ರಾಜಧಾನಿ ಬೆಂಗಳೂರಲ್ಲಿ ಟೊಮೆಟೋ ದರ ಮತ್ತೆ ಗಗನಕ್ಕೆ ಏರಿದ್ದು, ಇದೇ ಮೊದಲ ಬಾರಿಗೆ ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ.ಗೆ 157ನಂತೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 135ರಿಂದ 140 ವರೆಗೆ ವ್ಯಾಪಾರವಾಗಿದೆ.
ಬೆಂಗಳೂರು (ಆ.01): ರಾಜಧಾನಿ ಬೆಂಗಳೂರಲ್ಲಿ ಟೊಮೆಟೋ ದರ ಮತ್ತೆ ಗಗನಕ್ಕೆ ಏರಿದ್ದು, ಇದೇ ಮೊದಲ ಬಾರಿಗೆ ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ.ಗೆ 157ನಂತೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 135ರಿಂದ 140 ವರೆಗೆ ವ್ಯಾಪಾರವಾಗಿದೆ. ರಾಜ್ಯದಲ್ಲಿ ಮುಂದಿನ ಎಂಟು ಹತ್ತು ದಿನಗಳಲ್ಲಿ ದರ 200 ರು. ದಾಟಿದರೂ ಅಚ್ಚರಿ ಇಲ್ಲ ಎಂದು ವರ್ತಕರು ಹೇಳುತ್ತಿದ್ದು, ಜನಸಾಮಾನ್ಯರಿಂದ ದುಬಾರಿ ಕೆಂಪು ತರಕಾರಿ ದೂರವಾಗುತ್ತಿದೆ. ಮಾರುಕಟ್ಟೆಗೆ ಟೊಮೆಟೋ ತೀರಾ ಕಡಿಮೆ ಪೂರೈಕೆಯಾಗುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಜೂ.26ರಂದು ಚಿಲ್ಲರೆ ಮಾರುಕಟ್ಟೆಯಲ್ಲಿ ಶತಕ ದಾಟಿದ್ದ ಟೊಮೆಟೋ ಬೆಲೆ ಅಲ್ಲಿಂದ ಏರಿಕೆಯ ಹಾದಿಯಲ್ಲೇ ಇತ್ತು.
ಕಳೆದೊಂದು ವಾರದಲ್ಲಿ .90-100 ಆಸುಪಾಸಿದ್ದ ದರ ಸೋಮವಾರ ಏಕಾಏಕಿ .40-50 ಹೆಚ್ಚಳ ಕಂಡು ಗ್ರಾಹಕ ಹೌಹಾರುವಂತೆ ಮಾಡಿದೆ. ಇಷ್ಟೊಂದು ಸುದೀರ್ಘ ಕಾಲ ದರ ಏರಿಕೆ ಕಂಡುಬಂದಿರಲಿಲ್ಲ ಎಂದು ವರ್ತಕರು ತಿಳಿಸಿದರು. ಜಯನಗರ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಸೇರಿದಂತೆ ಇತರೆಡೆಗಳ ಅಂಗಡಿ ಮುಂಗಟ್ಟು, ತಳ್ಳುಗಾಡಿಯಲ್ಲಿ ಟೊಮೆಟೋ ದರ ಕೆಜಿಗೆ 135ರಿಂದ 140 ಇದ್ದರೆ, ಎರಡನೇ ದರ್ಜೆಯ ಟೊಮೆಟೋ 100ರಿಂದ 120 ಇತ್ತು. ಮಾಲ್‌ಗಳಲ್ಲಿ ಇದಕ್ಕಿಂತ ಸರಾಸರಿ 5 ಹೆಚ್ಚು ದರವಿತ್ತು.
ಹೊಸ ತಾಲೂಕುಗಳಿಗೆ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಬದ್ಧ: ಸಚಿವ ಕೃಷ್ಣ ಬೈರೇಗೌಡ
ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಇದ್ದ ಕಾರಣ ಖರೀದಿಯನ್ನೇ ಮಾಡಿಲ್ಲ ಎಂದು ವ್ಯಾಪಾರಿಗಳು ಹೇಳಿದರು. ನಗರದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ 22 ಕೆ.ಜಿ. ಬಾಕ್ಸ್‌ಗೆ 3000 ವರೆಗೆ ಬೆಲೆಯಿತ್ತು. ಬೆಂಗಳೂರಿಗೆ ಸಾಧಾರಣ ದಿನಗಳಲ್ಲಿ ಸರಿಸುಮಾರು 800-1000 ಕ್ವಿಂಟಲ್ ಟೊಮೆಟೋ ಬೇಕಾಗುತ್ತದೆ. ಆದರೆ ಸೋಮವಾರ ಬಿನ್ನಿಪೇಟೆಗೆ ಕೇವಲ 196 ಕ್ವಿಂಟಲ್ ಹಾಗೂ ದಾಸನಪುರ ಮಾರುಕಟ್ಟೆಗೆ 200 ಕ್ವಿಂಟಲ್ ಟೊಮೆಟೋ ಬಂದಿದೆ. ಇದು ಮಹಾನಗರಕ್ಕೆ ಯಾವ ಲೆಕ್ಕಕ್ಕೂ ಸಾಲುವುದಿಲ್ಲ ಎಂದು ಎಪಿಎಂಸಿ ವಿಶೇಷ ಕಾರ್ಯದರ್ಶಿ ಬಿ.ರಾಜಣ್ಣ ಹೇಳುತ್ತಾರೆ.
ನಗರಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರಿನಿಂದ ಟೊಮೆಟೋ ಬರುವುದು ನಿಂತುಹೋಗಿದೆ. ಆ.15 ಬಳಿಕ ನಾಸಿಕ್‌ನಿಂದ ರಾಜ್ಯಕ್ಕೆ ಟೊಮೆಟೋ ಆಮದಾಗುವುದು ಬಹುತೇಕ ಅನುಮಾನ. ಹೊಲಗಳಲ್ಲಿ ಟೊಮೆಟೋ ಕಾಯಿ ಇರುವಾಗಲೇ ವರ್ತಕರು, ಕೆಲವು ಮಾಲ್‌ಗಳ ಮಧ್ಯವರ್ತಿಗಳು ರೈತರ ಬಳಿ ತೆರಳಿ ತೆಗೆದುಕೊಂಡು ಬರುತ್ತಿದ್ದಾರೆ. ಟೊಮೆಟೋದ ಬೃಹತ್ ಮಾರುಕಟ್ಟೆಕೋಲಾರ ಎಪಿಎಂಸಿಯಲ್ಲೇ ಸುಮಾರು 184 ಬಾಕ್ಸ್‌ಗಳು (15 ಕೆ.ಜಿ.) .2700ಕ್ಕೆ ಮಾರಾಟವಾಗಿದೆ. ಗ್ರೇಡ್ 3 ಹಾಗೂ ನಾಲ್ಕನೆ ಗ್ರೇಡ್ ಟೊಮೆಟೋಗೆ 800ರು. ನಿಂದ 2500 ರು. ಸರಾಸರಿ ದರವಿತ್ತು ಎಂದು ಕಾಯದರ್ಶಿ ಎನ್.ವಿಜಯಲಕ್ಷ್ಮೇ ತಿಳಿಸಿದರು.
ಹಾಪ್‌ಕಾಮ್ಸ್ ನಿರ್ದೇಶಕ ಉಮೇಶ್ ಮಿರ್ಜಿ ಮಾತನಾಡಿ, ಸೋಮವಾರ ಬೆಂಗಳೂರಿಗಾಗಿ 3.5 ಟನ್‌ನಷ್ಟುಟೊಮೆಟೋ ತರಿಸಿಕೊಂಡಿದ್ದೇವೆ. ಇವು ಬಾಕ್ಸ್‌ಗೆ 2,700 ಇತ್ತು. ಸಹಜವಾಗಿ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆದರ ವಿಶ್ಲೇಷಿಸಿಕೊಂಡು ಹಾಪ್‌ಕಾಮ್ಸ್ ತರಕಾರಿ ದರ ನಿಗದಿ ಮಾಡುತ್ತದೆ. ಅದರಂತೆ ಟೊಮೆಟೋ ಕೆ.ಜಿ.ಗೆ 157 ನಿಗದಿ ಮಾಡಿದ್ದೇವೆ. ನಮ್ಮಲ್ಲಿ ದರ ಇಷ್ಟೊಂದು ಏರಿಕೆಯಾಗಿರುವುದು ಇದೇ ಮೊದಲು ಎಂದು ಹೇಳಿದರು. ರಾಜ್ಯದಲ್ಲಿ ಟೊಮೆಟೋದ ಹೊಸ ಬೆಳೆ ಇನ್ನು 40 ದಿನಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಟೊಮೆಟೋ ಬಂದ ಬಳಿಕವೇ ದರ ಇಳಿಕೆಯಾಗಬಹುದು ಎಂದು ಎಪಿಎಂಸಿ ವರ್ತಕರು ತಿಳಿಸಿದರು.
ಆಗಸ್ಟ್ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್
ಹುಣಸೆಹಣ್ಣು ಹುಳಿ: ಈ ನಡುವೆ ಹುಣಸೆ ಹಣ್ಣಿನ ಬೆಲೆ ಕೂಡ ಹೆಚ್ಚಾಗುತ್ತಿದೆ. 8-10 ದಿನಗಳ ಹಿಂದೆ 170ರಷ್ಟಿದ್ದ ಹುಣಸೆಹಣ್ಣಿನ ದರ ಈಗ 200 ತಲುಪಿದೆ. ಟೊಮೆಟೋಗೆ ಪರ್ಯಾಯವಾಗಿದ್ದ ಹುಣಸೆ ದರ ಹೆಚ್ಚಿರುವುದು ಗೃಹಿಣಿಯರ ಚಿಂತೆಗೆ ಕಾರಣವಾಗಿದೆ.
