ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಇದೀಗ ಇಬ್ಬರು ಪತ್ರಕರ್ತರೂ ಕೂಡ ಭಾಗಿಯಾಗಿದ್ದಾರೆ ಎನ್ನುವ  ಸ್ಫೋಟಕ ಸಂಗತಿ ಇದೀಗ ಹೊರ ಬಿದ್ದಿದೆ. ಇವರು ಕೋಟಿ ಕೋಟಿ ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. 

ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಿಸಿಬಿ ಅಧಿಕಾರಿಗಳು ನಿರಾಕರಿಸಿದ್ದಾರೆ. 

ಇಬ್ಬರೂ ಟೀವಿ ವಾಹಿನಿಯ ಪತ್ರಕರ್ತರಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಓರ್ವ ಆರೋಪಿ ಆ್ಯಂಬಿಡೆಂಟ್ ಪ್ರಕರಣ ದಲ್ಲಿ ಪೊಲೀಸ್ ಪ್ರಕರಣಗಳನ್ನು ನಿಭಾಯಿಸುತ್ತೇನೆ, ನಿಮಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು 30 ಕೋಟಿ ರು. ಹಣ ಪಡೆದಿದ್ದಾರೆ ಎನ್ನುವ ಮಾಹಿತಿ ಸಿಸಿಬಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. 

ಈತ ಹಲವು ಬಾರಿ ಆ್ಯಂಬಿಡೆಂಟ್ ಮಾಲಿಕ ಫರೀದ್‌ನಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಮತ್ತೊಬ್ಬ ಪತ್ರಕರ್ತ ಒಟ್ಟು 35 ಕೋಟಿ ರು. ಹಣವನ್ನು ಫರೀದ್ ಅವರಿಂದ ಪಡೆದಿದ್ದು, ಈ ಬಗ್ಗೆ ಸಿಸಿಬಿ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಈ ಹಣದಲ್ಲಿ ಫರೀದ್ ಹೇಳಿದವರಿಗೆ 30 ಕೋಟಿ ರು. ಮೌಲ್ಯದ ಆಸ್ತಿಯನ್ನು ನೋಂದಾಯಿಸಿಕೊಟ್ಟಿದ್ದಾನೆ ಎಂದು ಹೇಳಿದ್ದಾನೆ. 

ಇದನ್ನು ಹೊರತುಪಡಿಸಿ ಬ್ಲಾಕ್‌ಮೇಲ್ ಮಾಡಿ 15 ಕೋಟಿ ರು. ಹಣವನ್ನು ಫರೀದ್ ಬಳಿ ವಸೂಲಿ ಮಾಡಿದ್ದಾನೆ ಎಂದು ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ. ಇನ್ನು ಆ್ಯಂಬಿ ಡೆಂಟ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಫರೀದ್, ‘ನಾನು ಸಾರ್ವಜನಿಕರಿಗೆ ಹೂಡಿಕೆಯ ಹಣವನ್ನು ವಾಪಸ್ ಕೊಡಬೇಕು ಎಂದುಕೊಂಡಿದ್ದೆ. ಅಷ್ಟೊತ್ತಿಗೆ ನನ್ನ ಮೇಲೆ ದೂರುಗಳು ದಾಖಲಾಗಲು ಪ್ರಾರಂಭವಾಗಿದ್ದವು’ ಎಂದು ತಿಳಿಸಿದ್ದಾನೆನ್ನಲಾಗಿದೆ.