Asianet Suvarna News Asianet Suvarna News

ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ

 ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಿವಿಧ ಸಂಘಟನೆಗಳ ಮೇಲೆ ಸಾರ್ವಜನಿಕ ಪ್ರತಿಭಟನೆ ವೇಳೆ ದಾಖಲಾಗಿದ್ದ ಪ್ರಕರಣ ಕುರಿತು ಚರ್ಚಿಸಿ 14 ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ತೀರ್ಮಾನಿಸಲಾಯಿತು.
 

14 Cases against Kannada protesters revoked.
Author
Bengaluru, First Published Oct 5, 2018, 9:16 AM IST
  • Facebook
  • Twitter
  • Whatsapp

ಬೆಂಗಳೂರು :  ಸಾರ್ವಜನಿಕ ಪ್ರತಿಭಟನೆ ಸೇರಿದಂತೆ ವಿವಿಧ ಘಟನೆಯಲ್ಲಿ ರೈತ ಸಂಘ, ರಕ್ಷಣಾ ವೇದಿಕೆ ಸೇರಿದಂತೆ ಇತರರ ವಿರುದ್ಧ ದಾಖಲಾಗಿರುವ 14 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಿವಿಧ ಸಂಘಟನೆಗಳ ಮೇಲೆ ಸಾರ್ವಜನಿಕ ಪ್ರತಿಭಟನೆ ವೇಳೆ ದಾಖಲಾಗಿದ್ದ ಪ್ರಕರಣ ಕುರಿತು ಚರ್ಚಿಸಿ 14 ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಬೆಳಗಾವಿಯಲ್ಲಿ ಶಿವಾಜಿ ಜಯಂತಿ ವೇಳೆ ನಡೆದ ಸಂಘರ್ಷ, ತುಮಕೂರಿನಲ್ಲಿ ಕಸದ ವಿಷಯಕ್ಕೆ ಸಂಬಂಧಿಸಿದ ಗಲಾಟೆ ಸೇರಿದಂತೆ ರೈತ ಸಂಘ, ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿದ ಸಾರ್ವಜನಿಕ ಪ್ರತಿಭಟನೆ ವೇಳೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಕರಣಗಳನ್ನು ಹಿಂಪಡೆಯುವಂತೆ ಮನವಿಗಳನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ 14 ಪ್ರಕರಣಗಳನ್ನು ಕೈ ಬಿಡಲು ಒಪ್ಪಿಗೆ ನೀಡಲಾಯಿತು ಎಂದರು.

ತೆಂಗು ಬೆಳೆಗಾರರಿಗೆ ಪರಿಹಾರ:  ತೆಂಗು ಬೆಳಗಾರರಿಗೆ ರಾಜ್ಯ ಸರ್ಕಾರವೇ 178 ಕೋಟಿ ರು. ಪರಿಹಾರ ನೀಡಲು ತೀರ್ಮಾನಿಸಿದೆ. 2015-16 ಮತ್ತು 2016-17ನೇ ಸಾಲಿನಲ್ಲಿ ಬರ ಪರಿಸ್ಥಿತಿಯಿಂದಾಗಿ ತೆಂಗು ಬೆಳೆ ನಾಶವಾಗಿದ್ದು, ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಕೇಂದ್ರದ ಮಾರ್ಗಸೂಚಿ ಪ್ರಕಾರವೇ ಪರಿಹಾರ ನೀಡುವಂತೆ ಮನವಿ ಮಾಡಲಾಗಿದ್ದರೂ ಕೇಂದ್ರದಿಂದ ಯಾವುದೇ ರೀತಿಯಿಂದಲೂ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ. ತೆಂಗು ಬೆಳೆ ಹಾನಿಗೊಳಾಗಿ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ರಾಜ್ಯ ಸರ್ಕಾರವು 178 ಕೋಟಿ ರು. ಪರಿಹಾರ ನೀಡಲಿದೆ ಎಂದು ಹೇಳಿದರು.

44,547 ಹೆಕ್ಟೇರ್‌ ಪ್ರದೇಶ ಹಾನಿಯಾಗಿದ್ದು, 44.55 ಲಕ್ಷ ಮರಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ. ಪರಿಹಾರವನ್ನು ತೋಟಗಾರಿಕೆ ಇಲಾಖೆಯು ಅನುಷ್ಠಾನಗೊಳಿಸಲಿದೆ. ತೋಟಗಾರಿಕೆ ಇಲಾಖೆಯು ಮಾನದಂಡ ರೂಪಿಸಲಿದ್ದು, ಹೆಕ್ಟೇರ್‌ಗೆ 18 ಸಾವಿರ ರು. ನೀಡಬೇಕೇ ಅಥವಾ ಪ್ರತಿ ಮರಕ್ಕೆ 400 ರು. ನೀಡಬೇಕೇ? ಎಂಬುದನ್ನು ಅಧ್ಯಯನ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾವುದು ಎಂದು ವಿವರಿಸಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶದ ಯಾದಗಿರಿ, ಹುಮ್ನಾಬಾದ್‌, ಲಿಂಗಸುಗೂರು ಮತ್ತು ಹೊಸಪೇಟೆಯಲ್ಲಿ ಉದ್ಯೋಗ ಕೌಶಲ್ಯ ತರಬೇತಿಗಾಗಿ ಜಿಟಿಟಿಸಿ ಕೇಂದ್ರಗಳಲ್ಲಿ ಉತ್ಕೃಷ್ಟಮಟ್ಟಉದ್ಯೋಗ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಫ್ರಾನ್ಸ್‌ ಮೂಲದ ಡೂಸೋ ಕಂಪನಿಯ ಸಹಯೋಗದಲ್ಲಿ ಪ್ರಾರಂಭಿಸಲಾಗುವುದು. 224 ಕೋಟಿ ರು. ವೆಚ್ಚದ ಪೈಕಿ ರಾಜ್ಯ ಸರ್ಕಾರವು 20.7 ಕೊಟಿ ರು. ವೆಚ್ಚ ಮಾಡಲಿದ್ದು, ಡುಸೋ ಕಂಪನಿಯು 203 ಕೋಟಿ ರು. ವೆಚ್ಚ ಭರಿಸಲಿದೆ ಎಂದು ತಿಳಿಸಿದರು.

ಪ್ರಸ್ತಾವನೆ ಹಿಂಪಡೆಯಲು ನಿರ್ಧಾರ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವಧಿಯಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಆಡಳಿತ ಸದಸ್ಯ ಸ್ಥಾನಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ವಿ.ಉಮೇಶ್‌ ನೇಮಕ ಮಾಡಲು ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂಪಡೆಯಲು ಸರ್ಕಾರ ನಿರ್ಧಾರ ಕೈಗೊಂಡಿದೆ. 2016ರಲ್ಲಿ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಸ್ತಾವನೆ ಸಲ್ಲಿಸಿ ಎರಡು ವರ್ಷ ಕಳೆದರೂ ಯಾವುದೇ ಪ್ರಗತಿಯಾಗದ ಕಾರಣ ಪ್ರಸ್ತಾವನೆಯನು ಹಿಂಪಡೆದು ಹೊಸ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ಶೀಘ್ರದಲ್ಲಿಯೇ ಹೊಸ ಹೆಸರನ್ನು ಸೂಚಿಸಿ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ಹೇಳಿದರು.

ಸಚಿವ ಸಂಪುಟದಲ್ಲಿ ಕೈಗೊಂಡ ಇತರೆ ನಿರ್ಣಯಗಳು

ರಕ್ಷಣಾ ಇಲಾಖೆಯೊಂದಿಗೆ ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿ 45,165 ಚ.ಮೀ. ಭೂಮಿಯನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಗೆ.

ಹಾಸನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿವಿಧ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಾಗಿ 50 ಕೋಟಿ ರು. ನೀಡಲು ಅನುಮೋದನೆ

ಹಾಸನ ವೈದ್ಯ ಕಾಲೇಜು ಆವರಣದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು 129.75 ಕೋಟಿ ರು. ಅಂದಾಜು ಮೊತ್ತದಲ್ಲಿ ಸ್ಥಾಪನೆಗೆ ಒಪ್ಪಿಗೆ

ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕ್ಯಾಥ್‌ ಲ್ಯಾಬ್‌ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕವನ್ನು 725 ಲಕ್ಷ ರು.ಅಂದಾಜು ಮೊತ್ತದಲ್ಲಿ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 781 ಲಕ್ಷ ರು. ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ.

ಬಿಡಿಎ ಸಹಾಯಕ ಎಂಜಿನಿರ್‌ಗಳಾದ ರೂಪಾ, ನಾಗರಾಜು ಅವರ ವಿರುದ್ಧದ ಲೋಕಾಯುಕ್ತ ಶಿಫಾರಸನ್ನು ತಿರಸ್ಕರಿಸಲು ನಿರ್ಧಾರ.

108 ಅಂಬ್ಯುಲೆನ್ಸ್‌ ಸೇವೆಗೆ 2009ರಲ್ಲಿ ಮಾಡಿಕೊಳ್ಳಲಾಗಿದ್ದ ಕರಾರನ್ನು ಮುಂದಿನ ಒಂದು ವರ್ಷದ ಅವಧಿಯೊಳಗೆ ಹೊಸ ಟೆಂಡರ್‌ ಪ್ರಕ್ರಿಯೆ ಮುಗಿಸಲು ಒಪ್ಪಿಗೆ ಮತ್ತು ಹೊಸ ಟೆಂಡರ್‌ ಪ್ರಕ್ರಿಯೆ ಮುಗಿಯುವವರೆಗೆ ಪ್ರಸ್ತುತ ಕರಾರನ್ನು ಮುಂದುವರಿಸಲು ಅನುಮೋದನೆ.

ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಮಾಸಾಶನ 

ಇನ್ನು ಮುಂದೆ ವನ್ಯ ಜೀವಿಗಳಿಂದ ಮೃತರಾದ ಕುಟುಂಬದವರಿಗೆ ಪ್ರತಿ ತಿಂಗಳು ಎರಡು ಸಾವಿರ ರು. ಮಾಸಾಶನ ಸಿಗಲಿದೆ.

ಈ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ನಂತರ ಸುದ್ದಿಗಾರರಿಗೆ ವಿವರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಈಗಾಗಲೇ ವನ್ಯಜೀವಿಗಳಿಂದ ಮೃತರಾದ ಕುಟುಂಬಗಳಿಗೆ 5 ಲಕ್ಷ ರು. ಪರಿಹಾರವಾಗಿ ನೀಡಲಾಗುತ್ತಿದೆ. ಇದರ ಜತೆಗೆ ಈಗ ಎರಡು ಸಾವಿರ ಮಾಸಾಶನವನ್ನು ಸಹ ನೀಡಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios