ಬೆಂಗಳೂರು(ಜ.05): ಅರ್ಚಕರು ಮತ್ತು ಪುರೋಹಿತರನ್ನು ಮದುವೆಯಾಗಲು ಬಯಸುವ ವಧುವಿಗೆ ಇದೇ ಮೊದಲ ಬಾರಿಗೆ ‘ಮೈತ್ರಿ’ ಯೋಜನೆಯಡಿ ಮೂರು ಲಕ್ಷ ರು. ಮೊತ್ತದ ಬಾಂಡ್‌ ವಿತರಿಸಲಾಗುತ್ತದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಎಚ್‌. ಸಚ್ಚಿದಾನಂದ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅರ್ಚಕರನ್ನು ಮತ್ತು ಪೌರೋಹಿತ್ಯ ಮಾಡುವವರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ವಧುವನ್ನು ಪ್ರೋತ್ಸಾಹಿಸಲು ಯೋಜನೆ ಜಾರಿಗೊಳಿಸಲಾಗುತ್ತಿದೆ.

ಬ್ರಿಟನ್‌ ರಿಟರ್ನ್ಡ್ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆ

ಬಾಂಡ್‌ನ ಹಣವನ್ನು ಮೂರು ವರ್ಷಗಳ ಬಳಿಕ ಫಲಾನುಭವಿಗಳು ಪಡೆಯಬಹುದು. ಯೋಜನೆಗೆ ಜ.6ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಇದೇ ರೀತಿ ಬಡ ಹೆಣ್ಣುಮಕ್ಕಳ ಮದುವೆಗೆ 25 ಸಾವಿರ ರು., ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ಬೋರ್‌ವೆಲ್‌, ಟ್ರ್ಯಾಕ್ಟರ್‌ ಖರೀದಿ ಮತ್ತು ಹೈನುಗಾರಿಕೆಗೆ ಧನ ಸಹಾಯ ನೀಡಲಾಗುತ್ತದೆ ಎಂದರು.

ಪ್ರತಿಭಾ ಪುರಸ್ಕಾರ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿ ಜಿಲ್ಲೆಯ ಮೂವರು ಬ್ರಾಹ್ಮಣ ವಿದ್ಯಾರ್ಥಿಗಳಿಗೆ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’ ಅಡಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ 15, 10 ಮತ್ತು 5 ಸಾವಿರ ರು.ಗಳ ನಗದು ಬಹುಮಾನ, ‘ಸಾಂದೀಪನಿ’ ಶಿಷ್ಯವೇತನದಡಿ ಪಿಯು ವಿದ್ಯಾರ್ಥಿಗಳಿಗೆ 20 ಸಾವಿರ ರು., ಪದವಿ ವಿದ್ಯಾರ್ಥಿಗಳಿಗೆ 25 ಸಾವಿರ ರು., ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ 50 ಸಾವಿರ ರು. ಶಿಷ್ಯವೇತನ ನೀಡಲಾಗುವುದು. ಸ್ವ ಉದ್ಯೋಗ ಕೈಗೊಳ್ಳುವವರಿಗೆ ಪುರುಷೋತ್ತಮ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ ಎಂದರು.