ಬೆಂಗಳೂರು :  ಮುಂಗಾರು ಹಂಗಾಮಿನ ಬಳಿಕ ಹಿಂಗಾರು ಹಂಗಾಮಿನಲ್ಲೂ ರಾಜ್ಯದ ರೈತರು ಭಾರಿ ನಷ್ಟಅನುಭವಿಸಿದ್ದಾರೆ. ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ತೀವ್ರವಾದ ಮಳೆ ಕೊರತೆಯಿಂದಾಗಿ ಕೃಷಿ, ತೋಟಗಾರಿಕೆ ವಲಯದಲ್ಲಿ ಸುಮಾರು 1300 ಕೋಟಿ ರುಪಾಯಿ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ತಿಂಗಳಾಂತ್ಯದೊಳಗೆ ಬರ ಹಾನಿ ವಿವರಗಳನ್ನು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಕಂದಾಯ ಇಲಾಖೆಗೆ ಸಲ್ಲಿಸುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ಮುಂಗಾರು ಮತ್ತು ಹಿಂಗಾರು ಹಂಗಾಮು ಒಟ್ಟು ಸೇರಿ 156 ತಾಲೂಕಿಗಳಿಗೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ಈಗಾಗಲೇ ಘೋಷಿಸಿದೆ. ಆದರೆ ಸರ್ಕಾರದ ಲೆಕ್ಕಾಚಾರಕ್ಕಿಂತ ಅಧಿಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಮೇ ತಿಂಗಳಾಂತ್ಯದೊಳಗೆ ಅದರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಎನ್ನಲಾಗಿದೆ. ಪ್ರಸ್ತುತ ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಶು ಸಂಗೋಪನಾ ಇಲಾಖೆಗಳು ನಡೆಸುತ್ತಿರುವ ಬರ ಪರಿಸ್ಥಿತಿ ಸರ್ವೆ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಕಂದಾಯ ಇಲಾಖೆಗೆ ವರದಿ ಸಲ್ಲಿಕೆಯಾಗಲಿದೆ.

ಶೇ.50ರಷ್ಟುಮಳೆ ಕೊರತೆ :  ಪ್ರಸ್ತುತ ಕೃಷಿ ಇಲಾಖೆಯ ಹಿಂಗಾರು ಹಂಗಾಮಿನ ಬರ ಪರಿಸ್ಥಿತಿ, ಬೆಳೆ ನಷ್ಟದ ಸರ್ವೆ ಅಂತಿಮ ಹಂತಕ್ಕೆ ಬಂದಿದ್ದು, ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಸುಮಾರು 1250 ಕೋಟಿ ರು.ಗಳಷ್ಟುಬೆಳೆಹಾನಿ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಲಾಗಿದೆ. ಹಿಂಗಾರು ಹಂಗಾಮಿನಲ್ಲಿ (ಅಕ್ಟೋಬರ್‌ 1- ಡಿಸೆಂಬರ್‌ 31ರವರೆಗೆ) 188 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಬಿದ್ದಿರುವ ಮಳೆ ಪ್ರಮಾಣ ಕೇವಲ 96 ಮಿ.ಮೀ ಮಾತ್ರ. ಸುಮಾರು ಶೇ.50ರಷ್ಟುಮಳೆ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್‌ ಮಾಹಿತಿ ನೀಡಿದ್ದಾರೆ.

ಸುಮಾರು 16ರಿಂದ 18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನಷ್ಟಆಗುವ ಸಾಧ್ಯತೆ ಇದೆ. ದಕ್ಷಿಣ ಕರ್ನಾಟಕ್ಕಿಂತ ಉತ್ತರ ಕರ್ನಾಟಕದಲ್ಲಿ ಬೆಳೆ ನಷ್ಟದ ಪ್ರಮಾಣ ಹೆಚ್ಚಾಗಿದೆ. ಬಳ್ಳಾರಿ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ, ಗದಗ, ಹಾವೇರಿ, ಬೀದರ್‌, ಧಾರವಾಡ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಅಧಿಕ ಬೆಳೆ ನಷ್ಟವಾಗಿದೆ. ಹಸಿ ಕಡಲೆ, ಜೋಳ, ಸೂರ್ಯಕಾಂತಿ, ಕುಸುಬೆ, ಹುರುಳಿ ಮುಂತಾದ ಪ್ರಮುಖ ಬೆಳೆಗಳು ಹಾನಿಗೊಳಗಾಗಿವೆ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

42 ಕೋಟಿ ರು. ನಷ್ಟ :  ಚಿತ್ರದುರ್ಗ, ದಾವಣಗೆರೆ, ವಿಜಯಪುರ, ತುಮಕೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಸುಮಾರು 38ರಿಂದ 42 ಕೋಟಿ ರು.ಗಳಷ್ಟುತೋಟಗಾರಿಕಾ ಬೆಳೆ ಹಾನಿ ಸಂಭವಿಸಿದೆ. 20ರಿಂದ 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಡಿಕೆ, ತೆಂಗು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೋ ಸೇರಿದಂತೆ ವಿವಿಧ ತರಕಾರಿ, ವಾಣಿಜ್ಯ ಬೆಳೆಗಳು ನಷ್ಟವಾಗಿವೆ. ಮುಂಗಾರಿನಲ್ಲಿ 1.94 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ನಷ್ಟವಾಗಿತ್ತು. ಇದರಿಂದ 115 ಕೋಟಿ ರು.ಗಳಿಗೂ ಅಧಿಕ ನಷ್ಟವಾಗಿತ್ತು ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಅನೇಕ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗಿದ್ದು, ಬೇಸಿಗೆ ಆಗಮಿಸುವ ಮೊದಲೇ ಜಾನುವಾರುಗಳಿಗೆ ಮೇವು ಕೊರತೆ, ಕೆರೆ-ಕಟ್ಟೆಗಳಲ್ಲಿ ನೀರಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬೆಳೆ ಹಾನಿಯೂ ಗ್ರಾಮೀಣರ ಬದುಕನ್ನು ದುಸ್ತರವಾಗಿಸುವ ಸೂಚನೆ ಇದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಸಮಸ್ಯೆಯುಂಟಾಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 26.18 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ. ಇದರಿಂದ 1783.89 ಕೋಟಿ ರೂ.ಗಳಷ್ಟುಮೌಲ್ಯದ ಬೆಳೆ ಹಾನಿಯಾಗಿತ್ತು. ಇದೀಗ ಹಿಂಗಾರು ಹಂಗಾಮಿನ ಬೆಳೆ ಹಾನಿ ಕುರಿತು ಸರ್ವೆ ನಡೆಯುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ. 1250 ಕೋಟಿ ರೂ.ಗಳಷ್ಟುಬೆಳೆ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಶ್ರೀನಿವಾಸ್‌, ನಿರ್ದೇಶಕರು, ಕೃಷಿ ಇಲಾಖೆ

ಜನವರಿ ಅಂತ್ಯದೊಳಗೆ ನಷ್ಟದ ಪ್ರಮಾಣದ ಕುರಿತು ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಒಂಬತ್ತು ಜಿಲ್ಲೆಗಳಲ್ಲಿ 42 ಕೋಟಿ ರು. ತೋಟಗಾರಿಕೆ ಬೆಳೆ ನಷ್ಟವಾಗಿದ್ದು, ಅದರ ವರದಿ ತಯಾರಿಸಲಾಗುತ್ತಿದೆ. ಶೀಘ್ರವೇ ವರದಿಯನ್ನುಸರ್ಕಾರಕ್ಕೆ ಸಲ್ಲಿಸಲಾಗುವುದು. ಆ ನಂತರವೇ ನಷ್ಟಪರಿಹಾರಕ್ಕೆ ಸಂಬಂಧಿಸಿದಂತೆ ನಿರ್ಧಾರವಾಗುವ ಸಾಧ್ಯತೆ ಇದೆ.

- ವೈ.ಎಸ್‌.ಪಾಟೀಲ್‌, ನಿರ್ದೇಶಕರು, ತೋಟಗಾರಿಕೆ ಇಲಾಖೆ

ವರದಿ :  ಸಂಪತ್‌ ತರೀಕೆರೆ