ಬೆಂಗಳೂರು(ಜು.16): ಕೊರೋನಾ ಕಡಿವಾಣಕ್ಕೆ ಜಾರಿಗೊಳಿಸಿರುವ ಲಾಕ್‌ಡೌನ್‌ಗೆ ಪೊಲೀಸರ ತುಸು ಮೃದು ಧೋರಣೆ ತಾಳಿದ್ದು, ಬುಧವಾರ ಮೊದಲ ದಿನ ನಿಯಮ ಉಲ್ಲಂಘಿಸಿದ ಸಂಬಂಧ 200 ವಾಹನಗಳನ್ನು ಜಪ್ತಿಗೊಳಿಸಿದ್ದಾರೆ.
ಈ 200 ವಾಹನ ಸವಾರರ ವಿರುದ್ಧ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣ ಕಾಯ್ದೆಯಡಿ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.

ಈ ಹಿಂದಿನ ಲಾಕ್‌ಡೌನ್‌ ವೇಳೆ ನಾಗರಿಕರಿಗೆ ‘ಲಾಠಿ’ ಬಿಸಿ ಮುಟ್ಟಿಸಿ ಅಬ್ಬರಿಸಿದ್ದ ಪೊಲೀಸರಿಗೆ ಸೌಮ್ಯತೆಯಿಂದ ಕಾರ್ಯನಿರ್ವಹಿಸುವಂತೆ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಸೂಚಿಸಿದ್ದಾರೆ. ಇನ್ನೊಂದೆಡೆ ಸೋಂಕಿನ ಭೀತಿ ಸಹ ಪೊಲೀಸರಲ್ಲಿ ಆವರಿಸಿದೆ. ಇದರಿಂದಾಗಿ ಜನ ರಸ್ತೆಗಿಳಿದರೂ ಮಾತಿನಲ್ಲೇ ಎಚ್ಚರಿಕೆ ನೀಡಿಕೆ ಮಾತ್ರ ಖಾಕಿ ಪಡೆ ಸಿಮೀತವಾಗಿದೆ.

ಫೀಲ್ಡಿಗಿಳಿದ ಸಿಂಗಂ ರವಿ ಚನ್ನಣ್ಣನವರ್: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ವಿನೂತನ ಶಿಕ್ಷೆ

ನಗರ ಸೇರುವ ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗಳಲ್ಲಿ ಬೆಳಗ್ಗೆ ಮತ್ತು ಮುಂಜಾನೆ ಕೆಲ ಹೊತ್ತು ವಾಹನ ಸಂಚಾರ ಸಹಜವಾಗಿತ್ತು. ಆದರೆ ನಗರ ಅನೇಕ ಭಾಗಗಳಲ್ಲಿನ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಜನ ಸಂಚಾರ ನಿರ್ಬಂಧಿಸಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತುರ್ತು ಅಗತ್ಯ ಸೇವೆಗಳ ಉತ್ಪಾದಿಸುವ ಕಾರ್ಖಾನೆಗಳು ಕಾರ್ಯ ನಿರ್ವಹಿಸಿದ್ದರಿಂದ ಕಾರ್ಮಿಕರ ಓಡಾಟ ಹೆಚ್ಚಾಗಿಯೇ ಇತ್ತು. ಯಶವಂತಪುರ ಮತ್ತು ಮೈಸೂರು ರಸ್ತೆ ಪಾದರಾಯನಪುರದಲ್ಲಿ ಅನಗತ್ಯವಾಗಿ ರಸ್ತೆಗೆ ಬಂದ ಜನರಿಗೆ ಪೊಲೀಸರು ಲಾಠಿ ರುಚಿ ತೊರಿಚಿಸಿದ ದೃಶ್ಯಗಳು ಕಂಡು ಬಂದವು.

ವಾಹನಗಳ ತಪಾಸಣೆ ಬಿಗಿಯಾಗಿಲ್ಲ

ಸೋಂಕಿನ ಭೀತಿ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳ ತಪಾಸಣೆಗೆ ಪೊಲೀಸರು ಹೆಚ್ಚಿನ ಆಸಕ್ತಿ ವಹಿಸಿಲ್ಲ. ನಗರ ವ್ಯಾಪ್ತಿ ಪ್ರಮುಖ ರಸ್ತೆಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಪೊಲೀಸರು ನಿರ್ಮಿಸಿದ್ದಾರೆ. ಆದರೆ ಗಂಭೀರವಾಗಿ ವಾಹನಗಳನ್ನು ಅಡ್ಡಗಟ್ಟಿಕ್ರಮ ಜರುಗಿಸದೆ ಅವರು ಮೃದು ಧೋರಣೆ ತಾಳಿದ್ದಾರೆ. ಇದೂ ಸಹ ಲಾಕ್‌ಡೌನ್‌ ಸಂಪೂರ್ಣ ಕಾರ್ಯರೂಪಕ್ಕಿಳಿಸಲು ತೊಡಕಾಗಿದೆ ಎನ್ನಲಾಗುತ್ತಿದೆ.