ಬೆಂಗಳೂರು(ನ.27):  ಲಾಕ್‌ಡೌನ್‌ ನಿರ್ಬಂಧ ಸಡಿಲಗೊಂಡಿರುವುದರೊಂದಿಗೆ ತುಳಸಿ ಪೂಜೆ ಮತ್ತು ರೇವತಿ ನಕ್ಷತ್ರ ಒಂದೇ ದಿನ ಬಂದ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಾದ್ಯಂತ 2000ಕ್ಕೂ ಅಧಿಕ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅನೇಕ ಕಡೆ ಗೃಹ ಪ್ರವೇಶ ಸಮಾರಂಭಗಳೂ ನಡೆದಿವೆ.  ಅನ್‌ಲಾಕ್‌ಡೌನ್‌ 5ರಲ್ಲಿ ಸಮಾರಂಭದಲ್ಲಿ 250ಕ್ಕಿಂತ ಹೆಚ್ಚು ಮಂದಿ ಸೇರಲು ಅವಕಾಶ ನೀಡಿದ್ದರೂ ಈವರೆಗೆ ಇಷ್ಟುದೊಡ್ಡ ಸಂಖ್ಯೆಯಲ್ಲಿ ಸಮಾರಂಭಗಳು ನಡೆದಿರಲಿಲ್ಲ.

ಗುರುವಾರ ಉತ್ತಮ ಮುಹೂರ್ತ ಇದ್ದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹೆಚ್ಚಿನ ಜಿಲ್ಲಾ, ತಾಲೂಕು ಕೇಂದ್ರಗಳ ಬಹುತೇಕ ಕಲ್ಯಾಣ ಮಂಟಪಗಳು ಮೊದಲೇ ಕಾಯ್ದಿರಿಸಲ್ಪಟ್ಟಿದ್ದವು. ಇನ್ನೂ ಕೆಲವರು ತಮ್ಮ ಮನೆಯಲ್ಲೇ ಕಾರ್ಯ ಮಾಡಿದ್ದಾರೆ. ಬಳ್ಳಾರಿ, ಮೈಸೂರು, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಯಾವ ಕಲ್ಯಾಣಮಂಟಪವೂ ಖಾಲಿ ಇರಲೇ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಹೋಟೆಲ್‌ನಲ್ಲಿ, ಖಾಸಗಿಯಾಗಿ ಮತ್ತು ಮನೆಯ ಮುಂದೆ ಹೀಗೆ ಅನೇಕ ಕಡೆ ಮದುವೆಯಾಗಿವೆ. ಧರ್ಮಸ್ಥಳ, ಕಟೀಲು ಸೇರಿದಂತೆ ಅನೇಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೂ ವಿವಾಹಗಳಾಗಿವೆ. ಗ್ರಾಮೀಣ ಭಾಗದಲ್ಲಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳಾಗಿವೆ.

ಧಾರೆ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ ವಧು!

ಬಳ್ಳಾರಿ ಜಿಲ್ಲೆಯಲ್ಲಿ ಗುರುವಾರ 450ಕ್ಕೂ ಹೆಚ್ಚು ಮದುವೆಗಳಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 260ಕ್ಕೂ ಅಧಿಕ ವಿವಾಹಗಳು ನೆರವೇರಿವೆ. ಗದಗದಲ್ಲಿ 150, ಮೈಸೂರು 144, ಕೊಪ್ಪಳ, ಹಾವೇರಿ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 100, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನಗಳಲ್ಲಿ ತಲಾ 50, ರಾಮನಗರ, ಕಲಬುರಗಿಗಳಲ್ಲಿ ತಲಾ 30ಕ್ಕೂ ಹೆಚ್ಚು ಮದುವೆಗಳು ನಡೆದಿವೆ.

ಇದೇ ವೇಳೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕಲಬುರಗಿ ಜಿಲ್ಲೆಗಳಲ್ಲಿ ಮುಂದಿನ ತಿಂಗಳು ಶುಭಮುಹೂರ್ತಗಳು ಪ್ರಾರಂಭವಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹ ಕಾರ್ಯಗಳು ನೆರವೇರಲಿಲ್ಲ.