ಚಿಕ್ಕಬಳ್ಳಾಪುರ (ಫೆ.20):  ನೆರೆಯ ಕೇರಳ, ಮಹಾರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಮತ್ತೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಕೊರೋನಾ ಎರಡನೇ ಅಲೆ ಬರುವ ಸಾಧ್ಯತೆ ಬಗ್ಗೆ ರಾಜ್ಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಗೃಹ ಸಚಿವರಿಗೂ ಈ ಬಗ್ಗೆ ಪತ್ರ ಬರೆದಿರುವುದಾಗಿ ಸುಧಾಕರ್‌ ಸ್ಪಷ್ಟಪಡಿಸಿದರು.

ಕೊರೊನಾ ಹೋಯ್ತು ಅಂತ ಮೈಮರೆಯಬೇಡಿ, 2 ನೇ ಅಲೆ ಶುರುವಾಗಬಹುದು: ಸುಧಾಕರ್ ಎಚ್ಚರಿಕೆ ..

ಇಂದು ವಿಡಿಯೋ ಸಂವಾದ:

ಕೇರಳ, ಮಹಾರಾಷ್ಟ್ರದಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ಕೊರೊನಾ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಗೃಹ ಸಚಿವರ ಸಮ್ಮುಖದಲ್ಲಿ ಆಯಾ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ಸಹ ಶನಿವಾರ ಹಮ್ಮಿಕೊಳ್ಳಲಾಗಿದೆ. ಅನೇಕರಿಗೆ ಇಂದು ಉದಾಸೀನತೆ ಇದೆ. ಜನ ಸಾಮಾನ್ಯರು ವಿಶೇಷವಾಗಿ ಎಚ್ಚರ ವಹಿಸಬೇಕು, ಎಲ್ಲರೂ ಕೂಡ ಕೊರೊನಾ ಬಂದು ಹೊರಟು ಹೋಗಿದೆ ಎಂಬ ತಪ್ಪು ಗ್ರಹಿಕೆಯಲ್ಲಿದ್ದಾರೆ. ಇನ್ನೂ ಕೂಡ ಸಂಪೂರ್ಣವಾಗಿ ಕೋವಿಡ್‌ ಹೋಗಿಲ್ಲ. ಅದು ನಮ್ಮ ಮಧ್ಯೆಯೆ ಇದೆ ಎಂದು ಸಚಿವರು ಎಚ್ಚರಿಸಿದರು.

ಲಸಿಕೆ ಸದ್ಬಳಕೆಯಾಗಲಿ:

ಕೋವಿಡ್‌ ಲಸಿಕೆ ಬಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಕಾರ್ಯನಿರ್ವಹಿಸುತ್ತಿರು ವಾರಿಯರ್ಸ್‌ಗೆ ಪ್ರಧಾನಿ ಮೋದಿ ರವರು ಉಚಿತವಾಗಿ ಲಸಿಕೆ ಕೊಡುತ್ತಿದ್ದಾರೆ. ಲಸಿಕೆ ಬಂದಿರುವುದು ನೆಮ್ಮೆಲ್ಲರ ಪುಣ್ಯ. ಇದರ ಸದುಪಯೋಗಪಡಿಸಿಕೊಳ್ಳಬೇಕು, ಅದನ್ನು ಬಿಟ್ಟು ಮನಸೋಚ್ಛಿ ಮಾಸ್ಕ್‌ ಧರಿಸದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ನಮಗೆ ಬರುವುದೇ ಇಲ್ಲ. ನಮಗೆ ರೋಗ ನಿರೋಧಕ ಶಕ್ತಿ ಇದೆಯೆಂದು ಉದಾಸೀನ ತೋರಿದರೆ ಮುಂದಿನ ದಿನಗಳಲ್ಲಿ ಆಪತ್ತುನ್ನು ಎದುರಿಸಬೇಕಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಸಿದರು. ಕೇರಳ, ಮಾಹಾರಾಷ್ಟ್ರ ಮೂಲಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಟ್ಟು ಕಟ್ಟೆಚ್ಚರದಿಂದ ನೋಡಿಕೊಳ್ಳಬೇಕು ಎಂದರು.

ಆರ್‌ಟಿಸಿಪಿಆರ್‌ ಕಡ್ಡಾಯ

ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಕೇರಳ ಹಾಗೂ ಮಹಾರಾಷ್ಟ್ರದಿಂದ ಯಾರೆಲ್ಲಾ ಬರುತ್ತಾರೆ ಅವರು ಕಡ್ಡಾಯವಾಗಿ ಆರ್‌ಟಿಸಿಪಿಆರ್‌ ಪ್ರಮಾಣ ಪತ್ರ ಇಲ್ಲದೇ ಬರುವಂತಿಲ್ಲ ಎಂದು ಆದೇಶ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಗೃಹ ಸಚಿವರೊಂದಿಗೆ ಈ ಕುರಿತು ಚರ್ಚಿಸಿ ಶೀಘ್ರದಲ್ಲಿಯೆ ಸಿಎಂ ಜೊತೆ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಆಯೋಜಿಸಿ ಎರಡನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗುವುದು.

ಸಂವಿಧಾನ ಅಶಯ, ಕಾನೂನು ಚೌಕಟ್ಟಿನಲ್ಲಿ ಮೀಸಲು ಸೌಲಭ್ಯ

ಮೀಸಲಾತಿ ಕುರಿತು ವೈಯುಕ್ತಿಕವಾಗಿ ಹೇಳುವುದು ಸರಿಯಲ್ಲ:ಸಚಿವ ಸುಧಾಕರ್‌

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ, ಮೀಸಲಾತಿ ವಿಚಾರದ ಬಗ್ಗೆ ಸಿಎಂ ಯಡಿಯೂಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಧೀರ್‍ಘ ಚರ್ಚೆ ನಡೆದಿದೆ. ಸಂಪುಟದ ಎಲ್ಲಾ ಸದಸ್ಯರು ಕೂಡ ಮುಖ್ಯಮಂತ್ರಿಗಳಿಗೆ ಹಲವು ಸಲಹೆಗಳನ್ನು ನೀಡಲಾಗಿದೆ. ಸಲಹೆಗಳನ್ನು ಪರಿಗಣಿಸಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ವೈಯಕ್ತಿಕವಾಗಿ ಹೇಳಿಕೆಗಳನ್ನು ಕೊಡುವುದು ಸೂಕ್ತವಲ್ಲ. ಇವು ಗಂಭೀರ ಹಾಗೂ ಸೂಕ್ಷ್ಮವಾದ ವಿಚಾರಗಳಾಗಿವೆ. ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡಬೇಕೆಂಬುದು ನಮ್ಮೆಲ್ಲರ ಅಶಯವಾಗಿದೆ. ಇರುವ ಕಾನೂನು ಚೌಕಟ್ಟಿನಲ್ಲಿ ಸಂವಿಧಾನದ ಅಶಯ ಮೇಲೆ ಮೀಸಲಾತಿ ಕಲ್ಪಿಸಬೇಕಿರುವುದರಿಂದ ಮುಖ್ಯಮಂತ್ರಿಗಳು ನಾವು ಕೊಟ್ಟಿರುವ ಸಲಹೆಗಳನ್ನು ಪರಾಮರ್ಶಿಸಿ ಸದ್ಯದಲೇ ಸೂಕ್ತವಾದ ಅಂತಿಮ ನಿರ್ಧಾರವನ್ನು ಸಿಎಂ ಕೈಗೊಳ್ಳಲಿದ್ದಾರೆಂದರು. ಮೀಸಲಾತಿ ಬೇಕು ಎನ್ನುವ ಬೇಡಿಕೆಗಳು ಒಂದಡೆಯಾದರೆ ಮತ್ತೊಂದು ಕಡೆ ಕಾನೂನು ಚೌಕಟ್ಟು ಹಾಗೂ ಸಂವಿಧಾನದ ಆಶಯಗಳ ಮೇಲೆ ಎಲ್ಲವನ್ನು ನಿರ್ಧಾರ ಮಾಡಬೇಕಾಗುತ್ತದೆ ಎಂದರು.