ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಹವಾಮಾನ ವೈಪರೀತ್ಯದಿಂದ ಸಮಸ್ಯೆಗೆ ಸಿಲುಕಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಾವು ನಾಲ್ವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಶ್ರೀನಗರಕ್ಕೆ ಕಳುಹಿಸಿದ್ದೇವೆ. ಅವರು ಅಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ರಾಜ್ಯದ ಜನರೊಂದಿಗೆ ಸಮನ್ವಯ ಸಾಧಿಸಿದ್ದಾರೆ ಎಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ
ವಿಧಾನಸಭೆ(ಜು.11): ಕರ್ನಾಟಕದ 18 ಸಾವಿರ ಜನ ಈ ಬಾರಿ ಜಮ್ಮು-ಕಾಶ್ಮೀರದ ಅಮರನಾಥ ಯಾತ್ರೆಗೆ ತೆರಳಿದ್ದು, ಹವಾಮಾನ ವೈಪರೀತ್ಯದಿಂದ ರಸ್ತೆ ಸಂಚಾರ ಸ್ಥಗಿತಗೊಂಡು ಮಾರ್ಗಮಧ್ಯೆ ಸಿಲುಕಿದ್ದಾರೆ. ಆದರೆ, ಅವರೆಲ್ಲರೂ ಸ್ಥಳೀಯ ಆಡಳಿತ ಕಲ್ಪಿಸಿರುವ ತಾತ್ಕಾಲಿಕ ಕ್ಯಾಂಪ್‌ಗಳಲ್ಲಿ ಸುರಕ್ಷಿತವಾಗಿದ್ದಾರೆ. ಯಾವುದೇ ಆತಂಕ ಬೇಡ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸದನದಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಹವಾಮಾನ ವೈಪರೀತ್ಯದಿಂದ ಸಮಸ್ಯೆಗೆ ಸಿಲುಕಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಾವು ನಾಲ್ವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಶ್ರೀನಗರಕ್ಕೆ ಕಳುಹಿಸಿದ್ದೇವೆ. ಅವರು ಅಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ರಾಜ್ಯದ ಜನರೊಂದಿಗೆ ಸಮನ್ವಯ ಸಾಧಿಸಿದ್ದಾರೆ ಎಂದರು.
ಜೈನಮುನಿ ಹತ್ಯೆ ಕೇಸ್ ಸಿಬಿಐ ತನಿಖೆಗೆ ವಿಪಕ್ಷ ಒತ್ತಾಯ; 'ಸಿಬಿಐ ಬೇಕಿಲ್ಲ ನಮ್ಮವರೇ ಸಮರ್ಥ' -ಗೃಹಸಚಿವ
ಆ ರಾಜ್ಯದಲ್ಲಿ ರಸ್ತೆ ಸಂಚಾರ ಸ್ಥಗಿತದಿಂದ ಜನ ಆತಂಕಗೊಂಡಿದ್ದಾರೆ. ಆದರೆ, ಅವರೆಲ್ಲರೂ ಅಲ್ಲಲ್ಲಿ ಕ್ಯಾಂಪ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಈಗಿರುವ ಹವಾಮಾನ ಪರಿಸ್ಥಿತಿ ಬುಧವಾರ ತಿಳಿಯಾಗಬಹುದು. ಬಳಿಕ ಅವರನ್ನು ಕ್ಯಾಂಪ್‌ಗಳಿಂದ ಶ್ರೀನಗರಕ್ಕೆ ಕರೆತರಲು ಸ್ಥಳೀಯ ಸರ್ಕಾರ ಹಾಗೂ ಎನ್‌ಡಿಆರ್‌ಎಫ್ ಮೂಲಕ ಕ್ರಮ ವಹಿಸಲಾಗುವುದು. ಅಲ್ಲಿಯವರೆಗೆ ಅವರು ಕ್ಯಾಂಪ್‌ಗಳಲ್ಲೇ ಇರಬೇಕಾಗಬಹುದು ಎಂದು ಮಾಹಿತಿ ನೀಡಿದರು.
ಮಧ್ಯಪ್ರವೇಶಿಸಿದ ಸದಸ್ಯ ಬಾಲಕೃಷ್ಣ ಅವರು ಅಮರನಾಥ ಯಾತ್ರೆಗೆ ಹೋಗಿದ್ದ ನಾಲ್ವರು ತಪ್ಪು ಮಾಹಿತಿಯಿಂದ ಲೇಹ್-ಲಡಾಕ್‌ಗೆ ಹೋಗಿ ಸಿಲುಕಿದ್ದಾರೆ. ಅವರ ರಕ್ಷಣೆಗೂ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಅಮರನಾಥ ಯಾತ್ರೆಗೂ ಲೇಹ್-ಲಡಾಕ್‌ಗೂ ಸಂಬಂಧವಿಲ್ಲ. ಅವರು ಅಲ್ಲಿಗೆ ಏಕೆ ಹೋಗುತ್ತಿದ್ದಾರೋ ಗೊತ್ತಿಲ್ಲ. ನಮಗೆ ಯಾವುದೇ ದೂರೂ ಬಂದಿಲ್ಲ. ಆದರೂ ಅಲ್ಲಿನ ಸರ್ಕಾರದೊಂದಿಗೂ ಸಂಪರ್ಕ ಸಾಧಿಸಿ ಹವಾಮಾನ ಸರಿ ಹೋಗುವವರೆಗೆ ಆ ನಾಲ್ವರ ರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
