ಬೆಂಗಳೂರು(ಜ.01): 2020 ಯಾರಿಗೂ ಸುಖ-ಸಂತೋಷ ತರಲಿಲ್ಲ. ಕಷ್ಟನಷ್ಟ, ರೋಗರುಜಿನ, ಭಯ ಆತಂಕಗಳ ವರ್ಷವಾಗಿಯೇ ಅದು ಕೊನೆಗೊಂಡಿತು. ವರುಷದ ಕೊನೆಯಲ್ಲೂ ಕತ್ತಲು ಪೂರ್ತಿ ಮರೆಯಾಗಿರಲಿಲ್ಲ. ಆಶಾಕಿರಣವೂ ಕಾಣಿಸಲಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ಹೊಸ ವರ್ಷದ ಜೊತೆ ಕೆಲವು ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕಿದೆ. 2021ರ ಮುಂದೆ ನಾವಿಡುತ್ತಿರುವ ಅಹವಾಲುಗಳು ಇವು.

1.ಕಳೆದ ವರ್ಷದಂತೆ ಕಾಡಬೇಡ: ನಾವು ಎಚ್ಚರತಪ್ಪಿದರೆ ನೀನು ಕ್ರೂರಿಯಾಗಬಲ್ಲೆ ಎನ್ನುವುದನ್ನು ಕಳೆದ ವರ್ಷ ತೋರಿಸಿಕೊಟ್ಟೆ. ಈ ವರ್ಷವೂ ಅದನ್ನೇ ಮಾಡಬೇಡ. ನಮ್ಮ ತಪ್ಪನ್ನು ನಾವು ತಿದ್ದಿಕೊಳ್ಳುತ್ತೇವೆ. ನಿನ್ನ ವರಸೆಯನ್ನು ನೀನು ಬದಲಾಯಿಸಿಕೋ. ಈ ವರ್ಷವಾದರೂ ಒಳ್ಳೆಯದನ್ನೇ ಮಾಡು.

2.ಮನೆಯೆಂಬ ಜೈಲಿಗೆ ಹಾಕಬೇಡ: ಕಳೆದ ವರ್ಷವಿಡೀ ನೀನು ಮಕ್ಕಳಂಥ ಮಕ್ಕಳನ್ನೂ ವಾಕಿಂಗ್‌ ಹೋಗುವ ಹಿರಿಯರನ್ನೂ ಮನೆಯೆಂಬ ಜೈಲಿನಲ್ಲಿ ಬಂಧಿಸಿಟ್ಟೆ. ಯಾರೋ ಮಾಡಿದ ತಪ್ಪಿಗೆ ಮಕ್ಕಳಿಗೇಕೆ ಶಿಕ್ಷೆ ಕೊಟ್ಟೆ. ಅವರನ್ನು ಅವರ ಪಾಡಿಗೆ ಬಿಡು. ಸಹಜ ಸಂತೋಷಗಳನ್ನು ಆನಂದಿಸುತ್ತಾ ಅವರು ಖುಷಿಖುಷಿಯಾಗಿರಲಿ.

3. ಸಂಭ್ರಮಗಳನ್ನು ಕಿತ್ತುಕೊಳ್ಳಬೇಡ: ಎಲ್ಲ ದುಡಿಮೆಯ ನಡುವೆ ಒಂದು ಉಲ್ಲಾಸ ಬೇಕೇ ಬೇಕು. ಹುಟ್ಟುಹಬ್ಬ, ಮದುವೆ, ನಾಮಕರಣ, ಸೀಮಂತ- ಹೀಗೆ ನಮ್ಮ ನಮ್ಮ ಸಂಭ್ರಮಗಳನ್ನು ನಮಗೆ ವಾಪಸ್ಸು ಕೊಡು.

ದೀಪಿಕಾ, ಪ್ರಿಯಾಂಕ, ಶಾರುಕ್- ಹೊಸ ವರ್ಷಕ್ಕೆ ಇವರ ರೆಸಲ್ಯೂಶನ್ ಏನು ಗೊತ್ತಾ?

4. ಪ್ರವಾಸಭಾಗ್ಯ ಕರುಣಿಸು: ಇಡೀ ವರ್ಷ ಇದ್ದಲ್ಲೇ ಇರುವಂತೆ ಮಾಡಿದ್ದು ತಪ್ಪಲ್ಲವೇ? ಈ ವರ್ಷವಾದರೂ ಕಾಲಿಗೆ ಚಕ್ರ ಕಟ್ಟು. ತಿರುಗಾಡಲು ಬಿಡು. ಉಸಿರಿಗೆ ಅಭಯ ಕೊಡು. ಸ್ಪರ್ಶಕ್ಕೆ ನಿರಾತಂಕ ಕೊಡು.

5. ಕೊನೆಯ ಸಲ ಮುಖ ನೋಡುವ ಸ್ವಾತಂತ್ರ್ಯ ಕೊಡು: ನಮ್ಮ ಆತ್ಮೀಯರು ಅಗಲಿದಾಗಲೂ ಅವರ ಅಂತಿಮ ದರ್ಶನಕ್ಕೆ ನೀನು ಅವಕಾಶ ಕೊಡಲೇ ಇಲ್ಲ. ಹೋದ ಹಿರಿಯರ ಮುಖವನ್ನು ಕೊನೆಯ ಸಲ ನೋಡಲೂ ಆಗಲಿಲ್ಲ. ಈ ಸಲ ಅಂಥ ಶಿಕ್ಷೆ ಬೇಡ.

6. ನೌಕರಿಗೆ ಮತ್ತೆ ಸೇರಿಸಿಕೋ: ದುಡಿಮೆಯಲ್ಲೇ ಸುಖ ಕಂಡುಕೊಂಡ ಲಕ್ಷಾಂತರ ಕುಟುಂಬಳಿಗೆ ಕನಿಷ್ಠ ದುಡಿಯಲಿಕ್ಕಾದರೂ ಬಿಡು. ಮಕ್ಕಳು ಹಸಿದಿರುವಂತೆ ಮಾಡದಿರು.

7. ಸ್ಕೂಲಿಗೆ ಕಳಿಸು, ಆನ್‌ಲೈನ್‌ ಮುಗಿಸು: ಮನೆಯೇ ಮೊದಲ ಪಾಠಶಾಲೆ ನಿಜ. ಹಾಗಂತ ಮಕ್ಕಳು ಮನೆಯಲ್ಲೇ ಇರಬೇಕೇ? ಕಂಪ್ಯೂಟರ್‌ ನೋಡುತ್ತಾ ಕಣ್ಣು ಹಾಳುಮಾಡಿಕೊಳ್ಳಬೇಕೇ? ಅವರು ಹಾಯಾಗಿ ಶಾಲೆಗೆ ಹೋಗಲಿ, ಆಟದ ಬಯಲಲ್ಲಿ ಆಡಲಿ.

8. ಹಿರಿಯಪ್ರಜೆಗಳ ಮೇಲೆ ಕರುಣೆ ಇರಲಿ: ಅರವತ್ತು ದಾಟಿದ ನಿವೃತ್ತರಿಗೆ ಒಳಗೂ ಕಷ್ಟ, ಹೊರಗೂ ಕಷ್ಟ. ಅವರಿಗೆ ಕೈ ಕಾಲು ಆಡಿದರೇನೇ ಆರೋಗ್ಯ. ಅವರ ವಾಕಿಂಗಿಗೆ, ಗೆಳೆಯರ ಭೇಟಿಗೆ, ಲಾಫಿಂಗ್‌ ಥೆರಪಿಗೆ ಅಡ್ಡಿ ಮಾಡಬೇಡ.

9. ವಿಶ್ವಮಾನವರಾಗಲು ಬಿಡು: ಗಡಿರೇಖೆಗಳು ಅಳಿಸಿಹೋಗಿವೆ. ವಿಶ್ವವೇ ಒಂದಾಗಿದೆ ಅನ್ನುತ್ತಿದ್ದೆವು. ಕಳೆದ ವರ್ಷ ಮತ್ತೆ ದೇಶಗಳು ದೂರದೂರಾದವು. ಗೋಡೆಗಳನ್ನು ಕೆಡಹಿ ಸೇತುವೆಗಳ ನಿರ್ಮಿಸು. ಸಾಕಾಗಿದೆ ಈ ಅಂತರ.

10. ಮುಖವಾಡಗಳ ಕಳಚು: ಮುಖವಾಡದ ಸಹವಾಸ ಸಾಕಾಗಿದೆ. ಎಲ್ಲರ ಮುಖಗಳನ್ನೂ ನೋಡಬೇಕಾಗಿದೆ. ನಮ್ಮನಮ್ಮ ನಿಜ ಮುಖಗಳನ್ನು ತೋರಿಸಬೇಕಾಗಿದೆ. ಈ ವರ್ಷವಾದರೂ ಮುಖಮುಚ್ಚಿಕೊಂಡು ಓಡಾಡದಂತೆ ಮಾಡು.

11. ಹೆದರಿಸಬೇಡ, ಪ್ರೀತಿಸು: ವಿಚಿತ್ರ ಕಾಯಿಲೆಗಳ ತರಬೇಡ. ಸತ್ಪಾತ್ರರನ್ನು ಕಾಲನ ವಶಕ್ಕೆ ಕೊಡಬೇಡ. ಜೀವಿಸುವ ಆಶೆಯುಳ್ಳವರ ಹೆದರಿಸಬೇಡ. ನಾವು ಬದುಕನ್ನು ಪ್ರೀತಿಸುವಷ್ಟೇ ನೀನೂ ನಮ್ಮನ್ನು ಪ್ರೀತಿಸು.