ಬೆಂಗಳೂರು(ಫೆ.20): ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲವಾಗಿ ರಾಜ್ಯ ರೈತ ಸಂಘಟನೆಗಳು ಶಿವಮೊಗ್ಗ, ಹಾವೇರಿ ಮತ್ತು ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಿದೆ.

ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಕೆ.ಟಿ. ಗಂಗಾಧರ್‌, ಚುಕ್ಕಿ ನಂಜುಂಡಸ್ವಾಮಿ, ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ದಕ್ಷಿಣ ರಾಜ್ಯಗಳ ರೈತರು ಬೆಂಬಲಿಸುತ್ತಿಲ್ಲ ಎಂದು ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ರೈತರ ಹೋರಾಟಕ್ಕೆ ಬೆಂಬಲವಾಗಿ ರಾಜ್ಯದಲ್ಲಿ ಮಾ.20ರಂದು ಶಿವಮೊಗ್ಗ, 21ರಂದು ಹಾವೇರಿ ಮತ್ತು 22ರಂದು ಬೆಳಗಾವಿಯಲ್ಲಿ ರೈತ ಸಮಾವೇಶ ನಡೆಯಲಿದೆ ಎಂದರು.

ರೈಲು ರೋಕೋ: ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಶಾಂತಿಯುತ ಪ್ರತಿಭಟನೆ

ಸಮಾವೇಶಗಳಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ನ ವಕ್ತಾರ ರಾಕೇಶ್‌ ಟಿಕಾಯತ್‌ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಯುದ್ಧವೀರ್‌ ಸಿಂಗ್‌ ಭಾಗವಹಿಸಲಿದ್ದಾರೆ. ಅಲ್ಲದೆ, ತಾಲೂಕು ಮಟ್ಟದಲ್ಲಿ ರೈತರನ್ನು ಒಗ್ಗೂಡಿಸಿ ಸಮಾವೇಶ ನಡೆಸುವ ಬಗ್ಗೆ ಒಂದು ವಾರದಲ್ಲಿ ತೀರ್ಮಾನಿಸಲಾಗುವುದು ಎಂದರು. ರೈತರ ಪ್ರತಿಭಟನೆಗೆ ಟೂಲ್‌ಕಿಟ್‌ ರಚನೆ ಮಾಡಿರುವ ಆರೋಪದಲ್ಲಿ ದಿಶಾರವಿ ಬಂಧನ ಖಂಡನೀಯ ಎಂದು ತಿಳಿಸಿದರು.

ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಹಸಿರು ಶಾಲನ್ನು ದೆಹಲಿಯ ಪ್ರತಿಯೊಬ್ಬ ರೈತನಿಗೂ ಅಂಚೆ ಮೂಲಕ ರವಾನಿಸಲಾಗುವುದು ಎಂದು ಅವರು ಹೇಳಿದರು. ಮಹಾದಾಯಿ ಹೋರಾಟಗಾರ ಶಂಕರಣ್ಣ ಅಂಗಡಿ ಮತ್ತಿತರರಿದ್ದರು.