ಕರ್ನಾಟಕ: 2 ತಿಂಗಳಲ್ಲಿ ಕೋವಿಡ್‌ಗೆ 2,500 ಯುವಕರು ಬಲಿ
* ಈವರೆಗೆ 20-49 ವರ್ಷದ 4488 ಯುವಕರ ಸಾವು
* 2 ತಿಂಗಳಲ್ಲಿ 8.57 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ
* ಕೋವಿಡ್ ಲಕ್ಷಣಗಳ ಬಗ್ಗೆ ಉದಾಸೀನ
ಬೆಂಗಳೂರು(ಮೇ.22): ರಾಜ್ಯದಲ್ಲಿ ಕೋವಿಡ್-19 ಮಹಾಮಾರಿ ಈವರೆಗೆ 4,488 ಯುವಕರನ್ನು ಬಲಿ ತೆಗೆದುಕೊಂಡಿದ್ದು ಈ ಪೈಕಿ ಕಳೆದ ಎರಡು ತಿಂಗಳಿನಲ್ಲಿ 2,500ಕ್ಕೂ ಹೆಚ್ಚು ಮಂದಿ ಮರಣವನ್ನಪ್ಪಿದ್ದಾರೆ.
ಕೋವಿಡ್ ಮೊದಲ ಅಲೆಗಿಂತಲೂ ಎರಡನೇ ಅಲೆಯು ಯುವಕರ ಪಾಲಿಗೆ ಮರಣ ಸದೃಶವಾಗಿ ಮಾರ್ಪಟ್ಟಿದೆ. ಕೋವಿಡ್‌ನಿಂದ ಮೃತಪಟ್ಟ20 ವರ್ಷದಿಂದ 49 ವರ್ಷದವರಲ್ಲಿ ಶೇ. 56 ಮಂದಿ ಮಾರ್ಚ್ 17ರಿಂದ ಮೇ 19ರ ಅವಧಿಯಲ್ಲಿ ಮರಣವನ್ನಪ್ಪಿದ್ದಾರೆ.
"
ರಾಜ್ಯದಲ್ಲಿ ಈವರೆಗೆ ಒಟ್ಟು 14.31 ಲಕ್ಷ ಯುವಕರಲ್ಲಿ ಸೋಂಕು ಕಂಡು ಬಂದಿದೆ. ಇದರಲ್ಲಿ ಕಳೆದೆರಡು ತಿಂಗಳಿನಲ್ಲಿ 20 ವರ್ಷದಿಂದ 49 ವರ್ಷದ 8.57 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದಾರೆ. ಅಂದರೆ ಯುವಕರಲ್ಲಿನ ಒಟ್ಟು ಸೋಂಕಿನ ಪ್ರಮಾಣದ ಶೇ.60ರಷ್ಟು ಮಾರ್ಚ್ 17ರಿಂದ ಮೇ 19ರ ಅವಧಿಯಲ್ಲಿ ದಾಖಲಾಗಿದೆ.
14 ದಿನ ಲಾಕ್‌ಡೌನ್ ವಿಸ್ತರಣೆ; ಜಿಲ್ಲೆಗಳಲ್ಲಿ ಕೊರೋನಾ ಇಳಿಕೆಯಾಗುವವರೆಗೂ ಕರುನಾಡು ಬಂದ್?
ರಾಜ್ಯದಲ್ಲಿ ಕೋವಿಡ್ ಸೋಂಕಿತ ಯುವಕರ ಒಟ್ಟು ಮರಣ ದರ ಶೇ.0.31 ರಷ್ಟಿದ್ದರೆ ಕಳೆದೆರಡು ತಿಂಗಳ ಮರಣ ದರ ಶೇ.0.29ರಷ್ಟಿದೆ. ಅಂದರೆ ಸಾವಿನ ಪ್ರಮಾಣ ಹೆಚ್ಚಿದ್ದರೂ ಮರಣ ದರ ಇಳಿಕೆ ಆಗಿದೆ. ಈ ವಯೋಮಾನದವರು ಇನ್ನೂ ಕೋವಿಡ್ ಲಸಿಕೆ ಅಭಿಯಾನದ ವ್ಯಾಪ್ತಿಗೆ ಒಳಪಟ್ಟಿಲ್ಲ. ಅಷ್ಟೇ ಅಲ್ಲದೆ ಈ ವಯೋಮಾನದವರು ದುಡಿಯುವ ವರ್ಗಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಮನೆಯೊಳಗೆ ಇದ್ದು ಸುರಕ್ಷಿತವಾಗಿರುವುದು ಕಷ್ಟ. ಆದ್ದರಿಂದ ಮೂರನೇ ಅಲೆಯಲ್ಲಿಯೂ ಈ ವರ್ಗ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.
ಈ ವಯೋಮಾನದವರಲ್ಲಿ ಸಾವಿನ ಪ್ರಮಾಣ ಹೆಚ್ಚಲು ಅನೇಕ ಕಾರಣಗಳಿವೆ. ಮುಖ್ಯವಾಗಿ ಈ ವರ್ಗದವರು ಲಸಿಕೆ ಪಡೆದುಕೊಂಡಿಲ್ಲ. ಹಾಗೆಯೇ ಕೋವಿಡ್ ಗುಣಲಕ್ಷಣಗಳ ಬಗ್ಗೆ ಆರಂಭದಲ್ಲಿ ಉದಾಸೀನ ತೋರಿ ರೋಗ ಲಕ್ಷಣ ತೀವ್ರವಾದ ಬಳಿಕ ಆಸ್ಪತ್ರೆಗಳಿಗೆ ದೌಡಾಯಿಸುತ್ತಾರೆ. ಆರೋಗ್ಯ ಸ್ಥಿತಿಯಲ್ಲಿ ತಕ್ಷಣವೇ ಕುಸಿತವಾಗಿ ಯುವಕರು ಮರಣವನ್ನಪ್ಪುತ್ತಿದ್ದಾರೆ ಎಂದು ಕೋವಿಡ್ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುತ್ತಾರೆ.
ಅದೇ ರೀತಿ ಯುವಕರು ಸೋಂಕು ದೃಢಪಟ್ಟ ಬಳಿಕ ತಮ್ಮ ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡುತ್ತಿಲ್ಲ. ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುತ್ತಿರುವುದಿಲ್ಲ. ಜತೆಗೆ ರಕ್ತದೊತ್ತಡ, ಮಧುಮೇಹದ ಜೊತೆಗೆ ಬೊಜ್ಜು ಸಹ ಯುವಕರನ್ನು ಕಾಡುತ್ತಿದ್ದರೂ ಅವುಗಳ ನಿಯಂತ್ರಣ ಕುರಿತು ಯಾವ ಪ್ರಯತ್ನ ನಡೆಸಿರುವುದಿಲ್ಲ. ಇದೆಲ್ಲವೂ ಕೋವಿಡ್‌ನಿಂದ ಯುವಕರು ಹೆಚ್ಚು ಮರಣ ಹೊಂದಲು ಕಾರಣವಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.