ಬೆಂಗಳೂರು(ಮೇ.02): ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರೆದಿದ್ದು ಸಕ್ಕರೆನಾಡು ಮಂಡ್ಯದಲ್ಲಿ ಒಂದೇ ದಿನ 8 ಪ್ರಕರಣ ದಾಖಲಾಗುವ ಮೂಲಕ ಕಹಿ ಅನುಭವ ನೀಡಿದೆ. ಇನ್ನು ಕಳೆದ ಎರಡು ವಾರದಿಂದ ನೆಮ್ಮದಿಯಾಗಿದ್ದ ಬೆಣ್ಣೆನಗರಿ ದಾವಣಗೆರೆಯಲ್ಲಿ ಏಕಾಏಕಿ 6 ಪ್ರಕರಣ ವರದಿಯಾಗಿದೆ.

ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ 24 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕು ಪ್ರಕರಣ 589ಕ್ಕೆ ಏರಿಕೆಯಾಗಿದೆ. ಈವರೆಗೆ 22 ಮಂದಿ ಸಾವನ್ನಪ್ಪಿದ್ದರೆ, ಶುಕ್ರವಾರ 22 ಮಂದಿ ಗುಣಮುಖ ಆಗುವ ಮೂಲಕ ಗುಣಮುಖ ಸಂಖ್ಯೆ 251ಕ್ಕೇರಿದೆ. ಹೀಗಾಗಿ ಸಕ್ರಿಯ ಪ್ರಕರಣ ಸಂಖ್ಯೆ 315 ಆಗಿದೆ.

ದಾವಣಗೆರೆಯಲ್ಲಿ ಕಳೆದ ಎರಡು ವಾರದಿಂದ ಶೂನ್ಯವಿದ್ದ ಸಕ್ರಿಯ ಕೊರೋನಾ ಪ್ರಕರಣಗಳಿಗೆ ಕಳೆದ ಎರಡು ದಿನದ ಹಿಂದೆ 2 ಪ್ರಕರಣ ಸೇರ್ಪಡೆಯಾಗಿತ್ತು. ಇದೀಗ ಏಕಾಏಕಿ ಆರು ಪ್ರಕರಣ ವರದಿಯಾಗುವ ಮೂಲಕ ಗುಣಮುಖರಾಗಿರುವ ಇಬ್ಬರು ಸೇರಿ ದಾವಣಗೆರೆಯಲ್ಲಿ ಹತ್ತು ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಈ ಮೂಲಕ ನೆಮ್ಮದಿ ಜೀವನದತ್ತ ಮರಳುತ್ತಿದ್ದ ಬೆಣ್ಣೆನಗರಿ ನಿವಾಸಿಗಳಿಗೆ ಮತ್ತೆ ಆತಂಕ ಶುರುವಾಗಿದೆ. ಉಳಿದಂತೆ ಮಂಡ್ಯದಲ್ಲಿ ಎಂಟು ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಕೇಂದ್ರದ ಪ್ರಕಾರ ಕೇಂದ್ರದಲ್ಲಿ ಮೂರೇ ಕೆಂಪು ಜಿಲ್ಲೆ!

ಇನ್ನು ಬೆಳಗಾವಿಯಲ್ಲಿ ತಬ್ಲೀಘಿ ಸಂಪರ್ಕದಿಂದ ಮೂರು ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ದಕ್ಷಿಣ ಕನ್ನಡ ಹಾಗೂ ಕಲಬುರಗಿಯಲ್ಲಿ ತಲಾ ಇಬ್ಬರಿಗೆ, ವಿಜಯಪುರ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ಖಚಿತಪಟ್ಟಿದೆ.

ಕೊರೋನಾ ಹಾಟ್‌ಸ್ಪಾಟ್‌ ಆಗಿರುವ ಬೆಂಗಳೂರು, ಮೈಸೂರಲ್ಲಿ ಒಂದೂ ಪ್ರಕರಣ ಶುಕ್ರವಾರ ವರದಿ ಆಗಿಲ್ಲ.

ಕಹಿ ಹಿಂಡಿದ ಕೊರೋನಾ:

ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ದಿನ ಎಂಟು ಸೋಂಕು ಪ್ರಕರಣಗಳು ದೃಢಪಟ್ಟಿವೆ. ಮಂಡ್ಯ ನಗರದಲ್ಲಿ ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿರುವ ಇಬ್ಬರು ಯುವಕರು, ಒಬ್ಬ ಯುವತಿಗೆ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕದಿಂದ ಕೆ.ಆರ್‌. ಪೇಟೆಯ 30 ವರ್ಷದ ಮತ್ತೊಬ್ಬ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಳವಳ್ಳಿಯಲ್ಲಿ ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿದ್ದ ಸೋಂಕಿತರಿಂದ 35 ವರ್ಷದ ವ್ಯಕ್ತಿಗೆ (ಸೋಂಕಿತ 179)ಸೋಂಕು ಹರಡಿತ್ತು. ಈಗ 35 ವರ್ಷದ ಸೋಂಕಿತನಿಂದ 13 ಹಾಗೂ 12 ವರ್ಷದ ಇಬ್ಬರು ಬಾಲಕರು, 19 ವರ್ಷದ ಯುವಕ ಹಾಗೂ 32 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಈ ಮೂಲಕ ಒಂದೇ ದಿನ ಎಂಟು ಪ್ರಕರಣ ವರದಿಯಾದಂತಾಗಿದೆ.

ಉಳಿದಂತೆ ಕಲಬುರಗಿಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 55 ವರ್ಷದ ವ್ಯಕ್ತಿ ಹಾಗೂ ಸೋಂಕಿತ ಮಹಿಳೆ (ಸೋಂಕಿತೆ-425) ಸಂಪರ್ಕದಲ್ಲಿದ್ದ 20 ವರ್ಷದ ಯುವತಿ ಸೋಂಕು ಬಂದಿದೆ. ವಿಜಯಪುರದಲ್ಲಿ ಮೊದಲ ಸೋಂಕಿತೆ ವೃದ್ಧೆಯಿಂದ 45 ವರ್ಷದ ವ್ಯಕ್ತಿಗೆ ಸೋಂಕು (ಸೋಂಕಿತ- 510) ಹರಡಿತ್ತು. ಈ ಸೋಂಕಿತನ ಸಂಪರ್ಕದಿಂದ ಶುಕ್ರವಾರ 54 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಹುಬ್ಬಳ್ಳಿಯಲ್ಲಿ ಕೆಮ್ಮು,ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ದೃಢಪಟ್ಟಿದೆ.

ದೇಶವ್ಯಾಪಿ ದಾಖಲೆಯ 2500 ಜನಕ್ಕೆ ವೈರಸ್‌!

ಮತ್ತೆ ಆತಂಕದಲ್ಲಿ ಬೆಣ್ಣೆ ನಗರಿ:

ಬುಧವಾರ ಹಾಗೂ ಗುರುವಾರ ತಲಾ ಒಂದೊಂದು ಸೋಂಕು ಪ್ರಕರಣ ಪತ್ತೆಯಾಗಿದ್ದ ದಾವಣಗೆರೆ ನಗರದಲ್ಲಿ ಶುಕ್ರವಾರ ಒಂದೇ ಬಾರಿಗೆ ಆರು ಮಂದಿಗೆ ಸೋಂಕು ಉಂಟಾಗಿದೆ. ಗುರುವಾರ ಸೋಂಕು ಪತ್ತೆಯಾಗಿದ್ದ ಶುಶ್ರೂಷಕಿಯಿಂದ ಆಕೆಯ 16 ವರ್ಷದ ಮಗನಿಗೆ ಹಾಗೂ ಗುರುವಾರ ಸೋಂಕು ಪತ್ತೆಯಾಗಿದ್ದ 69 ವರ್ಷದ ವೃದ್ಧನಿಂದ ಆತನ 34 ವರ್ಷದ ಮಗ, 31 ವರ್ಷದ ಸೊಸೆ, 26 ಹಾಗೂ 28 ವರ್ಷದ ಸೊಸೆಯಂದಿರು ಮತ್ತು ಒಂದು ವರ್ಷದ ಮೊಮ್ಮಗನಿಗೂ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯ ಸೋಂಕಿಯಲ್ಲಿ ಸೋಂಕಿಗೊಳಗಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಹಿಂದೆ ಸೋಂಕಿತರಾಗಿದ್ದ ಇಬ್ಬರು ಗುಣಮುಖರಾಗಿದ್ದಾರೆ.

ಬೆಳಗಾವೀಲಿ ಮತ್ತೆ ತಬ್ಲೀಘಿ ಅವಾಂತರ:

ಬೆಳಗಾವಿ ಜಿಲ್ಲೆಯಲ್ಲಿ ತಬ್ಲೀಘೀ ಜಮಾತ್‌ ಸಂಪರ್ಕದಿಂದ ಸೋಂಕಿತರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಒಟ್ಟಾರೆ ಈವರೆಗೂ ಜಿಲ್ಲೆಯಲ್ಲಿ 70 ಮಂದಿ ಸೋಂಕಿತರಾಗಿದ್ದಾರೆ. ಬಹುತೇಕರು ತಬ್ಲೀಘಿ ಜಮಾತ್‌ ಹಾಗೂ ದೆಹಲಿ ಹಿನ್ನೆಲೆ ಹೊಂದಿರುವವರೇ ಆಗಿದ್ದು ಶುಕ್ರವಾರ ತಬ್ಲೀಘಿ ಹಿನ್ನೆಲೆಯ ಸೋಂಕಿತರ ಪಟ್ಟಿಗೆ ಮತ್ತೆ ಮೂರು ಸೋಂಕು ಸೇರ್ಪಡೆಯಾಗಿದೆ. ಬೆಳಗಾವಿಯಲ್ಲಿ ಗುರುವಾರ 11 ಮಂದಿಗೆ ಸೋಂಕು ತಗುಲಿತ್ತು. ಶುಕ್ರವಾರ ಮತ್ತೆ ತಬ್ಲೀಘಿ ಜಮಾತ್‌ನ ಹಿನ್ನೆಲೆಯ ಸೋಂಕಿತನ ಸಂಪರ್ಕದಿಂದ (ಸೋಂಕಿತ -301) ಜಿಲ್ಲೆಯ ರಾಯಬಾಗದಲ್ಲಿ 55 ವರ್ಷ, 50 ವರ್ಷದ ಪುರುಷರು, 30 ವರ್ಷದ ಮಹಿಳೆ ಸೇರಿ ಮೂರು ಮಂದಿಗೆ ಸೋಂಕು ಹರಡಿದೆ.

ಅನಗತ್ಯ ಹುದ್ದೆ ರದ್ದತಿಗೆ ರಾಜ್ಯ ಸರ್ಕಾರ ಚಿಂತನೆ: 2 ಸಾವಿರ ಕೋಟಿ ಉಳಿತಾಯ!

22 ಮಂದಿ ಗುಣಮುಖ

ಶುಕ್ರವಾರ ಬಿಡುಗಡೆಯಾದವರ ಪೈಕಿ ಬೆಂಗಳೂರು ನಗರದಿಂದ 8 ಮಂದಿ, ವಿಜಯಪುರದಿಂದ 5 ಮಂದಿ, ಕಲಬುರಗಿಯಲ್ಲಿ ನಾಲ್ಕು ಮಂದಿ, ಬಳ್ಳಾರಿಯಲ್ಲಿ ಇಬ್ಬರು, ಗದಗ, ಮೈಸೂರಿನಲ್ಲಿ ತಲಾ ಒಬ್ಬ ಸೇರಿ ಒಟ್ಟು 22 ಮಂದಿ ಇದ್ದಾರೆ.

ಇತರೆ ಅಂಕಿ-ಅಂಶ

ಸೋಂಕಿತರ ಸಂಪರ್ಕದಿಂದ ಕ್ವಾರಂಟೈನ್‌ನಲ್ಲಿರುವವರು: 24,133

ಪ್ರಾಥಮಿಕ ಸಂಪರ್ಕಿತರು: 5,776

ದ್ವಿತೀಯ ಹಂತದ ಸಂಪರ್ಕಿತರು: 18,357

ಶುಕ್ರವಾರ ನಡೆಸಿದ ಒಟ್ಟು ಪರೀಕ್ಷೆ: 4,742

ನೆಗೆಟಿವ್‌ ವರದಿ: 4,406

ಒಟ್ಟು ಸೋಂಕು ದೃಢ: 24