ಬೆಂಗಳೂರಲ್ಲಿ 2 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!
ಬುಧವಾರ 3 ಸಾವಿರ ಕೇಸ್| ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ| ಪುಣೆ, ದೆಹಲಿ ಬಳಿಕ ಇದೀಗ ಬೆಂಗಳೂರಿನಲ್ಲಿ 2 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆ|
ಬೆಂಗಳೂರು(ಸೆ.23): ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 3,082 ಹೊಸ ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ನಗರದ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ.
ಬೆಂಗಳೂರಿಗೆ ಕೊರೋನಾ ಸೋಂಕು ಮೊದಲ ಪ್ರಕರಣ ಪತ್ತೆಯಾಗಿ 199 ದಿನ ಕಳೆದಿದ್ದು, ಈವರೆಗೆ ಒಟ್ಟು 2,00,728 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಬೆಂಗಳೂರು 2 ಲಕ್ಷಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣ ಪತ್ತೆಯಾದ ದೇಶದ ಮೂರನೇ ನಗರವಾಗಿದೆ. ಪುಣೆ, ದೆಹಲಿ ಬಳಿಕ ಇದೀಗ ಬೆಂಗಳೂರಿನಲ್ಲಿ 2 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗಿವೆ.
ಕೊರೋನಾ ಸೋಂಕಿನ ಭೀತಿ ಆರಂಭವಾದ 114 ದಿನದ ಬಳಿಕ ಮೊದಲ 50 ಸಾವಿರ ಪ್ರಕರಣ ಪತ್ತೆಯಾಗಿದ್ದವು, ತದ ನಂತರ ಕೇವಲ 23 ದಿನದಲ್ಲಿ ಮತ್ತೆ 50 ಸಾವಿರ ಹೊಸ ಸೋಂಕು ಪತ್ತೆಯಾಗುವ ಮೂಲಕ ಒಂದು ಲಕ್ಷ ದಾಟಿತ್ತು. ಅದಾದ ಕೇವಲ 17 ದಿನದಲ್ಲಿ ಮತ್ತೆ 50 ಸಾವಿರ ಪತ್ತೆಯಾಗುವ ಮೂಲಕ 1.5 ಲಕ್ಷಕ್ಕೆ ತಲಪಿತ್ತು. ಮಂಗಳವಾರ 2 ಲಕ್ಷ ದಾಟುವ ಮೂಲಕ 15 ದಿನದಲ್ಲಿ 50 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿವೆ.
ಡಿಸಿಎಂ ಕಾರಜೋಳಗೆ ಕೊರೋನಾ, ಆಸ್ಪತ್ರೆಗೆ ದಾಖಲು
ಇನ್ನು ಮಂಗಳವಾರ ಬೆಂಗಳೂರಿನಲ್ಲಿ 4,145 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಗುಣಮುಖರ ಸಂಖ್ಯೆ 1,58,029ಕ್ಕೆ ಏರಿಕೆಯಾಗಿದೆ. ಜತೆಗೆ ಮಂಗಳವಾರ 29 ಸೋಂಕಿತರು ಮೃತಪಟ್ಟವರದಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 2,715ಕ್ಕೆ ಏರಿಕೆಯಾಗಿದೆ. ನಗರದ ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನ್‌ನಲ್ಲಿ 39,983 ಮಂದಿ ಇದ್ದಾರೆ. ನಗರದ ವಿವಿಧ ಆಸ್ಪತ್ರೆಯಲ್ಲಿ 259 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಗರದಲ್ಲಿ ಪ್ರತಿ 50 ಸಾವಿರ ಗಡಿದಾಟಿದ ವಿವರ
ದಿನಾಂಕ ಒಟ್ಟು ಸೋಂಕು ಸಂಖ್ಯೆ
ಜು.29 51,091
ಆ.21 1,02,770
ಸೆ.7 1,50,523
ಸೆ.22 2,00,728