ರಾಜ್ಯದಲ್ಲಿ 11 ಕೋಟಿ ಡೋಸ್ ಲಸಿಕೆ: ಮಹತ್ವದ ಮೈಲಿಗಲ್ಲು ದಾಟಿದ ಕೋವಿಡ್ ವ್ಯಾಕ್ಸಿನ್ ಅಭಿಯಾನ
* 5.45 ಕೋಟಿ ಮೊದಲ ಡೋಸ್
* 5.28 ಕೋಟಿ ಎರಡನೇ ಡೋಸ್
* 26 ಲಕ್ಷ ಬೂಸ್ಟರ್ ಡೋಸ್
ಬೆಂಗಳೂರು(ಜೂ.12): ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆಯು ಶನಿವಾರ 11 ಕೋಟಿ ಡೋಸ್ ಗಡಿ ದಾಟಿದೆ. ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೊರೋನಾ ಲಸಿಕೆ ಅಭಿಯಾನದಲ್ಲಿ ರಾಜ್ಯ ಪ್ರಮುಖ ಮೈಲಿಗಲ್ಲು ಮುಟ್ಟಿದೆ. ಈವರೆಗೂ 5.45 ಕೋಟಿ ಮೊದಲ ಡೋಸ್, 5.28 ಕೋಟಿ ಎರಡನೇ ಡೋಸ್, 26 ಲಕ್ಷ ಮುನ್ನೆಚ್ಚರಿಕಾ ಡೋಸ್ ಸೇರಿ ಒಟ್ಟಾರೆ 11 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಇದಕ್ಕೆ ಕಾರಣರಾದ ನಿಸ್ವಾರ್ಥ ಮತ್ತು ನಿರಂತರ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ಹಾಗೂ ಅಭಿಯಾನಕ್ಕೆ ಸಹಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ಕೋವಿನ್ ಪೋರ್ಟಲ್ ಮಾಹಿತಿಯಂತೆ, 11 ಕೋಟಿ ಡೋಸ್ ಪೈಕಿ 8.84 ಕೋಟಿ ಡೋಸ್ ಕೋವಿಶೀಲ್ಡ್, 1.82 ಕೋಟಿ ಡೋಸ್ ಕೋವ್ಯಾಕ್ಸಿನ್, 32.9 ಲಕ್ಷ ಡೋಸ್ ಕೋರ್ಬಿವಾಕ್ಸ್, 1.14 ಲಕ್ಷ ಡೋಸ್ ಸ್ಫುಟ್ನಿಕ್, 294 ಡೋಸ್ ಕೋವೋವಾಕ್ಸ್ ವಿತರಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ 1.6 ಕೋಟಿ ಡೋಸ್, 45-59 ವರ್ಷದವರಿಗೆ 2.39 ಕೋಟಿ ಡೋಸ್, 18-44 ವರ್ಷದವರಿಗೆ 6.12 ಕೋಟಿ ಡೋಸ್, 15-17 ವರ್ಷದವರಿಗೆ 49.9 ಲಕ್ಷ ಡೋಸ್, 12-14 ವರ್ಷದವರಿಗೆ 32.9 ಕೋಟಿ ಡೋಸ್ ನೀಡಲಾಗಿದೆ.
Covid Crisis: ಕರ್ನಾಟಕದಲ್ಲಿ 4ನೇ ಅಲೆ ಭೀತಿ: ಸಚಿವ ಸುಧಾಕರ್ ಹೇಳಿದ್ದಿಷ್ಟು
ಸದ್ಯ ರಾಜ್ಯದಲ್ಲಿ 2746 ಸರ್ಕಾರಿ ಆಸ್ಪತೆಗಳ ಲಸಿಕಾ ಕೇಂದ್ರಗಳು, 183 ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೊರೋನಾ ಲಸಿಕೆ ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣಗೊಳಿಸಿದವರು ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದ್ದು, ಮೊದಲ ಡೋಸ್, ಎರಡನೇ ಡೋಸ್ ಕೂಡ ಲಭ್ಯವಿವೆ. ಅರ್ಹರು ಲಸಿಕೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.