ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಅಪಹರಣ/ನಾಪತ್ತೆ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಹರಣವಾದ ಮಕ್ಕಳನ್ನು ಭಿಕ್ಷಾಟನೆ ಸೇರಿ ಇನ್ನಿತರ ಕೆಲಸಗಳಿಗೆ ಬಲವಂತವಾಗಿ ದೂಡಲಾಗುತ್ತಿದೆ.
ಮಂಜುನಾಥ ಕೆ.
ಬೆಂಗಳೂರು : ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಅಪಹರಣ/ನಾಪತ್ತೆ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಹರಣವಾದ ಮಕ್ಕಳನ್ನು ಭಿಕ್ಷಾಟನೆ ಸೇರಿ ಇನ್ನಿತರ ಕೆಲಸಗಳಿಗೆ ಬಲವಂತವಾಗಿ ದೂಡಲಾಗುತ್ತಿದೆ.
ಕಳೆದ ಮೂರು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 2,748 ಗಂಡುಮಕ್ಕಳು ಮತ್ತು 6,891 ಹೆಣ್ಣು ಮಕ್ಕಳು ಸೇರಿ ಒಟ್ಟು 9,597 ಮಕ್ಕಳ ಅಪಹರಣವಾಗಿದ್ದಾರೆ ಎಂಬುದು ಪೊಲೀಸರ ಅಂಕಿ-ಅಂಶದಿಂದ ಬೆಳಕಿಗೆ ಬಂದಿದೆ. ಇದರಲ್ಲಿ 1,094 ಮಕ್ಕಳು ಇನ್ನು ಪತ್ತೆಯಾಗಿಲ್ಲ, ಅವರು ಎಲ್ಲಿದ್ದಾರೆ ಎಂಬ ಮಾಹಿತಿಯೂ ಪೊಲೀಸರಿಗೆ ಇಲ್ಲ. ಅಂದರೆ ಈ ಮಕ್ಕಳ ನಾಪತ್ತೆ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲವಾಗಿದ್ದಾರೆ.
ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚು:
ಅಪಹರಣಗೊಂಡವರ ಪೈಕಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚು. ಕಳೆದ ಮೂರು ವರ್ಷಗಳಲ್ಲಿ ಅಪಹರಣವಾಗಿರುವ ಅಂಕಿ ಅಂಶವನ್ನು ಗಮನಿಸಿದ್ದಾಗ ಗಂಡು ಮಕ್ಕಳಿಗಿಂತ ಎರಡು ಪಟ್ಟು ಜಾಸ್ತಿ ಹೆಣ್ಣುಮಕ್ಕಳ ಅಪಹರಣವಾಗಿದೆ. ಇದು ರಾಜ್ಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಪ್ರಶ್ನೆ ಮೂಡುವಂತೆ ಮಾಡಿದೆ. ಜತೆಗೆ ಪಾಲಕರ ಆತಂಕವನ್ನೂ ಹೆಚ್ಚಿಸಿದೆ.
ಭಿಕ್ಷಾಟನೆಗೆ ದೂಡುವ ಕಿರಾತಕರು:
ರಾಜ್ಯದಲ್ಲಿ ವರ್ಷವಾರು ನೋಡಿದಾಗ 2023ರಲ್ಲಿ 908, 2024ರಲ್ಲಿ 975 ಮತ್ತು 2025ರಲ್ಲಿ 865 ಸೇರಿ ಒಟ್ಟು 2748 ಗಂಡು ಮಕ್ಕಳ ಅಪಹರಣವಾಗಿದೆ. ಇದೇ ರೀತಿ 2023 ರಲ್ಲಿ 2131, 2024ರಲ್ಲಿ 2436 ಮತ್ತು 2025 ರಲ್ಲಿ 2324 ಹೆಣ್ಣು ಮಕ್ಕಳ ಅಪಹರಣವಾಗಿದೆ. ಈ ರೀತಿ ಅಪಹರಿಸಿದ ಮಕ್ಕಳನ್ನು ಹೆಚ್ಚಾಗಿ ಹೆದರಿಸಿ-ಬೆದರಿಸಿ ಬಲವಂತವಾಗಿ ಭಿಕ್ಷಾಟನೆಗೆ ದೂಡಲಾಗುತ್ತಿದೆ. ಒತ್ತಾಯ ಪೂರ್ವಕ ದುಡಿಮೆ, ಲೈಂಗಿಕ ದೌರ್ಜನ್ಯ, ಲೈಂಗಿಕ ವೃತ್ತಿ, ಭಿಕ್ಷಾಟನೆ, ಅಂಗಾಂಗ ಕಸಿಯುವಂಥ ಕಾರ್ಯಗಳಿಗೆ ಬಳಸಲಾಗುತ್ತದೆ ಎನ್ನಲಾಗಿದೆ.
ನಿಯಂತ್ರಣಕ್ಕೆ ಕ್ರಮಗಳೇನು?
ಮಕ್ಕಳ ಅಪಹರಣ ಪ್ರಕರಣಗಳು ವರದಿಯಾದ ಕೂಡಲೇ ವಿಳಂಬ ಮಾಡದೆ ಎಫ್ಐಆರ್ ದಾಖಲಿಸಲಾಗುತ್ತಿದೆ. ಕೂಡಲೇ ರಾಜ್ಯದ ಎಲ್ಲಾ ಠಾಣೆಗಳಿಗೆ ಪ್ರಕರಣದ ಆರೋಪಿ ಮತ್ತು ಅಪಹರಿಸಿರುವ ಮಗುವಿನ ಬಗ್ಗೆ ಯಾವುದೇ ಸುಳಿವು ದೊರೆತರೆ ಮಾಹಿತಿ ಪಡೆದುಕೊಳ್ಳಲು ಪಾಲಕರ ಒಪ್ಪಿಗೆ ಮೇರೆಗೆ ಪತ್ರಿಕಾ ಪ್ರಕಟಣೆ, ದೂರದರ್ಶನ, ಆಕಾಶವಾಣಿಯಲ್ಲಿ ಪ್ರಕಟಣೆ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದ ಗಡಿ ಪ್ರದೇಶಗಳಲ್ಲಿ ಮತ್ತು ಬಸ್ ನಿಲ್ದಾಣ/ರೈಲ್ವೆ ನಿಲ್ದಾಣಗಳಲ್ಲಿ ಪತ್ರಗಳನ್ನು/ಫೋಟೋಗಳನ್ನು ಅಂಟಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ರೀಜನಲ್ ಪಾಸ್‌ಪೋರ್ಟ್ ಆಫೀಸ್‌ಗೆ ನವಜಾತ ಮಕ್ಕಳಿಗೆ ಪಾಸ್ ಪೋರ್ಟ್ ಅರ್ಜಿ ಸಲ್ಲಿಸಿರುವ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.
ಲುಕ್‌ಔಟ್ ನೋಟೀಸ್ ನೀಡುವುದು, ಅಕ್ಕ-ಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ಮಕ್ಕಳ ಕುರಿತು ಹುಡುಕಾಟ ನಡೆಸಲಾಗುತ್ತದೆ. ಅಧಿಕಾರಿಗಳ ತಂಡ ರಚಿಸಿ ಎಲ್ಲಾ ಕಡೆ ಹುಡುಕಾಟ ನಡೆಸುವುದು, ಅಕ್ಕ-ಪಕ್ಕದ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಿಚಿತ ಶವಗಳ ಯುಡಿಆರ್ ಪ್ರಕರಣ ಪರಿಶೀಲಿಸುವುದು, ಜಿಲ್ಲಾ ಅಪರಾಧ ದಾಖಲಾತಿ ವಿಭಾಗಗಳಲ್ಲಿನ ವರದಿ ಪರಿಶೀಲಿಸುವುದು, ದಿನಪತ್ರಿಕೆ ಮತ್ತು ದೂರದರ್ಶನದಲ್ಲಿ ಕಾಣೆಯಾದ ಮಕ್ಕಳ ಭಾವಚಿತ್ರ ಪ್ರಸಾರ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಕ್ಕಳ ರಕ್ಷಣಾ ಪಡೆಗೆ ನಿರಂತರವಾದ ತರಬೇತಿ ನೀಡಬೇಕಿದೆ. ಇತ್ತೀಚೆಗೆ ಮಕ್ಕಳ ಮೇಲೆ ಸಾಮಾಜಿಕ ತಾಣಗಳ ಪ್ರಭಾವ ಹೆಚ್ಚಾಗಿದೆ. ಅಪರಿಚಿತರು ಆಸೆ-ಆಮಿಷವೊಡ್ಡಿದ್ದಾಗ ಮಕ್ಕಳು ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ. ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಸಹಾಯವಾಣಿಯ ಸಂಖ್ಯೆಯನ್ನು ಹೆಚ್ಚು ಪ್ರಚುರಗೊಳಿಸಬೇಕು. ಸರ್ಕಾರ ಹೆಚ್ಚು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಎನ್.ಜಿ.ಒಗಳನ್ನು ನೆರವು ಪಡೆಯಬೇಕು. ಇದರಲ್ಲಿ ಸಮಾಜದ ಜವಬ್ದಾರಿ ಮುಖ್ಯವಾಗಿದೆ.
-ನಾಗಸಿಂಹ ಜಿ ರಾವ್, ಮಕ್ಕಳ ಹಕ್ಕುಗಳ ಕಾರ್ಯಕರ್ತ
ತಲ್ಲಣ ಸೃಷ್ಟಿಸಿದ್ದ ಬಾಲಕ ನಿಶ್ಚಿತ್ ಅಪಹರಣ
13 ವರ್ಷದ ಬಾಲಕನೊಬ್ಬನನ್ನು ಅಪಹರಿಸಿ, ಆತನನ್ನು ಕೊಲೆ ಮಾಡಿದ್ದ ಘಟನೆ ಬೆಂಗಳೂರಿನಲ್ಲಿ ಕಗ್ಗಲೀಪುರದಲ್ಲಿ 2025 ರ ಜ.30ರಂದು ನಡೆದಿತ್ತು. ಹೊರಮಾವು ಸಮೀಪದ ಶಾಂತಿ ನಿಕೇತನ ಲೇಔಟ್‌ನಿಂದ ನಿಶ್ಚಿತ್‌ನನ್ನು ಅಪಹರಿಸಿದ್ದ ದುಷ್ಕರ್ಮಿಗಳು, ಬಾಲಕನ ತಂದೆಗೆ ಕರೆ ಮಾಡಿ 5 ಲಕ್ಷ ರು.ಗೆ ಬೇಡಿಕೆಯಿಟ್ಟಿದ್ದರು. ಬಾಲಕನ ತಂದೆ ಹೊರಮಾವು ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದರು. ಈ ವಿಚಾರ ತಿಳಿದ ಅಪಹರಣಕಾರರು ಬಾಲಕನನ್ನು ಕೊಂದು ಶವವನ್ನು ಕಗ್ಗಲೀಪುರದ ನಿರ್ಜನ ಪ್ರದೇಶದಲ್ಲಿ ಸುಟ್ಟು ಪರಾರಿಯಾಗಿದ್ದರು. ಬಳಿಕ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿತ್ತು.
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಅಪಹರಣವಾದವರ ಅಂಕಿ ಅಂಶ:
2023
ಪ್ರಕರಣಗಳ ವಿವರ ಗಂಡು ಮಕ್ಕಳು- ಹೆಣ್ಣು ಮಕ್ಕಳು
ಅಪಹರಣ 908 -2131
ಪತ್ತೆ ಹಚ್ಚಿದ್ದು 873 -2089
ಪತ್ತೆ ಹಚ್ಚಲು ಬಾಕಿ 35- 42
---
2024
ಪ್ರಕರಣಗಳ ವಿವರ ಗಂಡು-ಮಕ್ಕಳು- ಹೆಣ್ಣುಮಕ್ಕಳು
ಅಪಹರಣ 975 ಅಪಹರಣ 2436
ಪತ್ತೆ ಹಚ್ಚಿದ್ದು 930- 2336
ಪತ್ತೆ ಹಚ್ಚಲು ಬಾಕಿ 45- 100
-----
2025 ಗಂಡುಮಕ್ಕಳು --ಹೆಣ್ಣುಮಕ್ಕಳು
ಅಪಹರಣ 865- 2324
ಪತ್ತೆ ಹಚ್ಚಿದ್ದು 676- 1641
ಪತ್ತೆ ಹಚ್ಚಲು ಬಾಕಿ 189 -683


