೀಗೆ ಎರಡೂ ವಲಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲು ಮೂರನೇ ಕಾರಣವೊಂದು ಚರ್ಚೆಗೀಡಾಗಿದೆ. ಅದು - ಇತ್ತೀಚಿನ ದಿನಗಳಲ್ಲಿ ವರದಿ ಬಂದ ಕೂಡಲೇ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ವಿಚಾರದಲ್ಲಿ ತಡವಾಗುತ್ತಿದೆ. ಇದರಿಂದ ಈ ಸೋಂಕಿತರಿಂದ ಬೇರೆಯವರಿಗೆ ಸೋಂಕು ಹಬ್ಬುವುದು ಹೆಚ್ಚಾಗುತ್ತಿದೆ.

ಇದಕ್ಕೆ ಸ್ಪಷ್ಟಉದಾಹರಣೆ ಶನಿವಾರ ಮತ್ತು ಭಾನುವಾರ ಸೋಂಕು ದೃಢಪಟ್ಟಿರುವ ಬಗ್ಗೆ ಬೆಳಗ್ಗೆಯೇ ಮಾಹಿತಿ ನೀಡಿದರೂ ಸಂಜೆಯಾದರೂ ತಮ್ಮನ್ನು ಕರೆದೊಯ್ಯಲು ಆ್ಯಂಬುಲೆನ್ಸ್‌ ಮನೆಗೆ ಬಾರದ ಕಾರಣಕ್ಕೆ ಸೋಂಕಿತರೇ ಆಟೋ, ಸ್ವಂತ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಗೆ ಬಂದರೂ ತಕ್ಷಣ ದಾಖಲಾತಿ ಸಿಗದೆ ಆಸ್ಪತ್ರೆ ಮುಂಭಾಗ ಕೆಲಹೊತ್ತು ಕೂತು ಕಾಲ ಕಳೆದಿರುವ ಪ್ರಕರಣಗಳು ನಡೆದಿದ್ದನ್ನು ಸ್ಮರಿಸಬಹುದು.