*  ಮಹತ್ವದ ಆದೇಶ ನೀಡಿದ ಹೈಕೋರ್ಟ್‌*  ಕೈಕೋಳ ಹಾಕುವಾಗ ಬಾಡಿ ಕ್ಯಾಮೆರಾ ಕಡ್ಡಾಯ*  ಬೇಡಿ ಹಾಕಿದ್ದು ಕಾನೂನು ಬಾಹಿರ  

ಬೆಂಗಳೂರು(ಜೂ.30):  ಸಾಮಾನ್ಯ ಕೈದಿಗಳನ್ನು ಬಂಧಿಸಿದಾಗ ಕೈಕೋಳ ಹಾಕಬಾರದು. ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ಬಂಧಿತರಿಗೆ ಕೈಕೊಳ ಹಾಕಲು ಅವಕಾಶವಿದೆ. ಕೈಕೋಳ ತೊಡಿಸುವ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಿರಲೇಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಕೈಕೋಳ ಹಾಕಿದ್ದಕ್ಕಾಗಿ ಪರಿಹಾರ ನೀಡುವಂತೆ ಕೋರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಪ್ರೀತ್‌ ಈಶ್ವರ್‌ ದಿವಟೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರು ಧಾರವಾಡ ಪೀಠದಲ್ಲಿ ಈ ಆದೇಶ ಮಾಡಿದ್ದಾರೆ. ಅಲ್ಲದೆ, ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಅರ್ಜಿದಾರರಿಗೆ ಬಂಧಿಸಿದಾಗ ಕಾನೂನು ಬಾಹಿರವಾಗಿ ಕೈಕೊಳ ಹಾಕಿದ್ದಕ್ಕಾಗಿ 2 ಲಕ್ಷ ರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಇದೇ ವೇಳೆ ಆದೇಶಿಸಿದೆ.

ಬೀದಿನಾಯಿಗಳ ದಾಳಿಗೆ ಪೌರ ಸಂಸ್ಥೆಗಳೇ ಹೊಣೆ: ಹೈಕೋರ್ಟ್‌

ನಿರ್ದೇಶನಗಳು:

ಆರೋಪಿಗಳನ್ನು ಬಂಧಿಸುವಾಗ ಕೈಕೋಳ ತೊಡಿಸುವ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಬೇಕು. ಬೇಡಿ ಹಾಕಿದ್ದಕ್ಕೆ ಕಾರಣವನ್ನು ಕೇಸ್‌ ಡೈರಿಯಲ್ಲಿ ಬರೆಯಬೇಕು. ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಬೇಡಿ ಹಾಕಲಾಗಿತ್ತೇ ಎಂಬುದನ್ನು ನ್ಯಾಯಾಧೀಶರು ವಿಚಾರಿಸಬೇಕು. ಕೈಕೋಳ ಹಾಕಿದ್ದರೆ ಅದಕ್ಕೆ ಅಧಿಕಾರಿಗಳು ಕಾರಣ ನೀಡಬೇಕು. ಸಾಧ್ಯವಾದಷ್ಟು ವಿಡಿಯೋ ಸಂವಾದಲ್ಲೇ ಕೈದಿಗಳನ್ನು ಹಾಜರುಪಡಿಸಬೇಕು. ಕೈಕೋಳ ಹಾಕಲು ನ್ಯಾಯಾಲಯದಿಂದ ಅನುಮತಿ ಪಡೆಯಬೇಕು. ತಪ್ಪಿದರೆ ಕಾನೂನುಬಾಹಿರವಾಗಿ ಕೈದಿಗೆ ಕೈಕೋಳ ಹಾಕಿರುವುದಕ್ಕೆ ಅಧಿಕಾರಿ ಹೊಣೆಯಾಗಲಿದ್ದು, ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಬಂಧನದ ವೇಳೆ ಸಂಭಾಷಣೆ ದಾಖಲಿಸಲು ಕ್ಯಾಮೆರಾಗಳಲ್ಲಿ ಮೈಕ್ರೊ ಫೋನ್‌ ಸಹ ಅಳವಡಿಸಬೇಕು. ಇದರಿಂದ ಬಂಧನದ ಪ್ರತಿಯೊಂದು ದೃಶ್ಯ ಮತ್ತು ಆ ನಿರ್ದಿಷ್ಟಸಮಯದಲ್ಲಿ ನಡೆಯುವ ಸಂಭಾಷಣೆ, ರೆಕಾರ್ಡಿಂಗ್‌ ದಿನಾಂಕ ಸ್ಪಷ್ಟವಾಗಿ ತಿಳಿಯುತ್ತದೆ. ಈ ರೀತಿ ಚಿತ್ರೀಕರಿಸಿದ ವಿಡಿಯೋ ಹಾಗೂ ಆಡಿಯೋವನ್ನು ಕನಿಷ್ಠ ಒಂದು ವರ್ಷದ ಅವಧಿಯವರೆಗೆ ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಸ್‌ಒಪಿ ಸಿದ್ಧಪಡಿಸಬೇಕು. ವ್ಯಕ್ತಿಯನ್ನು ಬಂಧಿಸಲು ಅಧಿಕಾರ ಹೊಂದಿರುವ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾಗಳನ್ನು ಒದಗಿಸಬೇಕು. ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾಗಳನ್ನು ಬಳಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣದ ವಿವರ:

ಚೆಕ್‌ ಬೌನ್ಸ್‌ ಪ್ರಕರಣ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಆರೋಪಿ ಚಿಕ್ಕೋಡಿಯ 30 ವರ್ಷದ ದಿವಟೆ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿ ಚಿಕ್ಕೋಡಿ ತಾಲೂಕು ನ್ಯಾಯಾಲಯ 2019ರಲ್ಲಿ ಆದೇಶಿಸಿತ್ತು. ಆದೇಶದ ಅನ್ವಯ ದಿವಟೆಯನ್ನು ಬಂಧಿಸಿದ್ದ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಕೈಕೋಳ ಹಾಕಿದ್ದರು.

Bengaluru: ರಸ್ತೆ ಗುಂಡಿ ಮುಚ್ಚಲು ಮಿಲಿಟರಿಗೆ ವಹಿಸ್ತೀವಿ: ಹೈಕೋರ್ಟ್‌ ಸಿಡಿಮಿಡಿ

ಬೇಡಿ ಹಾಕಿದ್ದು ಕಾನೂನು ಬಾಹಿರವಾಗಿದ್ದು, ಪರಿಹಾರ ನೀಡಲು ಆದೇಶಿಸುವಂತೆ ಕೋರಿ ದಿವಟೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮಗೆ ಕೈಕೋಳ ಹಾಕಿರುವ ವೇಳೆ ಸ್ನೇಹಿತರೊಬ್ಬರು ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಿಸಿದ್ದ ವಿಡಿಯೋವನ್ನು ಹೈಕೋರ್ಚ್‌ಗೆ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ನೀಡಲಾದ ವಾರಂಟ್‌ ಆಧಾರದ ಮೇಲೆ ಅರ್ಜಿದಾರರನ್ನು ಬಂಧಿಸಿದ ನಂತರ ಕೈಕೋಳ ಹಾಕಿರುವುದು ಸರಿಯಲ್ಲ ಎಂದು ಆದೇಶಿಸಿ, ಬಂಧಿತರಿಗೆ ಕೈಕೋಳ ಹಾಕುವ ವಿಚಾರದಲ್ಲಿ ಅನುಸರಿಸಬೇಕಾದ ವಿಧಾನದ ಬಗ್ಗೆ ಪೊಲೀಸ್‌ ಇಲಾಖೆಗೆ ಹಲವು ನಿರ್ದೇಶನ ನೀಡಿದೆ.